ಮೊಟ್ಟೆ ಬದಲು ತಾಯಿ ಕೈಗೆ ದುಡ್ಡು ಕೊಟ್ಟರೆ ಇನ್ನೂ ಚೆನ್ನಾಗಿ ಆಹಾರ ಹಾಕಬಹುದು: ಶೋಭಾ ಕರಂದ್ಲಾಜೆ
ಮೊಟ್ಟೆ ಕೊಡುವುದು ಕೆಲ ಸಮಾಜಕ್ಕೆ ನೋವು ತರುತ್ತೆ ಅಂದ್ರೆ ಸರ್ಕಾರ ವಿಚಾರವನ್ನು ಮರುಪರಿಶೀಲನೆ ಮಾಡಬೇಕು. ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಚಿಕ್ಕಮಗಳೂರು: ಮಕ್ಕಳ ಆಹಾರವನ್ನು ತಾಯಿಗೆ ಬಿಡಬೇಕು. ತಾಯಿಗಿಂತ ಮಕ್ಕಳನ್ನು ಚೆನ್ನಾಗಿ ಯಾರೂ ನೋಡಿಕೊಳ್ಳುವುದಿಲ್ಲ. ಮೊಟ್ಟೆ ಬದಲು ಆ ತಾಯಿ ಕೈಗೆ ದುಡ್ಡು ಕೊಟ್ಟರೆ, ಇನ್ನೂ ಚೆನ್ನಾಗಿ ಆಹಾರವನ್ನ ಹಾಕಬಹುದು. ಈ ಬಗ್ಗೆಯೂ ಚರ್ಚೆ ಆಗಬೇಕು ಎಂದು ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ವಿವಾದಕ್ಕೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಆಹಾರ ಪದ್ದತಿ ಅವರವರ ಆಯ್ಕೆ, ಇದಕ್ಕೆ ಒತ್ತಡ ಹೇರುವುದು ಸರಿಯಲ್ಲ. ಸರ್ಕಾರ, ಯಾವುದೇ ವ್ಯಕ್ತಿಗಳು ಒತ್ತಡ ತಂದು ಬದಲಾಯಿಸಲು ಆಗುವುದಿಲ್ಲ. ಮೊಟ್ಟೆ ಕೊಡುವುದು ಕೆಲ ಸಮಾಜಕ್ಕೆ ನೋವು ತರುತ್ತೆ ಅಂದ್ರೆ ಸರ್ಕಾರ ವಿಚಾರವನ್ನು ಮರುಪರಿಶೀಲನೆ ಮಾಡಬೇಕು. ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.
ಶಾಲೆಗಳಲ್ಲಿ ಮೊಟ್ಟೆ ನೀಡುವ ವಿಚಾರಕ್ಕೆ ಸಂಬಂಧಿಸಿ ಕಳೆದ ಕೆಲವು ದಿನಗಳಿಂದ ಪರ- ವಿರೋಧ ವಿವಿಧ ಅಭಿಪ್ರಾಯಗಳು ಕೇಳಿಬಂದಿದೆ. ಮಧ್ಯಾಹ್ನ ಬಿಸಿಯೂಟ ಯೋಜನೆಯ ಭಾಗವಾಗಿ ಸರ್ಕಾರವು ಮೊಟ್ಟೆಯನ್ನು ನೀಡಲು ಮುಂದಾಗಿರುವ ಬೆಳವಣಿಗೆಯನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಖಂಡಿಸಿದ್ದರು. ಆಹಾರದ ವಿಷಯದಲ್ಲಿ ಎಲ್ಲರಿಗೂ ಸ್ವಾತಂತ್ರ್ಯವಿದೆ. ನಮ್ಮ ಪರಂಪರೆಯ ಭಾಗವಾಗಿರುವ ಆಹಾರ ಕ್ರಮವನ್ನು ಬದಲಿಸಬಾರದು. ಸಾಮೂಹಿಕವಾಗಿ ಮೊಟ್ಟೆ ನೀಡುವುದರಿಂದ ಹಲವರ ನಂಬಿಕೆಗಳಿಗೆ ಧಕ್ಕೆಯುಂಟಾಗುತ್ತದೆ. ಶಾಲೆ ಇರುವುದು ಶಿಕ್ಷಣ ನೀಡಲೆಂದು. ಯಾವುದೇ ಸಮುದಾಯದ ಜೀವನಶೈಲಿಯನ್ನು ಬದಲಿಸಬಾರದು. ಯಾರಿಗೆ ಯಾವುದನ್ನು ಸೇವಿಸಲು ಇಷ್ಟವಿದೆಯೋ ಅದನ್ನು ಸೇವಿಸಲಿ. ಸರ್ಕಾರ ಅದರ ಖರ್ಚು ವಹಿಸಿಕೊಳ್ಳಲಿ ಎಂದು ಸಲಹೆ ಮಾಡಿದ್ದರು.
ಮತಾಂತರ ನಿಷೇಧ ಕಾಯ್ದೆ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಮತಾಂತರದ ಹಾವಳಿಯನ್ನು ಸರ್ಕಾರ ನಿಗ್ರಹಿಸಬೇಕು. ಮನಃಪೂರ್ವಕವಾಗಿ ಯಾರಾದರೂ ಮತಾಂತರವಾದರೆ ನಮ್ಮ ಆಕ್ಷೇಪವಿಲ್ಲ. ಆದರೆ ಒತ್ತಡ, ಆಮಿಷ ಅಥವಾ ಬಲವಂತದಿಂದ ಮತಾಂತರ ಮಾಡಿದರೆ ಸಹಿಸಲು ಆಗುವುದಿಲ್ಲ. ಇದು ಸಮಾಜ ಒಡೆಯುವ ಕೃತ್ಯವಾಗಿದೆ. ಇದರಿಂದ ಸಮಾಜದಲ್ಲಿ ವೈಷಮ್ಯ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದರು. ಮಂಗಳೂರಿನಲ್ಲಿ ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರಂತ. ಮತಾಂತರದ ಹಾವಳಿಯೂ ಇಡೀ ಮನೆಯನ್ನೇ ಬಲಿತೆಗೆದುಕೊಂಡಿದೆ. ಈ ಹಾವಳಿಯನ್ನು ಕಾನೂನಿನ ಮೂಲಕ ನಿಗ್ರಹಿಸಬೇಕು ಎಂದು ಒತ್ತಾಯಿಸಿದ್ದರು.
ಇದನ್ನೂ ಓದಿ: Health Tips: ಮೊಟ್ಟೆಗಿಂತಲೂ ಹೆಚ್ಚು ಪ್ರೋಟೀನ್ ಇರುವ 5 ಸಸ್ಯಾಹಾರಿ ಆಹಾರಗಳಿವು
ಇದನ್ನೂ ಓದಿ: ಶಾಲೆಗಳಲ್ಲಿ ಮೊಟ್ಟೆ ಯೋಜನೆ ಕೈಬಿಡದಿದ್ದರೆ ಬೀದಿಗಿಳಿದು ಹೋರಾಟ -ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಅಖಿಲ ಭಾರತ ಸಸ್ಯಹಾರಿಗಳ ಒಕ್ಕೂಟ