ಕಾಡಾನೆ ಉಪಟಳ: ಚಿಕ್ಕಮಗಳೂರಿನ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ
ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಹೀಗಾಗಿ, ಚಿಕ್ಕಮಗಳೂರು ತಾಲೂಕಿನ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಗ್ರಾಮಸ್ಥರು ತೋಟಗಳಿಗೆ ತೆರಳದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಆನೆಗಳನ್ನು ಕಾಡಿಗೆ ಕಳುಹಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಚಿಕ್ಕಮಗಳೂರು, ನವೆಂಬರ್ 10: ಕಾಡಾನೆಗಳು (Elephant) ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಚಿಕ್ಕಮಗಳೂರು (Chikkamagaluru) ತಾಲೂಕಿನ ತುಡುಕೂರು, ಆಲ್ದೂರುಪುರ, ಹೊಸಹಳ್ಳಿ, ತೋರಣಮಾವು ಮತ್ತು ಚಿತ್ತುವಳ್ಳಿ ಸೇರಿದಂತೆ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಶನಿವಾರ (ನ.09) ರಂದು ಮಧ್ಯಾಹ್ನ ಕಾಫಿ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ತುಳಿದು ಕಾಡಾನೆ ಮೃತಪಟ್ಟಿತ್ತು. ಸಾವನ್ನಪ್ಪಿದ ಸಲಗದ ಬಳಿ ಇರುವ 23 ಕಾಡಾನೆಗಳು ಬೀಡು ಬಿಟ್ಟಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮೃತಪಟ್ಟ ಸಲಗದ ಬಳಿ ಇರುವ 23 ಕಾಡಾನೆಗಳ ಹಿಂಡು ಬೀಡು ಬಿಟ್ಟಿರುವ ಹಿನ್ನೆಲೆಯಲ್ಲಿ, ಮೃತಪಟ್ಟದ ಆನೆ ಬಳಿ ತೆರಳಲು ಅರಣ್ಯ ಇಲಾಖೆಯ ಸಿಬ್ಬಂದಿ ಪರದಾಡುತ್ತಿದ್ದಾರೆ. ಇನ್ನು, ಕಾಡಾನೆಗಳ ಹಿಂಡು ಅರಣ್ಯ ಇಲಾಖೆ ಮತ್ತು ಇಟಿಎಫ್ ಸಿಬ್ಬಂದಿಗಳ ಮೇಲೆ ದಾಳಿಗೆ ಮುಂದಾಗುತ್ತಿವೆ. ಕಾಡಾನೆಗಳು ತಾವಾಗಿಯೇ ತೆರಳುವವರೆಗು ಸಾವನ್ನಪ್ಪಿದ ಸಲಗದ ಬಳಿ ತೆರಳದಂತೆ ಸಿಬ್ಬಂದಿಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ಸಾವನ್ನಪ್ಪಿದ ಸಲಗ ವಿಕ್ರಾಂತ್ ಎಂದು ಮಾಹಿತಿ ನೀಡಿದ್ದಾರೆ. ಮೃತಪಟ್ಟ ಆನೆ ಸಕಲೇಶಪುರದಲ್ಲಿ ವಿಕ್ರಾಂತ್ ಎಂದೇ ಖ್ಯಾತಿ ಪಡೆದಿತ್ತು.
ಇದನ್ನೂ ಓದಿ: ಮಾನವ-ಪ್ರಾಣಿ ಸಂಘರ್ಷ: ಹಾಸನದಲ್ಲಿ 80 ಜನ ಸಾವು, 100ಕ್ಕೂ ಅಧಿಕ ಕಾಡಾನೆಗಳು ಮೃತ
ಮೂರು ದಿನಗಳ ಹಿಂದೆ ತುಡುಕೂರು ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ 24 ಕಾಡಾನೆಗಳ ಹಿಂಡು ಹಳೆ ಆಲ್ದೂರು, ಮಡೆನೆರಲು ಸುತ್ತಮುತ್ತ ಸಂಚಾರ ಮಾಡಿದ್ದವು. ಮುನ್ನೆಚ್ಚರಿಕಾ ಕ್ರಮವಾಗಿ ಈ ಪ್ರದೇಶಗಳ ರೈತರು ಹಾಗೂ ಕಾರ್ಮಿಕರು ಕಾಫಿತೋಟ ಸೇರಿದಂತೆ ಗದ್ದೆಗಳಿಗೆ ಕೆಲಸಕ್ಕೆ ತೆರಳದಂತೆ ಅಧಿಕಾರಿಗಳು ಸೂಚನೆ ನೀಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ