
ಚಿಕ್ಕಮಗಳೂರು, ಆಗಸ್ಟ್ 26: ಈದ್ ಮಿಲಾದ್ ಮೆರವಣಿಗೆಯ ಹಿನ್ನೆಲೆ ಅಳವಡಿಸಲಾಗಿದ್ದ ಟಿಪ್ಪು ಕಟೌಟ್ ವಿಡಿಯೋಗೆ ದೇಶ ವಿರೋಧಿ ಹಾಡು ಬಳಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದ ಪ್ರಸಂಗ ಮಾಸುವ ಮುನ್ನವೇ ಚಿಕ್ಕಮಗಳೂರಲ್ಲಿನ (Chikkamagaluru) ಮತ್ತೊಂದು ಘಟನೆ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಈದ್ ಮಿಲಾದ್ ಮೆರವಣಿಗೆ ಹಿನ್ನೆಲೆ ಟಿಪ್ಪು ನಗರದಲ್ಲಿ ಐ ಲವ್ ಮೊಹಮ್ಮದ್ ಬ್ಯಾನರ್ ಅಳವಡಿಕೆ ಮಾಡಲಾಗಿರೋದೀಗ ಕಿಡಿ ಹೊತ್ತಿಸಿದೆ. ಕಳೆದ ವರ್ಷ ಈದ್ ಮಿಲಾದ್ ವೇಳೆ ಉತ್ತರ ಪ್ರದೇಶದ ಕಾನ್ಪುರದಿಂದ ಪ್ರಾರಂಭವಾಗಿದ್ದ ಈ ರೀತಿಯ ಬ್ಯಾನರ್ ವಿವಾದ, ಕರ್ನಾಟಕ ಸೇರಿ ದೇಶಾದ್ಯಂತ ಸದ್ದು ಮಾಡಿತ್ತು. ಅದೇ ಬ್ಯಾನರ್ ಈಗ ಚಿಕ್ಕಮಗಳೂರಿನಲ್ಲಿ ರಾರಾಜಿಸಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವಾದ ಈದ್ ಮಿಲಾದ್ ಉನ್ ನಬಿ ಹಬ್ಬದ ಪ್ರಯುಕ್ತ ಮೆರವಣಿಗೆ ವೇಳೆ ಮೊದಲ ಬಾರಿಗೆ ಈ ರೀತಿಯ ಬ್ಯಾನರ್ ಬಳಸಲಾಗಿತ್ತು. ಉತ್ತರ ಪ್ರದೇಶದ ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿಯೂ ‘ಐ ಲವ್ ಮೊಹಮ್ಮದ್’ ಘೋಷವಾಕ್ಯ ವೈರಲ್ ಆಗಿತ್ತು. ಮುಂಬೈ, ತೆಲಂಗಾಣ, ಹೈದರಾಬಾದ್, ಮಹಾರಾಷ್ಟ್ರದ ನಾಗ್ಪುರ, ವೋಮಿನ್ಪುರದಲ್ಲೂ ‘ಐ ಲವ್ ಮೊಹಮ್ಮದ್’ ಹೆಸರಿನಲ್ಲಿ ರ್ಯಾಲಿಗಳು ನಡೆದಿದ್ದವು.
ಇದನ್ನೂ ಓದಿ: ಚಿಕ್ಕಮಗಳೂರು ಟಿಪ್ಪು ಕಟೌಟ್ ವಿವಾದ: ಪ್ರಮುಖ ಆರೋಪಿ ಅಫ್ರಿದ್ ಬಂಧನ!
ಅಷ್ಟಕ್ಕೂ ಐ ಲವ್ ಮೊಹಮ್ಮದ್ ಬ್ಯಾನರ್ ಮತ್ತು ಘೋಷಣೆ ವಿವಾದ ಕರ್ನಾಟಕದಲ್ಲಿ ಇದು ಮೊದಲೇನಲ್ಲ. ಈ ಹಿಂದೆಯೂ ರಾಜ್ಯದ ಹಲವೆಡೆ ಈ ವಿಚಾರ ಸಂಘರ್ಷಕ್ಕೆ ಕಾರಣವಾಗಿತ್ತು. ಬೆಳಗಾವಿ, ದಾವಣಗೆರೆ, ಆಳಂದ ಸೇರಿ ಇತರ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆದಿದ್ದವು. ಪೊಲೀಸ್ ಪ್ರಕರಣಗಳು ದಾಖಲಾಗಿ, ರಾಜಕೀಯ ಜಟಾಪಟಿಗಳಿಗೂ ಈ ವಿಚಾರ ಕಾರಣವಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:28 pm, Wed, 26 August 26