ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆರಾಯನ (Heavy Rain) ಆರ್ಭಟ ಮುಂದುವರೆದಿದ್ದು, ಶೃಂಗೇರಿ ತಾಲೂಕಿನ ಕಿಕ್ರೆ ಗ್ರಾಮದಲ್ಲಿ ಪ್ರವಾಹದ ರೂಪದಲ್ಲಿ ನದಿ ನೀರು ಹರಿಯುತ್ತಿದೆ. ರಸ್ತೆ ಮಟ್ಟದಲ್ಲಿದ್ದ ಸೇತುವೆ ಮೇಲೆ 4 ಅಡಿ ಎತ್ತರದಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಕಿಕ್ರೆ ಗ್ರಾಮದಿಂದ ಶೃಂಗೇರಿ ಪಟ್ಟಣಕ್ಕೆ ಸಂಪರ್ಕ ಕಡಿತವಾಗಿದೆ. ಪ್ರತಿ ಬಾರಿ ಮಳೆ ಬಂದಾಗ ಕಿಕ್ರೆ ಗ್ರಾಮ ದ್ವಿಪದಂತಾಗುತ್ತದೆ. ಮಳೆ ಬಂದಾಗ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಲಾಗುತ್ತಿದ್ದು, ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಾರೆ ಎಂಬ ಭಯ ಎದುರಾಗಿದೆ. ಅನಾರೋಗ್ಯ ಸಂಭವಿಸಿದ್ರೂ ವೃದ್ಧರು ಸೇರಿದಂತೆ ಯಾರನ್ನೂ ಆಸ್ಪತ್ರೆ ಸೇರಿಸಲು ಸಾಧ್ಯವಾಗುತ್ತಿಲ್ಲ. ಸೇತುವೆ ಮಾಡಿಕೊಡುವಂತೆ ಪರಿಪರಿಯಾಗಿ ಬೇಡಿಕೊಂಡರೂ ಯಾರು ಸ್ಪಂದಿಸುತ್ತಿಲ್ಲ ಎಂದು ಟಿವಿ9 ಬಳಿ ಕಿಕ್ರೆ ಗ್ರಾಮಸ್ಥರು ಅಳಲು ತೋಡಿಕೊಂಡರು.
ಇದನ್ನೂ ಓದಿ: Karnataka Rain: ಜುಲೈ 14ರವರೆಗೆ ಕರ್ನಾಟಕದಲ್ಲಿ ವ್ಯಾಪಕ ಮಳೆ, ಶಾಲೆಗಳಿಗೆ ರಜೆ; ಕರಾವಳಿಗೆ ರೆಡ್ ಅಲರ್ಟ್ ಘೋಷಣೆ
ಜಿಲ್ಲೆಯಲ್ಲಿ ನೋಡು ನೋಡುತ್ತಿದ್ದಂತೆ ಭೂಕುಸಿತ ಸಂಭವಿಸಿರುವಂತಹ ಘಟನೆ ಬಾಳೆಹೊನ್ನೂರು ಸಮೀಪದ ಮಣಬೂರಿನಲ್ಲಿ ನಡೆದಿದೆ. ಟಿವಿ9ಗೆ ಎದೆ ಝಲ್ ಎನಿಸುವ ಭೂ ಕುಸಿತದ ದೃಶ್ಯ ಲಭ್ಯವಾಗಿದೆ. ಬೃಹತ್ ಮರದ ಸಮೇತ ಸುಮಾರು ನೂರು ಅಡಿ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿದ್ದು, ಅಲ್ಲಲ್ಲಿ ನಡೆಯುತ್ತಿರುವ ಭೂಕುಸಿತದಿಂದ ಜನರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: Karnataka Rain Live Updates: ಕರ್ನಾಟಕದಾದ್ಯಂತ ಮುಂದುವರಿದ ಮಳೆಯ ಆರ್ಭಟ: ಚಳಿಗಾಳಿಗೆ ಹೊರಗೆ ಬಾರದ ಜನ
ಇಂದು ಮತ್ತು ನಾಳೆ ಶಾಲಾ- ಕಾಲೇಜುಗಳಿಗೆ ರಜೆ
ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಇಂದು ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಿಂದ ಜುಲೈ 13ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಲೆನಾಡು ಭಾಗದಲ್ಲಿ ಕೂಡ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಚಿಕ್ಕಮಗಳೂರು ಮಳೆ ವಿವರ, ಜುಲೈ 1ರಿಂದ ಇಂದಿನವರೆಗೆ
1. ಚಿಕ್ಕಮಗಳೂರು ತಾಲೂಕು: ವಾಡಿಕೆ ಮಳೆ 334.1 ಮಿ.ಮೀ ಆಗಿರುವ ಮಳೆ 867.1 ಮಿ.ಮೀ
2. ಮೂಡಿಗೆರೆ ತಾಲೂಕು : ವಾಡಿಕೆ ಮಳೆ 882.1 ಮಿ.ಮೀ ಆಗಿರುವ ಮಳೆ 1406.9 ಮಿ.ಮೀ
3. ಶೃಂಗೇರಿ ತಾಲೂಕು : ವಾಡಿಕೆ ಮಳೆ 1314.0 ಮಿ.ಮೀ ಆಗಿರುವ ಮಳೆ 1983.6 ಮಿ.ಮೀ
4. ಕೊಪ್ಪ ತಾಲೂಕು : ವಾಡಿಕೆ ಮಳೆ 961.8 ಮಿ.ಮೀ ಆಗಿರುವ ಮಳೆ 1703.2 ಮಿ.ಮೀ
5. ಎನ್.ಆರ್.ಪುರ ತಾಲೂಕು : ವಾಡಿಕೆ ಮಳೆ 532.4 ಮಿ.ಮೀ ಆಗಿರುವ ಮಳೆ 1011.8 ಮಿ.ಮೀ
6. ತರೀಕೆರೆ ತಾಲೂಕು : ವಾಡಿಕೆ ಮಳೆ 279.0 ಮಿ.ಮೀ ಆಗಿರುವ ಮಳೆ 553.4 ಮಿ.ಮೀ
7. ಕಡೂರು ತಾಲೂಕು : ವಾಡಿಕೆ ಮಳೆ 222.6 ಮಿ.ಮೀ ಆಗಿರುವ ಮಳೆ 441.4 ಮಿ.ಮೀ
8. ಅಜ್ಜಂಪುರ ತಾಲೂಕು : ವಾಡಿಕೆ ಮಳೆ 223.5 ಮಿ.ಮೀ ಆಗಿರುವ ಮಳೆ 447.5 ಮಿ.ಮೀ
Published On - 9:19 am, Mon, 11 July 22