ರಸ್ತೆಗಳಿಲ್ಲದೆ ಪರದಾಟ: ಜೋಳಿಗೆಯಲ್ಲಿ ಹೊತ್ತು ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಿದ ಜನ, ರಸ್ತೆಗಾಗಿ ಎಷ್ಟೇ ಮನವಿ ಮಾಡಿದರೂ ಸಿಗದ ಪರಿಹಾರ
ವೃದ್ಧೆ ವೆಂಕಮ್ಮ ಕಳೆದ 65 ವರ್ಷಗಳಿಂದಲೂ ಗಂಟೆಮಕ್ಕಿ ಗ್ರಾಮದಲ್ಲೇ ವಾಸವಿದ್ದಾರೆ. ಆರೋಗ್ಯ ತೀವ್ರ ಹದಗೆಟ್ಟಾಗ ಸ್ಥಳೀಯರು ಹಾಗೂ ಸಂಬಂಧಿಕರು ಜೋಳಿಗೆ ಕಟ್ಟಿಕೊಂಡು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಚಿಕ್ಕಮಗಳೂರು: 85 ವರ್ಷದ ವೃದ್ಧೆಯನ್ನ ಆಸ್ಪತ್ರೆಗೆ ಹೋಗಲು ದಾರಿ ಇಲ್ಲದೇ ಜೋಳಿಗೆಯಲ್ಲಿ ಕಟ್ಟಿಕೊಂಡು ಆಸ್ಪತ್ರೆಗೆ ಕೊಂಡೊಯ್ದಿರುವ ದಾರುಣ ಘಟನೆ ಜಿಲ್ಲೆಯ ಕಳಸ ತಾಲೂಕಿನ ಗಂಟೆಮಕ್ಕಿ ಗ್ರಾಮದಲ್ಲಿ ನಡೆದಿದೆ.
ಗಂಟೆಮಕ್ಕಿ ಗ್ರಾಮದ ವೃದ್ಧೆ ವೆಂಕಟಮ್ಮನವರಿಗೆ ಕಳೆದೊಂದು ವಾರದಿಂದಲೂ ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆಗೆ ಕರೆದೊಯ್ಯಲು ದಾರಿ ಇಲ್ಲದೇ ಕುಟುಂಬಸ್ಥರು ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟಾಗ ಸ್ಥಳೀಯರು ಹಾಗೂ ಸಂಬಂಧಿಕರು ಜೋಳಿಗೆ ಕಟ್ಟಿಕೊಂಡು ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ವೃದ್ಧೆ ವೆಂಕಮ್ಮ ಕಳೆದ 65 ವರ್ಷಗಳಿಂದಲೂ ಗಂಟೆಮಕ್ಕಿ ಗ್ರಾಮದಲ್ಲೇ ವಾಸವಿದ್ದಾರೆ. ಇಲ್ಲಿ ಸುಮಾರು 8-10 ಮನೆಗಳಿದ್ದು, ಯಾರಿಗೂ ಓಡಾಡಲು ಜಾಗವಿಲ್ಲ. ಜಮೀನಿಗೆ ಹೋಗಲು ದಾರಿ ಇಲ್ಲ. ಹೊಲ-ಗದ್ದೆಗಳಿಗೆ ಗೊಬ್ಬರ, ಮನೆಗೆ ರೇಷನ್ ಎಲ್ಲವನ್ನು ತಲೆ ಮೇಲೆ ಹೊತ್ತುಕೊಂಡು ಹೋಗಬೇಕು. ಸ್ಥಳೀಯರು ಹತ್ತಾರು ವರ್ಷಗಳಿಂದ ರಸ್ತೆ ನಿರ್ಮಿಸಿ ಕೊಡುವಂತೆ ಅಧಿಕಾರಿಗಳಿಗೆ ನೂರಾರು ಬಾರಿ ಮನವಿ ನೀಡಿದ್ದಾರೆ. ಆದರೆ ಈವರೆಗೂ ಯಾರೊಬ್ಬರೂ ಕೂಡ ಇವರ ನೋವಿಗೆ ಸ್ಪಂದಿಸಿಲ್ಲ.
ಗ್ರಾಮ ಪಂಚಾಯಿತಿ ಅಧಿಕಾರಿಗಳು, ತಹಸಿಲ್ದಾರ್, ಎಸಿ ಹಾಗೂ ಡಿಸಿಗೂ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. 2021ರಲ್ಲಿ ಖುದ್ದು ವೆಂಕಮ್ಮನವರೇ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಮನವಿ ಮಾಡಿದ್ದರು. ಚುನಾವಣೆ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷದ ಮುಖಂಡರು ಭೇಟಿ ನೀಡಿ ರಸ್ತೆ ನಿರ್ಮಿಸಿ ಕೊಡುವ ಭರವಸೆ ನೀಡುತ್ತಾರೆ. ಆದರೆ, ಈವರೆಗೂ ಯಾರು ರಸ್ತೆ ನಿರ್ಮಿಸಿ ಕೊಡುವ ಗೋಜಿಗೆ ಹೋಗಿಲ್ಲ. ಗ್ರಾಮ ಪಂಚಾಯಿತಿ, ಅಧಿಕಾರಿಗಳಿಗೆ ರಸ್ತೆ ನಿರ್ಮಿಸಿ ಕೊಡುವಂತೆ ಮನವಿ ಮಾಡಿಕೊಂಡರೆ ಅಧಿಕಾರಿಗಳು ಅಕ್ಕಪಕ್ಕದ ಜಮೀನು, ಮಾಲೀಕರ ಬಳಿ ಜಾಗ ಬಿಡಿಸಿಕೊಟ್ಟರೆ ರಸ್ತೆ ನಿರ್ಮಿಸಿ ಕೊಡುತ್ತೇವೆ ಎಂದು ಹೇಳುತ್ತಾರಂತೆ. ಆದರೆ, ಅಕ್ಕಪಕ್ಕದ ಜಮೀನುಗಳ ಮಾಲೀಕರು ರಸ್ತೆ ನಿರ್ಮಿಸಲು ಜಾಗ ಬಿಟ್ಟುಕೊಡಲು ಮುಂದಾಗುತ್ತಿಲ್ಲ. ಹಾಗಾಗಿ, ಗಂಟೆಮಕ್ಕಿ ಗ್ರಾಮದ ಎಂಟತ್ತು ಕುಟುಂಬಗಳು ಕಳೆದ 65-70 ವರ್ಷಗಳಿಂದಲೂ ಇದೇ ರೀತಿಯಾಗಿ ಬದುಕುತ್ತಿದ್ದಾರೆ. ಇದೀಗ ವೃದ್ಧೆ ವೆಂಕಮ್ಮನವರನ್ನ ಜೋಳಿಗೆಯಲ್ಲಿ ಹೊತ್ತೊಯ್ದ ದಾರುಣ ಘಟನೆಯಾದ್ರೂ ಅಧಿಕಾರಿಗಳು, ಜನಪ್ರತಿನಿಧಿಗಳ ಕಣ್ತೆರಿಸಲಿ, ಗಂಟೆ ಮಕ್ಕಿ ಗ್ರಾಮಕ್ಕೆ ರಸ್ತೆ ನಿರ್ಮಾಣವಾಗಲಿ ಅನ್ನೋದು ನಮ್ಮ ಆಶಯ
ಇಲ್ಲಿ ಶವ ಸಂಸ್ಕಾರಕ್ಕೂ ಹರಸಾಹಸ
ಯಾದಗಿರಿ: ಹುಣಸಗಿ ತಾಲೂಕಿನ ತೆಗ್ಗಳ್ಳಿಯಲ್ಲಿ ಶವ ಸಂಸ್ಕಾರ ಮಾಡಲು ಗ್ರಾಮಸ್ಥರು ಪರದಾಡುವಂತಹ ಸ್ಥಿತಿ ಇದೆ. ಎದೆ ಎತ್ತರಕ್ಕೆ ನೀರು ಹರಿಯುತ್ತಿದ್ದು ಜನ ಹರಿಯುವ ನೀರಿನಲ್ಲೇ ಪ್ರಾಣ ಕೈಯಲ್ಲಿಡಿದು ಶವ ಹೊತ್ತು ಸಾಗಿದ್ದಾರೆ. ತುಂಬಿ ಹರಿಯುತ್ತಿರುವ ಹಳ್ಳದಲ್ಲೇ ಭೀಮರಾಯ ಹಾದಿಮನಿ ಎಂಬುವವರ ಶವ ಹೊತ್ತು ಸಾಗಿ ಅಂತ್ಯಕ್ರಿಯೆಗೆ ಹರಸಾಹಸ ಪಟ್ಟಿದ್ದಾರೆ.
ದಲಿತರಿಗಾಗಿ ಹಳ್ಳದ ಪಕ್ಕದಲ್ಲಿ ಶವ ಸಂಸ್ಕಾರಕ್ಕಾಗಿ ಜಾಗ ಒದಗಿಸಲಾಗಿದೆ. ಹಳ್ಳ ತುಂಬಿ ಹರಿಯುತ್ತಿರುವುದರಿಂದ ಶವ ಸಂಸ್ಕಾರಕ್ಕೆ ಅನಾನುಕೂಲವಾಗಿದ್ದು ದಲಿತ ಕುಟುಂಬದಲ್ಲಿ ಸಾವು ಸಂಭವಿಸಿದರೆ ಶವ ಸಂಸ್ಕಾರಕ್ಕೆ ಹರ ಸಾಹಸ ಪಡುವಂತಹ ಸ್ಥಿತಿ ಇದೆ. ಹೀಗಾಗಿ ಶವಸಂಸ್ಕಾರಕ್ಕೆ ಸೂಕ್ತ ಜಾಗ ಒದಗಿಸುವಂತೆ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ತಳ್ಳಳ್ಳಿ ಗ್ರಾಮದಲ್ಲಿ 50 ದಲಿತ ಕುಟುಂಬಗಳಿವೆ. ದಲಿತ ಕುಟಂಬದಲ್ಲಿ ಯಾರೇ ಮೃತಪಟ್ರು ಹಳ್ಳ ದಾಟಿಯೇ ಶವ ಸಂಸ್ಕಾರ ಮಾಡಬೇಕು. ಸುಸಜ್ಜಿತ ಸ್ಥಳದಲ್ಲಿ ಶವ ಸಂಸ್ಕಾರಕ್ಕೆ ಜಾಗ ಒದಗಿಸಲು ಗ್ರಾಮಸ್ಥರ ಆಗ್ರಹಿಸಿದ್ದು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.
ಹೊಂಡದಲ್ಲಿ ಜಾರಿ ಬಿದ್ದು ಸಾವು
ಕಲ್ಲು ಕ್ವಾರಿಯ ಹೊಂಡದಲ್ಲಿ ಕಾಲು ಜಾರಿ ಬಿದ್ದು ವ್ಯಕ್ತಿ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಂಗಾಧರ್ ( 26) ಮೃತ ದುರ್ದೈವಿ. ಮೃತನು ಶ್ರೀರಾಮ್ ಗ್ರಾನೈಟ್ ನಲ್ಲಿ ಸುಪರ್ವೈಸ್ ಹಾಗಿ ಕೆಲಸ ಮಾಡ್ತಿದ್ದ. ಸ್ನೇಹಿತರ ಜೊತೆ ಇಲ್ಲಿನ ಕ್ವಾರಿ ಹೊಂಡದ ಬಳಿ ತೆರಳಿದ್ದ. ಈ ವೇಳೆ ಕಾಲು ಜಾರಿ ಕ್ವಾರಿ ನೀರಿನ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹ ಹೊರಕ್ಕೆ ತೆಗೆದಿದ್ದು ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಫೋನ್ ಮಾಡಿ ಮಹಿಳೆಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಬಂಧನ
ಬೆಂಗಳೂರು: ಫೋನ್ ಮಾಡಿ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಆರೋಪಿ ನಾಗರಾಜನನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನಲ್ಲಿ ಮಹಿಳೆಗೆ ಪರಿಚಯವಾಗಿದ್ದ ನಾಗರಾಜ್, ಮಹಿಳೆಯನ್ನು ಹಿಂಬಾಲಿಸಿ ಪ್ರತಿದಿನ ನೂರಕ್ಕೂ ಹೆಚ್ಚು ಬಾರಿ ಫೋನ್ ಮಾಡಿ ಕಿರುಕುಳ ನೀಡುತ್ತಿದ್ದ. ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಹೈಗ್ರೌಂಡ್ಸ್ ಪೊಲೀಸರು ಆರೋಪಿ ನಾಗರಾಜ್ ಬಂಧಿಸಿದ್ದಾರೆ.