ಡೆತ್ ನೋಟ್ ಬರೆದಿಟ್ಟು ಕಂದಾಯ ನಿರೀಕ್ಷಕ ಆತ್ಮಹತ್ಯೆ, ಬಗರ್ ಹುಕುಂ ಅಕ್ರಮಕ್ಕೆ ಪ್ರಾಮಾಣಿಕ ಅಧಿಕಾರಿ ಬಲಿ?
ಕಂದಾಯ ಇಲಾಖೆ ಅಂದ್ರೆ ಚಿನ್ನದ ಮೊಟ್ಟೆ ಇಡುವ ಕೋಳಿ ಇದ್ದಂತೆ. ಆ ಇಲಾಖೆಯಲ್ಲಿ ಕೂತ್ಕೊಂಡು ಹಣ ಮಾಡೋ ಸ್ಕೆಚ್ ಹಾಕೋವ್ರೇ ಹೆಚ್ಚು. ಅಂಥಾದ್ರಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ದ ಕಂದಾಯ ನಿರೀಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ರಮ ಭೂ ಮಾಫಿಯಾಗೆ ಉತ್ತಮ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ.
ಚಿಕ್ಕಮಗಳೂರು: ಚಿಕ್ಕಮಗಳೂರಿನ ತರೀಕೆರೆಯಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡ್ತಿದ್ದ ಸೋಮಶೇಖರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆಯಲ್ಲಿ ದುಡ್ಡಿಲ್ಲದೆ ಯಾವ ಕೆಲಸನೂ ಆಗಲ್ಲ ಅನ್ನೋ ಮಾತಿದೆ. ಆದ್ರೆ ತರೀಕೆರೆಯಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡ್ತಿದ್ದ ಸೋಮಶೇಖರ್ ಒಂದು ರೀತಿ ಬಡವರ ಪಾಲಿನ ಬಂಧುವಾಗಿದ್ರು. ತಾನಾಯಿತು, ತನ್ನ ಕೆಲಸವಾಯ್ತು ಅಂತಾ ಕರ್ತವ್ಯ ಮಾಡಿಕೊಂಡಿದ್ದ ಸೋಮಶೇಖರ್ಗೆ ಅಕ್ರಮವಾಗಿ ಬಗರ್ ಹುಕುಂ ಜಮೀನುಗಳನ್ನ ಸಕ್ರಮ ಮಾಡಿಕೊಳ್ಳುವಂತೆ ಸ್ಥಳೀಯ ರಾಜಕೀಯ ಮುಖಂಡರು ಒತ್ತಡ ಹೇರುತ್ತಿದ್ದರಂತೆ.
ಜನರಿಂದ ಲಕ್ಷಗಟ್ಟಲೆ ಹಣವನ್ನ ತೆಗೆದುಕೊಂಡು ದಾಖಲೆ ಮಾಡಿಕೊಡುವಂತೆ ಆರ್ಐ ಮೇಲೆ ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದರಂತೆ. ಈ ಬಗ್ಗೆ ಸ್ಥಳೀಯ ರಾಜಕೀಯ ಮುಖಂಡರಾದ ಧನ್ಪಾಲ್, ರಮೇಶ್, ಸಂಜೀವ್ ಕುಮಾರ್ ಹೆಸರನ್ನ ಡೆತ್ನೋಟ್ನಲ್ಲಿ ಬರೆದಿಟ್ಟು ಲಕ್ಕವಳ್ಳಿಯ ರಂಗನಾಥ ಸ್ವಾಮಿ ದೇವಸ್ಥಾನ ಪಕ್ಕದ ಭದ್ರಾ ಜಲಾಶಯಕ್ಕೆ ಹಾರಿ ಸೋಮಶೇಖರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತ ಕಂದಾಯ ನಿರೀಕ್ಷಕ ಸೋಮಶೇಖರ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜನರು ಜಲಾಶಯದ ಬಳಿ ಜಮಾಯಿಸಿದ್ರು. ಅಲ್ಲದೇ ಲಕ್ಕವಳ್ಳಿ ಪೊಲೀಸ್ ಠಾಣೆ ಎದುರು ಆರೋಪಿಗಳನ್ನ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ರು. ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯದೆ ಡೆತ್ನೋಟ್ನಲ್ಲಿರುವ ವ್ಯಕ್ತಿಗಳನ್ನ ಬಂಧಿಸಬೇಕು ಅಂತಾ ಮೃತ ಅಧಿಕಾರಿಯ ಕುಟುಂಬಸ್ಥರು, ಸ್ಥಳೀಯರು ಒತ್ತಾಯಿಸಿದ್ರು.
ಬಗರ್ ಹುಕುಂ ಕಮಿಟಿಯಲ್ಲಿ ಭಾರಿ ಅಕ್ರಮದ ಹೊಗೆಯಾಡುತ್ತಿದ್ದು, ರಾಜಕೀಯ ಮುಖಂಡರ ಹಣದಾಸೆಗೆ ಪ್ರಾಮಾಣಿಕ ಅಧಿಕಾರಿಯ ಬಲಿಯಾಗಿದೆ. ಡೆತ್ ನೋಟ್ನಲ್ಲಿ ಆರೋಪಿಗಳ ಹೆಸರನ್ನ ಉಲ್ಲೇಖಿಸಿರೋದ್ರಿಂದ ಸೂಕ್ತ ಕ್ರಮ ಜರುಗಿಸಬೇಕು ಅನ್ನೋ ಆಗ್ರಹ ಕೇಳಿಬಂದಿದೆ. ಇತ್ತ ಡೆತ್ ನೋಟ್ನಲ್ಲಿ ಹೆಸರು ಉಲ್ಲೇಖವಾಗುತ್ತಿದ್ದಂತೆ ಆರೋಪಿಗಳು ಗ್ರಾಮದಿಂದ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸ್ರು ಆರೋಪಿಗಳ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದೇ ಸದ್ಯದ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಡೆತ್ನೋಟ್ ಬರೆದು ಕರ್ತವ್ಯ ನಿರತ ಕಂದಾಯ ನಿರೀಕ್ಷಕ ಆತ್ಮಹತ್ಯೆ; ರಾಜಕೀಯ ನಾಯಕರ ಕಿರುಕುಳವೇ ಕಾರಣ?