ಚಿಕ್ಕಮಗಳೂರು: ದಾರಿ ಮಧ್ಯೆ ನಿಂತ ಮುಕ್ತಿವಾಹನ, ದುಃಖದಲ್ಲೇ ತಳ್ಳಿ ಸ್ಟಾರ್ಟ್ ಮಾಡಿದ ಮೃತನ ಸಂಬಂಧಿಕರು
ಮೃತ ವ್ಯಕ್ತಿಯನ್ನ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ ಮುಕ್ತಿದಾಮದ ಶಾಂತಿವಾಹನ ರಸ್ತೆ ಮಧ್ಯೆ ಕೆಟ್ಟು ನಿಂತ ಘಟನೆ ನಗರದ ಶಂಕರಪುರದಲ್ಲಿ ನಡೆದಿದೆ.
ಚಿಕ್ಕಮಗಳೂರು: ಮೃತ ವ್ಯಕ್ತಿಯನ್ನ ಸ್ಮಶಾನಕ್ಕೆ (Cemetery) ತೆಗೆದುಕೊಂಡು ಹೋಗುವಾಗ ಮುಕ್ತಿದಾಮದ ಶಾಂತಿವಾಹನ (Hearse Van) ರಸ್ತೆ ಮಧ್ಯೆ ಕೆಟ್ಟು ನಿಂತ ಘಟನೆ ಚಿಕ್ಕಮಗಳೂರಿನ (Chikkamagaluru) ಶಂಕರಪುರದಲ್ಲಿ ನಡೆದಿದೆ. ಶಂಕರಪುರ ಮೂಲದ 60 ವರ್ಷದ ರವಿ ಎಂಬಾತ ಅನಾರೋಗ್ಯದ ನಿಮಿತ್ತ ಸಾವನ್ನಪ್ಪಿದ್ದರು. ಅವರ ಅಂತ್ಯಸಂಸ್ಕಾರಕ್ಕೆಂದು ಮೃತದೇಹವನ್ನು ಮುಕ್ತಿದಾಮಕ್ಕೆ ತೆಗೆದುಕೊಂಡು ಹೋಗುವಾಗ ಶಾಂತಿವಾಹನ ರಸ್ತೆ ಮಧ್ಯೆಯೇ ಕೆಟ್ಟು ನಿಂತಿದೆ. ಬಳಿಕ ಮೃತನ ಸಂಬಂಧಿಕರು ಹಾಗೂ ಸ್ನೇಹಿತರು ಶಾಂತಿವಾಹನವನ್ನು ತಳ್ಳಿ ಸ್ಟಾರ್ಟ್ ಮಾಡಿದ್ದಾರೆ. ನಗರಸಭೆಯಲ್ಲಿ ಇರುವುದು ಒಂದೇ ಶಾಂತಿವಾಹನ. ಆ ವಾಹನದಲ್ಲಿ ಮೃತದೇಹವನ್ನ ಚಿತಾಗಾರಕ್ಕೆ ಸಾಗಿಸುವಾಗ ರಸ್ತೆ ಮಧ್ಯೆಯೇ ಹಲವು ಬಾರಿ ಕೆಟ್ಟು ನಿಂತಿದೆ. ಗಾಡಿ ಕೆಟ್ಟು ನಿಂತಾಗೆಲ್ಲಾ ಸಂಬಂಧಿಕರು ತಳ್ಳಿ ಸ್ಟಾರ್ಟ್ ಮಾಡಿದ್ದಾರೆ.
ನಗರಸಭೆ ಅಧ್ಯಕ್ಷರು ಲಕ್ಷಾಂತರ ರೂಪಾಯಿ ಮೌಲ್ಯದ ಕಾರು ಖರೀದಿಸಿ ಓಡಾಡುತ್ತಾರೆ. ಆದರೆ, ನಗರಸಭೆ ಶಾಂತಿವಾಹನಕ್ಕೆ ಒಂದು ವ್ಯವಸ್ಥಿತವಾದ ಗಾಡಿಯನ್ನ ಕೊಟ್ಟಿಲ್ಲ ಎಂದು ಸ್ಥಳಿಯರು ನಗರಸಭೆ ವಿರುದ್ಧ ಹೊರಹಾಕಿದ್ದಾರೆ.
ಮೃತದೇಹವನ್ನ ಹೊತ್ತು ಹೊರಟ ಶಾಂತಿವಾಹನ ಕ್ರಿಶ್ಚಿಯನ್ ಸ್ಮಶಾನದವರೆಗೆ ಹೋಗುವಾಗ ಹತ್ತಾರು ಬಾರಿ ಕೆಟ್ಟು ನಿಂತಿದೆ. ರಸ್ತೆಯುದ್ದಕ್ಕೂ ಕೆಟ್ಟು ನಿಲ್ಲುತ್ತಿದ್ದ ವಾಹನವನ್ನ ಕಂಡು ರಸ್ತೆಯಲ್ಲಿದ್ದ ಜನಸಾಮಾನ್ಯರು ಕೂಡ ನಗರಸಭೆ ವಿರುದ್ಧ ವ್ಯಂಗ್ಯವಾಡಿದ್ದಾರೆ. ಶಾಂತಿದಾಮದ ವಾಹನವನ್ನ ವ್ಯವಸ್ಥಿತವಾಗಿ ನಿರ್ವಹಣೆ ಮಾಡದ ನಗರಸಭೆ ಅಧಿಕಾರಿಗಳ ವಿರುದ್ಧ ಜನಸಾಮಾನ್ಯರು ನಗರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೂಡಲೇ ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರು ಇತ್ತ ಗಮನ ಹರಿಸಿ ಶಾಂತಿವಾಹನ ಸಮಸ್ಯೆಗಳಿಗೆ ಮುಕ್ತಿ ಹಾಡಬೇಕಿದೆ. ಅಧ್ಯಕ್ಷರು 18-20 ಲಕ್ಷ ವಾಹನದಲ್ಲಿ ಓಡಾಡುತ್ತಾರೆ. ಆದರೆ, ಮಾನವನ ಅಂತಿಯಾತ್ರೆಯಲ್ಲೂ ನೆಮ್ಮದಿಯಿಂದ ಕಳಿಸಲಾಗದ ಸ್ಥಿತಿ ನಗರದಲ್ಲಿ ಇದೆ. ಕೂಡಲೇ ನಗರಸಭೆ ಮುಕ್ತಿದಾಮದ ಹೆಳೆಯದಾದ ಶಾಂತಿವಾಹನಕ್ಕೆ ಮುಕ್ತಿ ಕಾಣಿಸಿ ಹೊಸ ವಾಹನ ನೀಡಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:23 pm, Mon, 13 March 23