ಬಿರುಗಾಳಿ ಸಹಿತ ಭಾರಿ ಮಳೆ: ಕಾಲೇಜಿನ ಮೇಲ್ಛಾವಣಿಯ ಹೆಂಚು ಬಿದ್ದು ವಿದ್ಯಾರ್ಥಿನಿಗೆ ಗಾಯ
ಹೆಂಚುಗಳು ಬಿದ್ದು ವಿದ್ಯಾರ್ಥಿನಿಯ ತಲೆಯಲ್ಲಿ ತೀವ್ರ ರಕ್ತಸ್ರಾವವಾಗಿದೆ. ಶಾಲಾ, ಕಾಲೇಜುಗಳಲ್ಲಿ ಕುಳಿತುಕೊಳ್ಳಲು ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ.

ಚಿಕ್ಕಮಗಳೂರು: ರಾಜ್ಯದ ಅನೇಕ ಕಡೆ ಮಳೆಯ ಅಬ್ಬರ ಮುಂದುವರೆದಿದೆ(Karnataka Rains). ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದ ಜೂನಿಯರ್ ಕಾಲೇಜಿನಲ್ಲಿ ಮೇಲ್ಛಾವಣಿಯ ಹೆಂಚು ಬಿದ್ದು ವಿದ್ಯಾರ್ಥಿನಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಹೆಂಚು ಬಿದ್ದು ಅವಘಡ ಸಂಭವಿಸಿದೆ.
ಹೆಂಚುಗಳು ಬಿದ್ದು ವಿದ್ಯಾರ್ಥಿನಿಯ ತಲೆಯಲ್ಲಿ ತೀವ್ರ ರಕ್ತಸ್ರಾವವಾಗಿದೆ. ಶಾಲಾ, ಕಾಲೇಜುಗಳಲ್ಲಿ ಕುಳಿತುಕೊಳ್ಳಲು ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಮಳೆ ಇದ್ದರೂ ಕಾಲೇಜಿಗೆ ರಜೆ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.
ಅಪ್ಸರಕೊಂಡ ಬಳಿ ಭೂಕುಸಿತ ಭೀತಿ
ಇನ್ನು ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆ ಹಿನ್ನೆಲೆ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಬಳಿ ಭೂಕುಸಿತ ಭೀತಿ ಎದುರಾಗಿದೆ. ಹೀಗಾಗಿ ಕೆಳಗಿನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಸರಕೊಂಡಕ್ಕೆ ಗಣಿ & ಭೂವಿಜ್ಞಾನ, ಕಂದಾಯ, ನೋಡಲ್ ಅಧಿಕಾರಿಗಳು ಭೇಟಿ ನೀಡಿ ಅಪ್ಸರಕೊಂಡ ಬಳಿ ಇರುವ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲು ಮುಂದಾಗಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಹೀಗಾಗಲೇ 12 ಜನರನ್ನ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದ್ದು 3 ದಿನಗಳ ಕಾಲ ಕಾಳಜಿ ಕೇಂದ್ರದಲ್ಲಿರುವಂತೆ ಸೂಚಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:05 pm, Mon, 8 August 22




