ಚಿಕ್ಕಮಗಳೂರು, ಡಿಸೆಂಬರ್ 13: ಚಿಕ್ಕಮಗಳೂರು ಜಿಲ್ಲೆಯ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಜಯಂತಿ ಅಂಗವಾಗಿ ಜಿಲ್ಲೆಯ ಹಲವೆಡೆ ಇಂದಿನಿಂದ 2 ದಿನ ಮದ್ಯಮಾರಾಟ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ವಿಹೆಚ್ಪಿ ಹಾಗೂ ಬಜರಂಗದಳ ನೇತೃತ್ವದಲ್ಲಿ ದತ್ತಜಯಂತಿ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು, ಕಡೂರು, ಮೂಡಿಗೆರೆ, ಕೊಪ್ಪ, ಎನ್ಆರ್ಪುರ, ತರೀಕೆರೆ, ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧಿಸಲಾಗಿದೆ.
ಇಂದು ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ನಾಳೆ ದತ್ತ ಮಾಲಾಧಾರಿಗಳು ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದರ್ಶನ ಇರಲಿದೆ.
ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಪರಿಣಾಮ ಕಾಫಿನಾಡು ಚಿಕ್ಕಮಗಳೂರಿಗೂ ತಟ್ಟಿದೆ. ಕೊರೆಯುವ ಚಳಿ, ತುಂತುರು ಮಳೆಯಿಂದ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಭಾರೀ ಚಳಿ, ದಟ್ಟ ಮಂಜು ಆವರಿಸಿದೆ. ಇದರಿಂದಾಗಿ ದತ್ತಜಯಂತಿ ಭದ್ರತೆಗಾಗಿ ನಿಯೋಜನೆಗೊಂಡಿರುವ ಸಾವಿರಾರು ಪೊಲೀಸರು ಪರದಾಟ ಪಡುವಂತಾಗಿದೆ.
ದತ್ತಜಯಂತಿ ಭದ್ರತೆಗಾಗಿ ರಾಜ್ಯದಾದ್ಯಂತ ವಿವಿಧೆಡೆಗಳಿಂದ ಪೊಲೀಸರು ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಇದೀಗ ಚಿಕ್ಕಮಗಳೂರು ನಗರ ಸೇರಿದಂತೆ ಚಂದ್ರದ್ರೋಣ ಪರ್ವತ ಭಾಗದಲ್ಲಿ ತುಂತುರು ಮಳೆ, ಚಳಿ ಹೆಚ್ಚಾಗಿರುವುದು ಅವರಿಗೆ ಸಮಸ್ಯೆ ತಂದೊಡ್ಡಿದೆ.
ಇದನ್ನೂ ಓದಿ: 25ನೇ ವರ್ಷದ ದತ್ತಜಯಂತಿ: ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪೊಲೀಸ್ ಹೈಅಲರ್ಟ್
ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಜಾಗದಲ್ಲಿ ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ, ದತ್ತಜಯಂತಿ ಸಂದರ್ಭದಲ್ಲಿ ಬಿಜೆಪಿ ಎಂಎಲ್ಸಿ ಸಿಟಿ ರವಿ ಸೇರಿದಂತೆ ದತ್ತಮಾಲಾಧಾರಿಗಳಿಂದ ಭಿಕ್ಷಾಟನೆ ನೆರವೇರಿತು. ಚಿಕ್ಕಮಗಳೂರು ನಗರದ ಬಸವನಹಳ್ಳಿ ರಸ್ತೆಯಲ್ಲಿ ಸಿಟಿ ರವಿ ಹಾಗೂ ಇತರ ದತ್ತಮಾಲಾಧಾರಿಗಳು ಮನೆ ಮನೆಗಳಿಗೆ ತೆರಳಿ ಪಡಿ ಸಂಗ್ರಹ ಮಾಡಿದರು. ಅಕ್ಕಿ, ಕಾಯಿ, ಬೆಲ್ಲವನ್ನು ಪಡಿ ರೂಪದಲ್ಲಿ ಸಂಗ್ರಹಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:42 am, Fri, 13 December 24