ಕುಮಾರಸ್ವಾಮಿ ಪಕ್ಷಕ್ಕೆ ಬಂದ್ರೆ ವಿರೋಧಿಸ್ತೇನೆ; ಅವನಿಗಿಂತ, ಕೂಲಿ ಕಾರ್ಮಿಕರಿಗೆ ಟಿಕೆಟ್ ಕೊಡಲಿ – ರೊಚ್ಚಿಗೆದ್ದ ಮಾಜಿ ಸಚಿವೆ ಮೋಟಮ್ಮ
ನಾನು 8 ಚುನಾವಣೆಗಳನ್ನ ಎದುರಿಸಿದ್ದೇನೆ, ಆದ್ರೆ 2018ರ ಚುನಾವಣೆ ತುಂಬಾ ದುಸ್ತರವಾಗಿತ್ತು. ತುಂಬಾ ನೋವು ತಿಂದಿದ್ದೇನೆ, ಆ ಚುನಾವಣೆ ವೆಚ್ಚವನ್ನ ಭರಿಸಲು ನನ್ನ ಸ್ವಂತ ಮನೆಯನ್ನೇ ಬಾಡಿಗೆಗೆ ನೀಡಿ, ಇದೀಗ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ
ಚಿಕ್ಕಮಗಳೂರು: ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ(MP Kumaraswamy) ಪಕ್ಷಕ್ಕೆ ಬಂದರೆ ಖಂಡಿತವಾಗಿಯೂ ವಿರೋಧಿಸುತ್ತೇನೆ ಎಂದು ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ಮೋಟಮ್ಮ(Motamma) ಪ್ರತಿಕ್ರಿಯೆ ನೀಡಿದ್ದಾರೆ. ಈ ಬಾರಿ ನನ್ನ ಮಗಳಿಗೆ ಟಿಕೆಟ್ ಕೊಡುವಂತೆ ಪಕ್ಷದ ವರಿಷ್ಠರಲ್ಲಿ ಕೇಳುತ್ತೇನೆ. ಒಂದು ವೇಳೆ ನನ್ನ ಮಗಳಿಗೆ ಟಿಕೆಟ್ ಕೊಡಲ್ಲ ಅಂದ್ರೂ ಪರವಾಗಿಲ್ಲ, ಅವನಿಗೆ(ಕುಮಾರಸ್ವಾಮಿ) ಟಿಕೆಟ್ ಕೊಡುವುದಕ್ಕಿಂತ ಪಕ್ಷದಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕನಿಗೆ ಟಿಕೆಟ್ ಕೊಡಲಿ. ಅದನ್ನ ಬಿಟ್ಟು ಒಂದ್ಸರಿ ಕೈ ಸರಿ ಇಲ್ಲ, ಬಾಯಿ ಚೆನ್ನಾಗಿಲ್ಲ ಅಂತಾ ಗೊತ್ತಾಗಿರೋ ವ್ಯಕ್ತಿಗೆ ಕಾಂಗ್ರೆಸ್ನವರು ಹೇಗೆ ಟಿಕೆಟ್ ಕೊಡ್ತಾರೆ ಅಂತಾ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಯವರನ್ನ ಮೋಟಮ್ಮ ನಯವಾಗಿಯೇ ಛೇಡಿಸಿದ್ದಾರೆ.
ಮೂಡಿಗೆರೆ ಶಾಸಕರು ಸಿದ್ದರಾಮಯ್ಯನವರನ್ನ ಭೇಟಿ ಮಾಡಿರಬಹುದು, ಹಾಗಂತ ಸಿದ್ದರಾಮಯ್ಯ ಅದನ್ನ ಒಪ್ಪಿಕೊಳ್ತಾರಾ? 40 ಪರ್ಸೆಂಟ್ ತೆಗೆದುಕೊಳ್ಳುವ ಬಿಜೆಪಿ ಅವರು ಪಕ್ಷಕ್ಕೆ ಬರಲಿ ಅಂತಾ ಸಿದ್ದರಾಮಯ್ಯ ಹೇಳ್ತಾರಾ? ಬಿಜೆಪಿಯಲ್ಲಿ ಮೇವು ಸಿಕ್ತು ಅಂತಾ ನಮ್ಮಲ್ಲಿಂದ 17 ಜನ ಆ ಪಕ್ಷಕ್ಕೆ ಹೋದ್ರು, ಈಗ ಕಾಂಗ್ರೆಸ್ನಲ್ಲಿ ಮೇವು ಸಿಗುತ್ತೆ ಅಂತಾ ಬರೋರಿಗೆ ಅವಕಾಶ ಕೊಡಲು ಹೇಗೆ ಸಾಧ್ಯವಾಗುತ್ತೆ ಅಂತಾ ಮೋಟಮ್ಮ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಮುಂದಿನ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ವೇದಿಕೆ ಸಿದ್ದಮಾಡಿಕೊಳ್ತಿರೋ ಎಂ.ಪಿ ಕುಮಾರಸ್ವಾಮಿಗೆ ಡೋಂಟ್ ಕಮ್ ಅನ್ನೋ ಖಡಕ್ ಉತ್ತರವನ್ನ ಕಾಂಗ್ರೆಸ್ನ ಹಿರಿಯ ನಾಯಕಿ, ಮಾಜಿ ಸಚಿವೆ ಮೋಟಮ್ಮ ನೀಡಿದ್ದಾರೆ. ಇದನ್ನೂ ಓದಿ: Viral Video: 6 ಮಂದಿ ಬೀದಿ ಕಾಮುಕರನ್ನು ಹೊಡೆದುರುಳಿಸಿದ ಯುವತಿ
ಸ್ವಂತ ಮನೆಯನ್ನೇ ಬಾಡಿಗೆಗೆ ನೀಡಿ, ಬಾಡಿಗೆ ಮನೆಯಲ್ಲಿದ್ದೇನೆ ನಾನು 8 ಚುನಾವಣೆಗಳನ್ನ ಎದುರಿಸಿದ್ದೇನೆ, ಆದ್ರೆ 2018ರ ಚುನಾವಣೆ ತುಂಬಾ ದುಸ್ತರವಾಗಿತ್ತು. ತುಂಬಾ ನೋವು ತಿಂದಿದ್ದೇನೆ, ಆ ಚುನಾವಣೆ ವೆಚ್ಚವನ್ನ ಭರಿಸಲು ನನ್ನ ಸ್ವಂತ ಮನೆಯನ್ನೇ ಬಾಡಿಗೆಗೆ ನೀಡಿ, ಇದೀಗ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇನೆ ಅಂತಾ ಮೋಟಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನನಗೆ ಈಗಲೂ ತುಂಬಾ ನೋವಿದೆ ಅಂತಾ ಭಾವುಕರಾಗಿಯೇ ಮಾತನಾಡಿದ್ರು. ಹೀಗಾಗಿ ನನ್ನಂಥವರು ಚುನಾವಣೆ ಎದುರಿಸೋದು ತುಂಬಾನೇ ಕಷ್ಟ, ಆ ಶಕ್ತಿಯೂ ನನ್ನಲ್ಲಿ ಉಳಿದಿಲ್ಲ, ಆದ್ದರಿಂದ 2023ರ ಚುನಾವಣೆಯಲ್ಲಿ ನಾನು ನಿಲ್ಲೋದಿಲ್ಲ. ಹಾಗಾಗಿಯೇ ನನ್ನ ಮಗಳಿಗೆ ಟಿಕೆಟ್ ಕೊಡುವಂತೆ ಪಕ್ಷದ ವರಿಷ್ಠರಲ್ಲಿ ಕೇಳುತ್ತೇನೆ ಅಂತಾ ಮೋಟಮ್ಮ ಹೇಳಿದ್ದಾರೆ.
ಸಹಜವಾಗಿಯೇ ಸಿದ್ದರಾಮಯ್ಯನವರ ಮೇಲೆ ಕೋಪ ಬಂದಿತ್ತು ಈ ಹಿಂದೆ ಸಿದ್ದರಾಮಯ್ಯವರು ಸಿಎಂ ಆದಾಗ ನನಗೆ ಸಚಿವ ಸ್ಥಾನ ಕೊಡಲಿಲ್ಲ ಎಂಬ ಅಸಮಾಧಾನ ಇತ್ತು. ಜಯಮಾಲಾ ಸೇರಿದಂತೆ ಕೆಲವರನ್ನ ಮೊದಲ ಬಾರಿ ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡಿದ್ರು. ಆದರೆ ಜೀವಮಾನವಿಡೀ ಪಕ್ಷಕ್ಕಾಗಿ ದುಡಿದು ಕೆಲಸ ಮಾಡಿದ್ದ ನನ್ನನ್ನ ಕಡೆಗಣಿಸಲಾಯ್ತು. ಹಾಗಂತ ಅಂದಿದ್ದ ಅಸಮಾಧಾನ, ಬೇಸರ ಯಾವುದೂ ಈಗ ಇಲ್ಲ. ಈಗಲೂ ಪಕ್ಷಕ್ಕಾಗಿ ನಾನು ದುಡಿಯುತ್ತಿದ್ದೇನೆ, ಆದರೆ ನನಗೆ ಆದ ನೋವು-ನಲಿವುಗಳ ಬಗ್ಗೆ ಬಿದಿರು ನಿನ್ಯಾರಿಗಲ್ಲದವಳು ಆತ್ಮಕಥನದಲ್ಲಿ ಬರೆದಿದ್ದೇನೆ ಎಂದರು. ನನ್ನ ಬೆಳವಣಿಗೆಯಲ್ಲಿ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಪಾಲು ದೊಡ್ಡದಿದೆ, ಹಾಗಾಗಿಯೇ ನನ್ನ ಆತ್ಮಕಥನವನ್ನ ಅವರಿಂದ ಬಿಡುಗಡೆ ಮಾಡಿಸಿದೆ ಅಂತಾ ಮೋಟಮ್ಮ ತಿಳಿಸಿದ್ರು. ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರನ್ನ ಕೂಡ ಆಹ್ವಾನಿಸಿದ್ದೆ, ಆದರೆ ಅವರು ಯಾಕೆ ಬರಲಿಲ್ಲ ನನಗೆ ಗೊತ್ತಿಲ್ಲ ಅಂತಾ ಮೋಟಮ್ಮ ಪ್ರತಿಕ್ರಿಯೆ ನೀಡಿದ್ರು. ಇದನ್ನೂ ಓದಿ: ‘777 ಚಾರ್ಲಿ’ ಡೈರೆಕ್ಟರ್ಗೆ ಬಂತು ಬಾಲಿವುಡ್ ಸ್ಟಾರ್ ನಟ ಜಾನ್ ಅಬ್ರಾಹಂ ಕಾಲ್; ಎಲ್ಲಾ ಚಾರ್ಲಿ ಮಹಿಮೆ
ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ