ಚಿಕ್ಕಮಗಳೂರು: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಮನೆ ಮೇಲೆ ಐಟಿ ದಾಳಿ
ಯಾರಿಗೂ ಅನುಮಾನ ಬಾರದಿರಲೆಂದು ಅಭಿನವ್ ವೆಡ್ಸ್ ದೀಪಿಕಾ ಎಂಬ ಪೋಸ್ಟರ್ ಅಂಟಿಸಿಕೊಂಡಿರುವ ವಾಹನಗಳಲ್ಲಿ ಐಟಿ ಅಧಿಕಾರಿಗಳು ಬಂದಿದ್ದರು.
ಚಿಕ್ಕಮಗಳೂರು: ಕಾಂಗ್ರೆಸ್ ನಾಯಕಿ ಗಾಯತ್ರಿ ಶಾಂತೇಗೌಡ ಅವರ ಮನೆ ಮೇಲೆ ಗುರುವಾರ (ನ 17) ಐಟಿ ದಾಳಿ ನಡೆದಿದೆ. ನಗರದ ಹೂವಿನ ಮಾರ್ಕೆಟ್ ರಸ್ತೆಯಲ್ಲಿರುವ ಗಾಯತ್ರಿ ಶಾಂತೇಗೌಡ ಅವರ ಮನೆಗೆ 10ಕ್ಕೂ ಹೆಚ್ಚು ವಾಹನಗಳಲ್ಲಿ ಐಟಿ ಅಧಿಕಾರಿಗಳು ಬೆಳಿಗ್ಗೆಯೇ ಬಂದರು. ಮುಂಜಾನೆಯಿಂದಲೂ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಧಿಕಾರಿಗಳು ಬಂದಿರುವ ಕಾರಿನ ಮುಂಭಾಗದ ಗ್ಲಾಸ್ ಮೇಲೆ ಮದುವೆ ಬೋರ್ಡ್ ಇದೆ. ಯಾರಿಗೂ ಅನುಮಾನ ಬಾರದಿರಲೆಂದು ಅಭಿನವ್ ವೆಡ್ಸ್ ದೀಪಿಕಾ ಎಂಬ ಪೋಸ್ಟರ್ ಅಂಟಿಸಿಕೊಂಡಿರುವ ವಾಹನಗಳಲ್ಲಿ ಐಟಿ ಅಧಿಕಾರಿಗಳು ಬಂದಿದ್ದಾರೆ. ಗಾಯತ್ರಿ ಅವರ ಪತಿ ಶಾಂತೇಗೌಡರು ಗುತ್ತಿಗೆದಾರರು. ಕಳಸಾಪುರ ರಸ್ತೆಯಲ್ಲಿರುವ ಅವರ ಮಾಲೀಕತ್ವದ ಕ್ರಷರ್ ಮೇಲೆಯೂ ಐಟಿ ಅಧಿಕಾರಿಗಳ ದಾಳಿ ನಡೆದಿದೆ. ದಾಳಿಯ ವೇಳೆ ಗಾಯತ್ರಿ ಶಾಂತೇಗೌಡರಿಗೆ ಸಂಬಂಧಿಸಿದ ಆಸ್ತಿ ವಿವರಗಳನ್ನು ಅಧಿಕಾರಿಗಳು ಪಡೆದುಕೊಳ್ಳುತ್ತಿದ್ದಾರೆ.
ಹಾಸನ ಜಿಲ್ಲೆ ಬೇಲೂರಿನಲ್ಲಿರುವ ಅಳಿಯ ಸಂತೋಷ್ ಅವರ ಮನೆಯ ಮೇಲೂ ಐಟಿ ಅಧಿಕಾರಿಗಳ ದಾಳಿ ನಡೆದಿದೆ. ಬೇಲೂರು ಪಟ್ಟಣದ ಚನ್ನಕೇಶವಗೌಡರು ಬೀದಿಯಲ್ಲಿರು ಸಂತೋಷ್ ಅವರ ಮನೆಯಿದೆ. ಸಂತೋಷ್ ಅವರಿಗೆ ಸೇರಿದ ಮನೆ, ಕಲ್ಯಾಣ ಮಂಟಪದಲ್ಲಿಯೂ ಐಟಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.
ಡಯಾಗ್ನಸ್ಟಿಕ್ ಸೆಂಟರ್ಗಳ ಮೇಲೆ ಐಟಿ ದಾಳಿ
ಆದಾಯ ತೆರಿಗೆ ವಂಚನೆ ಮಾಡಿದ ಆರೋಪದ ಮೇಲೆ ರಾಜಧಾನಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಮತ್ತಿತರ ಕಡೆ ಕೆಲ ಆಸ್ಪತ್ರೆಗಳ ಲ್ಯಾಬ್ ಮತ್ತು ಡಯಾಗ್ನಸ್ಟಿಕ್ ಸೆಂಟರ್ಗಳ ಮೇಲೆ ಐಟಿ ಅಧಿಕಾರಿಗಳು ನಿನ್ನೆ (ನ.2) ದಾಳಿ ನಡೆಸಿದ್ದರು. ಈ ಅಧಿಕಾರಿಗಳು ಮುಂಬೈನಿಂದ ಬಂದಿದ್ದರು. ಸಿಆರ್ಪಿಎಫ್ ಭದ್ರತೆಯೊಂದಿಗೆ ಈ ದಾಳಿ ನಡೆಯಿತು.
ಎಂ.ಟಿ.ಬಿ.ನಾಗರಾಜ್ ಬಾಮೈದನಿಗೆ ಐಟಿ ಶಾಕ್
ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ (MTB Nagaraj) ಬಾಮೈದನ ನಿವಾಸದ ಮೇಲೆಯೂ ಇತ್ತೀಚೆಗೆ ಐಟಿ ದಾಳಿಯಾಗಿತ್ತು. ಎಂ.ಟಿ.ಬಿ ನಾಗರಾಜ್ ಬಾಮೈದ ಚಂದ್ರಶೇಖರ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಎರಡು ಇನೋವಾ ಕಾರಿನಲ್ಲಿ ಬಂದಿದ್ದ 8 ಮಂದಿ ಐಟಿ ಅಧಿಕಾರಿಗಳ ತಂಡ ಶೋಧಕಾರ್ಯ ನಡೆಸಿದ್ದರು.