ಚಿಕ್ಕಮಗಳೂರಲ್ಲಿ ಮಂಗನ ಕಾಯಿಲೆಗೆ ಕಾರ್ಮಿಕ ಮಹಿಳೆ ಬಲಿ, ಸೌದೆ ತರಲು ಎಸ್ಟೇಟಿಗೆ ಹೋಗಿದ್ದೇ ತಪಾಯ್ತಾ?
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನುಗ್ಗಿ ಗ್ರಾ.ಪಂ. ವ್ಯಾಪ್ತಿಯ ದೇವಗನ್ ಎಸ್ಟೇಟ್ ಮಹಿಳೆ ಜ್ವರ, ಸುಸ್ತು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಪ್ರಾಣ ಬಿಟ್ಟಿದ್ದಾರೆ. ಮೃತ ಮಹಿಳೆ ಎಸ್ಟೇಟಿಗೆ ಸೌದೆ ತರಲು ಹೋದಾಗ ಮಂಗನ ಕಾಯಿಲೆ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚಿಕ್ಕಮಗಳೂರು, ಫೆ.28: ಕಾಫಿನಾಡು ಚಿಕ್ಕಮಗಳೂರಲ್ಲಿ ಕೆಎಫ್ಡಿ (Kyasanur Forest Disease- KFD) ಸೋಂಕಿಗೆ ಮತ್ತೊಂದು ಬಲಿಯಾಗಿದೆ (Death). ಕೂಲಿ ಕಾರ್ಮಿಕ ಮಹಿಳೆ (Woman) ಕೊಟ್ರಮ್ಮ (43) ಮಂಗನ ಕಾಯಿಲೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಕೊಪ್ಪ ತಾಲೂಕಿನ ನುಗ್ಗಿ ಗ್ರಾ.ಪಂ. ವ್ಯಾಪ್ತಿಯ ದೇವಗನ್ ಎಸ್ಟೇಟ್ ಮಹಿಳೆ ಜ್ವರ, ಸುಸ್ತು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಕಳೆದ ಸೋಮವಾರ ವೈದ್ಯರು ಮಹಿಳೆಯ ರಕ್ತದ ಮಾದರಿ ಸಂಗ್ರಹಿಸಿದ್ದರು. ಎಸ್ಟೇಟಿಗೆ ಸೌದೆ ತರಲು ಹೋದಾಗ ಸೋಂಕು ತಗುಲಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕೊಪ್ಪ ಹಾಗೂ ಎನ್.ಆರ್ ಪುರದಲ್ಲಿ ಮತ್ತೆ 6 ಮಂದಿಗೆ ಸೋಂಕು ತಗುಲಿದೆ. ಕೊಪ್ಪ ತಾಲೂಕಿನಲ್ಲೇ ಮಂಗನ ಕಾಯಿಲೆ ಹೆಚ್ಚಾಗಿದೆ. ಕೊಪ್ಪ ತಾಲೂಕಿನಲ್ಲಿ ನಿನ್ನೆ ಒಂದೇ ದಿನ 6 ಜನರಲ್ಲಿ ಮಂಗನ ಕಾಯಿಲೆ ಪತ್ತೆಯಾಗಿದೆ.
ಮಲೆನಾಡಿನಲ್ಲಿ ಮಂಗನ ಕಾಯಿಲೆ ಕಾಟ
ಮಲೆನಾಡಿನ ಭಾಗದಲ್ಲಿ ಕೆಎಫ್ ಡಿ ರೋಗ ಉಲ್ಬಣಗೊಂಡಿದೆ. ಕಳೆದ ತಿಂಗಳು ಹೊಸನಗರ ಯುವತಿಯು ಕೆಎಫ್ ಡಿಗೆ ಬಲಿಯಾಗಿದ್ದಳು. ಉತ್ತರ ಕನ್ನಡ ಜಿಲ್ಲೆಯ ವೃದ್ದೆಯು ಕೆಎಫ್ ಡಿಗೆ ಬಲಿಯಾಗಿದ್ದಾಳೆ. ಬೇಸಿಗೆ ಬಿಸಿಲು ಜಾಸ್ತಿಯಾಗುತ್ತಿದ್ದಂತೆ ಮಲೆನಾಡಿನ ಭಾಗದಲ್ಲಿ ಕೆಎಫ್ ಡಿ ಕಾಯಿಲೆ ದಿನೇ ದಿನೇ ಆತಂಕ ಸೃಷ್ಟಿಮಾಡುತ್ತಿದೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆಗೆ 2ನೇ ಬಲಿ, ಹೆಚ್ಚಾದ ಆತಂಕ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದ 57 ವರ್ಷದ ನಾಗಮ್ಮ ಚಿಕಿತ್ಸೆ ಫಲಕಾರಿಯಾಗದೆ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೆಎಫ್ ಡಿ (ಮಂಗನಕಾಯಿಲೆ)ಯಿಂದ ಬಳಲುತ್ತಿದ್ದ ವೃದ್ದೆಯು ಮೃತಪಟ್ಟಿದ್ದಾರೆ. ಫೆ. 3 ರಂದು ಕೆಎಫ್ ಡಿ ಹಿನ್ನಲೆಯಲ್ಲಿ ಶಿವಮೊಗ್ಗದದ ಮೆಗ್ಗಾನ್ ಗೆ ದಾಖಲಾಗಿದ್ರು. ಬಳಿಕ ಉಡುಪಿಯ ಮಣಿಪಾಲಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಶೀಫ್ಟ್ ಮಾಡಲಾಗಿತ್ತು. ಮತ್ತೆ ಆರೋಗ್ಯ ಸ್ಥಿತಿ ಹದಿಗೆಡುತ್ತಿದ್ದಂತೆ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ವೃದ್ಧೆಯನ್ನು ಪುನಃ ಶಿಫ್ಟ್ ಮಾಡಿದ್ದರು. ಕೆಎಫ್ ಡಿ ರೋಗದಿಂದ ಬಳಲಿ ಸದ್ಯ ವೃದ್ದೆಯು ಮೃತಪಟ್ಟಿದ್ದಾರೆ.
ಇದೇ ಕೆಎಫ್ ಡಿಗೆ ಕಳೆದ ತಿಂಗಳು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಪ್ಪನಮನೆ ಗ್ರಾಮದ ಅನನ್ಯ (18) ವರ್ಷದ ಯುವತಿ ಬಲಿಯಾಗಿದ್ದಳು. ಕೆಎಫ್ ಡಿ ರೋಗ ತಡೆಗಟ್ಟಲು ಜಿಲ್ಲಾ ಆರೋಗ್ಯ ಇಲಾಖೆಯು ಎಲ್ಲ ರೀತಿಯ ಕ್ರಮಕ್ಕೆ ಮುಂದಾಗಿದೆ. ಸದ್ಯ ಮಲೆನಾಡಿನಲ್ಲಿ ಮೃತ ಮಂಗಗಳ ದೇಹದಿಂದ ಬರುವ ಉಣ್ಣೆಗಳು ಕಚ್ಚಿದ್ರೆ ಕೆಎಫ್ ಡಿ ಕಾಯಿಲೆಯು ಬರುತ್ತಿದೆ. ಕಾಡಿನಂಚಿನಲ್ಲಿರುವ ಜನರಿಗೆ ಸದ್ಯ ಕೆಎಫ್ ಡಿ ರೋಗದ ಕಾಟ ಶುರುವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:47 pm, Wed, 28 February 24