ಶೃಂಗೇರಿಯಲ್ಲೂ ಭೂಕುಸಿತದ ಆತಂಕ: ಬಿರುಕುಗೊಂಡ ಬೃಹತ್ ತಡೆಗೋಡೆ

Sringeri Retaining Wall Cracks: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕು ಕಚೇರಿಯ ಮುಂಭಾಗದ ಬೃಹತ್​ ತಡೆಗೋಡೆ ಬಿರುಕು ಬಿಟ್ಟಿದೆ. ನಿರ್ಮಾಣವಾಗಿ ಕೆಲವೇ ತಿಂಗಳಲ್ಲಿ ತಡೆಗೋಡೆ ಬಿರುಕು ಬಿಟ್ಟಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಮಳೆ ಹೆಚ್ಚಾದರೆ ತಡೆಗೋಡೆ ಕೆಳಭಾಗದಲ್ಲಿರುವ ಮನೆ, ಅಂಗಡಿಗಳು ತುಂಗಾ ನದಿ ಪಾಲಾಗುವ ಭೀತಿ ಎದುರಾಗಿದೆ.

ಶೃಂಗೇರಿಯಲ್ಲೂ ಭೂಕುಸಿತದ ಆತಂಕ: ಬಿರುಕುಗೊಂಡ ಬೃಹತ್ ತಡೆಗೋಡೆ
Wallproblem
Edited By:

Updated on: Jul 09, 2026 | 5:28 PM

ಮುಖ್ಯಾಂಶಗಳು

  • 50 ಅಡಿ ಎತ್ತರ, 120 ಅಡಿ ಅಗಲವಾದ ತಡೆಗೋಡೆಯಲ್ಲಿ ಬಿರುಕು
  • ತಡೆಗೋಡೆ ಕುಸಿಯುವ ಆತಂಕದಲ್ಲಿ ಸುತ್ತಮುತ್ತಲಿನ ನಿವಾಸಿಗಳು
  • ಮಳೆ ಹೆಚ್ಚಾದರೆ ತಡೆಗೋಡೆ ಸಂಪೂರ್ಣ ಕುಸಿದು ಬೀಳುವ ಆತಂಕ

ಚಿಕ್ಕಮಗಳೂರು, ಜುಲೈ 09: ಜಿಲ್ಲೆಯ ಶೃಂಗೇರಿ ತಾಲೂಕು ಕಚೇರಿಯ ಮುಂಭಾಗದಲ್ಲಿ ನಿರ್ಮಿಸಲಾಗಿರುವ ಬೃಹತ್​ ತಡೆಗೋಡೆಯಲ್ಲಿ ಬಿರುಕು (Wall Cracks) ಕಾಣಿಸಿಕೊಂಡಿದ್ದು, ಧಾರಾಕಾರ ಮಳೆಗೆ (Rain) ತಡೆಗೋಡೆ ಸಂಪೂರ್ಣ ಕುಸಿದು ಬೀಳುವ ಆತಂಕ ಎದುರಾಗಿದೆ. ತಡೆಗೋಡೆಯಲ್ಲಿನ ಬಿರುಕು ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ. ಇನ್ನು ಅದರ ಕೆಳಭಾಗದಲ್ಲಿ 4 ಮನೆ, 18ಕ್ಕೂ ಹೆಚ್ಚು ಅಂಗಡಿಗಳಿದ್ದು, ತಡೆಗೋಡೆ ಕುಸಿದರೆ ತುಂಗಾ ನದಿ ಪಾಲಾಗಲಿವೆ.

ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಆತಂಕ

ಸುಮಾರು 50 ಅಡಿ ಎತ್ತರ ಹಾಗೂ 120 ಅಡಿ ಅಗಲವಿರುವ ಈ ಬೃಹತ್ ತಡೆಗೋಡೆಯಲ್ಲಿನ ಬಿರುಕು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಪ್ರಸ್ತುತ ಮಳೆಗಾಲವಾಗಿರುವುದರಿಂದ ಮಳೆ ಮತ್ತಷ್ಟು ಹೆಚ್ಚಾದರೆ ತಡೆಗೋಡೆ ಸಂಪೂರ್ಣವಾಗಿ ಕುಸಿದು ಬೀಳುವ ಅಪಾಯವಿದೆ. ಒಂದು ವೇಳೆ ಈ ದುರಂತ ಸಂಭವಿಸಿದರೆ, ತಡೆಗೋಡೆಯ ಕೆಳಗಿರುವ ಮನೆ ಹಾಗೂ ಅಂಗಡಿಗಳು ನೇರವಾಗಿ ಭದ್ರಾ ನದಿಯ ಪಾಲಾಗಲಿವೆ. ಇದು ಶೃಂಗೇರಿ ಶಾರದಾ ಮಠಕ್ಕೆ ತೆರಳುವ ಪ್ರಮುಖ ಮಾರ್ಗದಲ್ಲೇ ಇರುವುದರಿಂದ ನಿರಂತರ ಸಾರ್ವಜನಿಕ ಸಂಚಾರವೂ ಇದ್ದು, ಹೆದರಿಕೆ ಶುರುವಾಗಿದೆ.

ಕೆಲವೇ ತಿಂಗಳಲ್ಲಿ ಬಯಲಾದ ಕಳಪೆ ಕಾಮಗಾರಿ

ಕಳೆದ 2024ರ ಮಳೆಗಾಲದಲ್ಲಿ ಕುಸಿತ ಕಂಡಿದ್ದ ಇದೇ ಜಾಗದಲ್ಲಿ, ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಈ ಹೊಸ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆದರೆ, ಕಾಮಗಾರಿ ಪೂರ್ಣಗೊಂಡು ಕೇವಲ ಕೆಲವೇ ತಿಂಗಳು ಕಳೆಯುವುದರೊಳಗಾಗಿ ತಡೆಗೋಡೆ ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ಗೋಡೆಯ ಒಳಗೆ ಕೇವಲ ಮಣ್ಣು ತುಂಬಿ ಕಳಪೆ ಕಾಮಗಾರಿ ನಡೆಸಿರುವುದೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಜಿಲ್ಲಾಡಳಿತ ಮಾತ್ರ ಇದುವರೆಗೆ ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಮಾಜಿ ಸಚಿವ ಡಿಎನ್​ ಜೀವರಾಜ್ ನೇತೃತ್ವದ ತಂಡದಿಂದ ಪರಿಶೀಲನೆ

ಇನ್ನು ಮಾಜಿ ಸಚಿವ ಡಿಎನ್​ ಜೀವರಾಜ್ ನೇತೃತ್ವದ ಬಿಜೆಪಿ ಮುಖಂಡರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕೋಟಿಗಟ್ಟಲೇ ಹಣ ವೆಚ್ಚ ಮಾಡಿದ್ದರೂ ಕೇವಲ ಮಣ್ಣು ತುಂಬಿ ಅತ್ಯಂತ ಕಳಪೆ ಕಾಮಗಾರಿ ಮಾಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸುತ್ತಮುತ್ತಲಿನ ಜನರ ಜೀವ ಮತ್ತು ಆಸ್ತಿ ರಕ್ಷಣೆಗೆ ಮುಂದಾಗಬೇಕು” ಎಂದು ಅವರು ಒತ್ತಾಯಿಸಿದರು.

ತಹಶೀಲ್ದಾರ್​ ಅನುಪ್ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಟಿವಿ9ಗೆ ತಹಶೀಲ್ದಾರ್​ ಅನುಪ್ ಪ್ರತಿಕ್ರಿಯೆ ನೀಡಿದ್ದು, ‘‘ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೆಳಭಾಗದಲ್ಲಿ ಇರುವ ಅಂಗಡಿಗಳು ಮತ್ತು ಮನೆಗಳನ್ನ ಖಾಲಿ ಮಾಡಲು ಸೂಚನೆ ನೀಡಿದ್ದೇವೆ. ತಾಲೂಕು ಆಡಳಿತದಿಂದ ಕಾಳಜಿ ಕೇಂದ್ರ ತರೆಯುತ್ತೇವೆ. ಆ ಮೂಲಕ ಮುಂಜಾಗ್ರತಾ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದೇವೆ. ಇನ್ನು ತಜ್ಞರ ತಂಡ ಬೆಂಗಳೂರಿನಿಂದ ಶೃಂಗೇರಿಗೆ ಬರುತ್ತಿದ್ದು, ಅವರ ಅಭಿಪ್ರಾಯ ಪಡೆದು ಮುಂದಿನ ಕ್ರಮಕೈಗೊಳ್ಳುವುದಾಗಿ’’ ತಿಳಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:20 pm, Thu, 9 July 26

Follow Us