ಐಎಎಸ್ ಅಧಿಕಾರಿ ಎಂದು ನಂಬಿಸಿ ಕೋಟ್ಯಾಂತರ ರೂ. ವಂಚನೆ: ಚಿಕ್ಕಮಗಳೂರು ಮೂಲದ ಕಿಲಾಡಿ ಮಿಥುನ್ ಬೆಂಗಳೂರಿನಲ್ಲಿ ಅರೆಸ್ಟ್!

ವೈದ್ಯರು ಹಾಗೂ ಮೆಡಿಕಲ್ ಮಾಲೀಕರನ್ನು ತಾನು 2023ರ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ನಂಬಿಸಿ ಅವರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಚಿಕ್ಕಮಗಳೂರು ಮೂಲದ ಮಿಥುನ್ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಟೆಂಡರ್ ಕೊಡಿಸುವ ಆಮಿಷವೊಡ್ಡಿದ್ದ ಈತ ಹಲವರಿಂದ ಹಣ ಪಡೆದು ನಡುನೀರಲ್ಲಿ ಕೈಬಿಟ್ಟಿದ್ದ. ಅಂದಹಾಗೆ, ಈ ಆಸಾಮಿ ಪೊಲೀಸರ ಬಲೆಗೆ ಬಿದ್ದಿದ್ಹೇಗೆ ಎಂಬ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಐಎಎಸ್ ಅಧಿಕಾರಿ ಎಂದು ನಂಬಿಸಿ ಕೋಟ್ಯಾಂತರ ರೂ. ವಂಚನೆ: ಚಿಕ್ಕಮಗಳೂರು ಮೂಲದ ಕಿಲಾಡಿ ಮಿಥುನ್ ಬೆಂಗಳೂರಿನಲ್ಲಿ ಅರೆಸ್ಟ್!
ಆಸ್ಪತ್ರೆಯಲ್ಲೇ ವೈದ್ಯರು ಮತ್ತು ನರ್ಸ್‌ಗಳ ಸಭೆ ನಡೆಸಿದ್ದ ಆರೋಪಿ ಮಿಥುನ್
Image Credit source: tv9
Edited By:

Updated on: Apr 16, 2026 | 9:07 AM

ಬೆಂಗಳೂರು, ಏಪ್ರಿಲ್ 16: ತಾನು 2023ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ನಂಬಿಸಿ, ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಕಿಲಾಡಿ ಮಿಥುನ್ ಎಂಬಾತನನ್ನು ಬೆಂಗಳೂರಿನ (Bangalore) ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಂಚಕ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು ಮೂಲದವನಾಗಿದ್ದು, ಈತನ ಬಲೆಗೆ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಕೂಡ ಬಿದ್ದಿರುವುದು ಬೆಳಕಿಗೆ ಬಂದಿದೆ.

ವಂಚನೆಯ ಜಾಲ ಹೆಣೆದಿದ್ದು ಹೇಗೆ?

ಬಂಧಿತ ಮಿಥುನ್ ತಾನು ರಾಷ್ಟ್ರೀಯ ಆರೋಗ್ಯ ಅಭಿಯಾನ (NHM) ವಿಭಾಗದ ಮುಖ್ಯಸ್ಥ ಹಾಗೂ ಆರೋಗ್ಯ ಸೌಧದಲ್ಲಿ ಉನ್ನತ ಅಧಿಕಾರಿಯಾಗಿದ್ದೇನೆ ಎಂದು ನಂಬಿಸಿದ್ದ. ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಅವರಿಗೆ, ತಾನು ಐಎಎಸ್ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ ಈತ, ಸ್ವತಃ ಆಸ್ಪತ್ರೆಯಲ್ಲೇ ವೈದ್ಯರು ಮತ್ತು ನರ್ಸ್‌ಗಳ ಸಭೆ ನಡೆಸಿ ಎಲ್ಲರನ್ನೂ ನಂಬಿಸುವಲ್ಲಿ ಯಶಸ್ವಿಯಾಗಿದ್ದ.

41 ಲಕ್ಷ ರೂಪಾಯಿ ವಂಚನೆ

ಜಿಲ್ಲಾ ಸರ್ಜನ್ ಮೂಲಕ ಪರಿಚಯವಾದ ಶ್ರೇಯಸ್ ಮೆಡಿಕಲ್ ಮಾಲೀಕ ಸತೀಶ್ ಅವರಿಗೆ ಸುಮಾರು 1.8 ಕೋಟಿ ರೂಪಾಯಿ ಮೌಲ್ಯದ ಔಷಧ ಸರಬರಾಜು ಟೆಂಡರ್ ಕೊಡಿಸುವುದಾಗಿ ಮಿಥುನ್ ನಂಬಿಸಿದ್ದ. ಇದಕ್ಕಾಗಿ ಶೇ 20ರಷ್ಟು ಕಮಿಷನ್ ನೀಡಬೇಕೆಂದು ಒಪ್ಪಂದ ಮಾಡಿಕೊಂಡು, ಜಕ್ಕೂರು ಬಳಿ ಬರೋಬ್ಬರಿ 36 ಲಕ್ಷ ರೂ. ಸೇರಿದಂತೆ ಒಟ್ಟು 41 ಲಕ್ಷ ರೂಪಾಯಿಗಳನ್ನು ಪಡೆದು ವಂಚಿಸಿದ್ದಾನೆ.

ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?

ತನ್ನ ಪ್ರಭಾವ ತೋರಿಸಲು ಬೆಂಗಳೂರಿನ ಓರ್ವ ಡಿಸಿಪಿ ಹೆಸರನ್ನು ಬಳಸಲು ಹೋಗಿ ಅಮೃತಹಳ್ಳಿ ಪೊಲೀಸರಿಗೆ ಅನುಮಾನ ಬರುವಂತೆ ಮಾಡಿದ್ದ. ಪೊಲೀಸರು ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತನ ಅಸಲಿ ಬಣ್ಣ ಬಯಲಾಗಿದೆ. ತಾನು 10 ಲಕ್ಷ ಜನರಲ್ಲಿ ಪರೀಕ್ಷೆ ಬರೆದು ಪಾಸಾದ 900 ಅಧಿಕಾರಿಗಳಲ್ಲಿ ಒಬ್ಬ ಎಂದು ಸುಳ್ಳು ಹೇಳಿ ಪ್ರಭಾವಿ ಸ್ವಾಮೀಜಿಗಳನ್ನೂ ಈತ ನಂಬಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ನಕಲಿ ನೋಟುಗಳನ್ನು ನೀಡಿ ಆರ್‌ಬಿಐಗೇ ಟೋಪಿ ಹಾಕಲು ಹೋಗಿ ಸಿಕ್ಕಿಬಿದ್ದ ಭೂಪ!

ಸದ್ಯ ಪೊಲೀಸರು ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಅವರನ್ನು ವಿಚಾರಣೆ ನಡೆಸುತ್ತಿದ್ದು, ಇನ್ನೂ ಹಲವು ಆಸ್ಪತ್ರೆ ಮಾಲೀಕರಿಗೆ ಈತ ವಂಚಿಸಿರುವ ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us