
ಚಿಕ್ಕಮಗಳೂರು, ಆಗಸ್ಟ್ 29: ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ ವೇಳೆ ಬಂಧನದ ಭೀತಿಯಿಂದ ಹೆದರಿ ಓಡುವಾಗ ಓರ್ವ ವ್ಯಕ್ತಿ ಕಾಲುಜಾರಿ ಜಾರಿ ಬಿದ್ದು ಬಂಡೆಗೆ ತಲೆ ಬಡಿದು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ಚಿಕ್ಕಮಗಳೂರು (chikkamagaluru) ತಾಲೂಕಿನ ಬಸಾಪುರ ಗ್ರಾಮದ ಸಮೀಪದ ಅರಣ್ಯದಲ್ಲಿ ನಡೆದಿದೆ. ಗುಡ್ಡೆಕೊಪ್ಪ ಗ್ರಾಮದ ನಿವಾಸಿ ರಮೇಶ್ (35) ಮೃತ (death) ದುರ್ದೈವಿ. ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಚಿಕ್ಕಮಗಳೂರು ತಾಲೂಕಿನ ಬಸಾಪುರ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಾಳೆಹೊನ್ನೂರು ಪೊಲೀಸರು ಕಳೆದ ರಾತ್ರಿ ದಿಢೀರ್ ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಪತ್ನಿಯ ಕೊಂದು ಹೃದಯಾಘಾತದ ಕಥೆ ಕಟ್ಟಿದ ಪತಿ! ಪೊಲೀಸ್ ತನಿಖೆಯಲ್ಲಿ ಬಯಲಾಯ್ತು ರಾಕ್ಷಸೀ ಕೃತ್ಯ
ದಾಳಿ ವೇಳೆ ಸ್ಥಳದಲ್ಲಿ 9 ಜನರ ಗುಂಪು ಜೂಜಾಟದಲ್ಲಿ ತೊಡಗಿತ್ತು. ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ಅಲ್ಲಿದ್ದವರು ದಿಕ್ಕಾಪಾಲಾಗಿ ಓಡಲಾರಂಭಿಸಿದ್ದು, ಈ ಪೈಕಿ ಇಬ್ಬರನ್ನು ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರ ಕೈಗೆ ಸಿಕ್ಕಿಬೀಳುವ ಭಯದಿಂದ ತಪ್ಪಿಸಿಕೊಳ್ಳಲು ಓಡಿದ ರಮೇಶ್, ಕತ್ತಲಿನಲ್ಲಿ ಕಾಲುಜಾರಿ ಬಂಡೆಕಲ್ಲಿನ ಮೇಲೆ ಬಿದ್ದಿದ್ದಾರೆ. ತಲೆಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾದ ಪರಿಣಾಮ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ರಕ್ತಸ್ರಾವವಾದ ಸ್ಥಿತಿಯಲ್ಲಿ ರಮೇಶ್ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬಾಳೆಹೊನ್ನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದ ಬಳಿ ಕರ್ತವ್ಯ ಮುಗಿಸಿ ಮನೆಗೆ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವಂತಹ ಘಟನೆ ನಡೆದಿದೆ. ಯಲ್ಲಪ್ಪ ದೊಡಶೇನಟ್ಟಿ ಮೃತ ಚಾಲಕ.
ಇದನ್ನೂ ಓದಿ: ದಂಪತಿ ಕಲಹಕ್ಕೆ 4 ವರ್ಷ ಮಗು ಬಲಿ: ಮಗನನ್ನೇ ಕೊಂದು ಡ್ಯಾಂಗೆ ಬಿಸಾಡಿದ್ದ ತಂದೆ ಅರೆಸ್ಟ್
ಅಪಘಾತವೆಸಗಿ ಪರಾರಿಯಾಗಲು ಯತ್ನಿಸುತ್ತಿದ್ದ ಛತ್ತೀಸ್‌ಗಢ ಮೂಲದ ಲಾರಿ ಚಾಲಕ ಮಹೇಂದ್ರ ಚವರೆಯನ್ನು ಸ್ಥಳೀಯರು ಕೂಡಲೇ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ದುರ್ಘಟನೆಯಿಂದಾಗಿ ಮೃತ ಯಲ್ಲಪ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸಾರಿಗೆ ಇಲಾಖೆಯ ಸಿಬ್ಬಂದಿ ಅಗಲಿದ ಸಹೋದ್ಯೋಗಿಗೆ ಅಂತಿಮ ಗೌರವ ಸಲ್ಲಿಸಿದ್ದಾರೆ. ಈ ಹಿಟ್ ಆ್ಯಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಚಾಲಕನನ್ನು ಬಂಧಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.