Ginger Price: ಇತಿಹಾಸದಲ್ಲೇ ಮೊದಲ ಬಾರಿಗೆ ಶುಂಠಿಗೆ ಬಂತು ಬಂಗಾರದ ಬೆಲೆ
ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಟೋಮೆಟೊಗೆ ಸಿಕ್ಕಂತೆ ಶುಂಠಿಗೂ ಸಹ ಇತಿಹಾಸದಲ್ಲಿ ಬಂಗಾರದ ಬೆಲೆ ಸಿಕ್ಕಿದೆ. ಇದರಿಂದ ಶುಂಠಿ ಬೆಳೆಗಾರರು ಜಾಕ್ಪಾಟ್ ಹೊಡೆದಿದ್ದಾರೆ.

ಚಿಕ್ಕಮಗಳೂರು, (ಜುಲೈ 14): ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ದಿನಸಿ ಸೇರಿದಂತೆ ಕೆಲ ತರಕಾರಿ ದರ ಏರಿಕೆಯಾಗಿದೆ.ಅದರಲ್ಲೂ ಮುಖ್ಯವಾಗಿ ಟೊಮೆಟೊ ದರ ಗಗನಕ್ಕೇರಿದೆ. ಇದರ ಮಧ್ಯೆ ಇತಿಹಾಸದಲ್ಲೇ ಮೊದಲ ಬಾರಿಗೆ ಶುಂಠಿಗೆ(ginger) ಬಂಗಾರದ ಬೆಲೆ ಬಂದಿದೆ. ಹೌದು.. 100 ಕೆ.ಜಿ ಶುಂಠಿಗೆ 18 ರಿಂದ 20 ಸಾವಿರ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೆ ಸಮಯದಲ್ಲಿ 100 ಕೆಜಿ ಶುಂಠಿಗೆ 900 ರೂ. ರಿಂದ 1200 ರೂಪಾಯಿ ಇತ್ತು. ಇದೀಗ ಶುಂಠಿ ಬೆಲೆ ಗಗನಕ್ಕೇರಿದ್ದು, ರೈತ ಪುಲ್ ಖುಷ್ ಆಗಿದ್ದಾನೆ. ಅಲ್ಲದೇ ಶುಂಠಿ ಬೆಳೆದ ರೈತ ಕುಬೇರನ ಮಗ ಎನ್ನುವಂತಾಗಿದೆ.
ಇದನ್ನೂ ಓದಿ: Kolar News: ಕೋಲಾರದ ರೈತ ಕುಟುಂಬಕ್ಕೆ ಭರ್ಜರಿ ಜಾಕ್ಪಾಟ್; ಟೊಮೆಟೊ ಮಾರಾಟದಿಂದ ಸಿಕ್ತು 38 ಲಕ್ಷ ರೂ
ಉತ್ತಮ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಶುಂಠಿ ಬೆಳೆದ ರೈತರು ಇದೀಗ ಜಾಕ್ ಪಾಟ್ ಹೊಡೆದಿದ್ದಾರೆ. ಅದರಲ್ಲೂ ಹಳೆಯ ಶುಂಠಿಗೆ ಬೇಡಿಕೆ ಹೆಚ್ಚಾಗಿದೆ. ಹಳೆ ಶುಂಠಿಗೆ 18ರಿಂದ 20 ಸಾವಿರ ರೂ. ಇದ್ದು, ಈ ವರ್ಷ ಬೆಳೆದಿರುವ ಶುಂಠಿಗೆ 10 ರಿಂದ 12 ಸಾವಿರ ರೂ.ಇದೆ. ಇದರಿಂದ ಕಳೆದ ವರ್ಷದ ಶುಂಠಿಯನ್ನ ಹೊಲದಲ್ಲಿ ಉಳಿಸಿಕೊಂಡ ರೈತರಿಗೆ ಬಂಪರ್ ಬೆಲೆ ಸಿಗುತ್ತಿದೆ. ದೆಹಲಿ ಮತ್ತು ಉತ್ತರ ಭಾರತದಲ್ಲಿ ಶುಂಠಿಗೆ ಬೇಡಿಕೆ ಹೆಚ್ಚಾಗಿದ್ದು, 2011 ರಿಂದ 2023 ರಲ್ಲಿ ಇದೆ ಮೊದಲಿ ಬಾರಿಗೆ ಶುಂಠಿ ಬೆಲೆ 20 ಸಾವಿರ ರೂ. ಗಡಿ ತಲುಪಿದೆ. ಹೀಗಾಗಿ ಒಂದು ಎಕರೆ ಶುಂಠಿ ಬೆಳೆದ ರೈತ 25 ಲಕ್ಷ ರೂ. ಲಾಭದ ನಿರೀಕ್ಷೆಯಲ್ಲಿದ್ದಾನೆ.
ಸಾಮಾನ್ಯವಾಗಿ ಏಪ್ರಿಲ್- ಮೇ ತಿಂಗಳಲ್ಲಿ ಶುಂಠಿ ಬಿತ್ತನೆ ಮಾಡಲಾಗುತ್ತದೆ. 8 ತಿಂಗಳಿಗೂ ಹೆಚ್ಚಿನ ಅವಧಿಯ ಈ ಬೆಳೆ ಜನವರಿ ಹೊತ್ತಿಗೆ ಕೈಗೆ ಸಿಗುತ್ತದೆ. ಆದರೆ ಇದೀಗ ಈಗ ರೈತರು ಬೆಳೆಯೆಲ್ಲ ಮಾರಾಟ ಮಾಡಿ ಹೊಸದಾಗಿ ಬಿತ್ತನೆ ಮಾಡಿ ಶುಂಠಿ ಸಸಿ ಬೆಳೆಸುವ ಸಮಯದಲ್ಲಿ ಹಿಂದೆಂದೂ ಕಾಣದ ದಾಖಲೆಯ ಬೆಲೆ ಬಂದಿದೆ. ಹೆಚ್ಚಿನ ರೈತರ ಕೈಯಲ್ಲಿ ಬೆಳೆ ಇಲ್ಲದಿರುವುದರಿಂದ ಬೆಲೆ ಬಂದರೂ ಪ್ರಯೋಜನ ಇಲ್ಲದಂತಾಗಿದೆ. ಇನ್ನು ಮಾರಾಟ ಮಾಡದೇ ಇಟ್ಟುಕೊಂಡಿರುವ ರೈತರಿಗೆ ಮಾತ್ರ ಜಾಕ್ಪಾಟ್.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 12:07 pm, Fri, 14 July 23