ಶಿಕ್ಷಕಿಯರ ವಸ್ತ್ರ ಸಂಹಿತೆ: ತಮಗೆ ಬೇಕಾದ ಉಡುಗೆ ತೊಡಲು ಶಿಕ್ಷಕಿಯರು ಸ್ವತಂತ್ರರು ಎಂದು ಚಿಕ್ಕಮಗಳೂರಿನ ಉಪನಿರ್ದೇಶಕರಿಂದ ಸ್ಪಷ್ಟನೆ

ಸಭ್ಯ ಉಡುಪು ಧರಿಸಲು ಶಿಕ್ಷಕರು ಸ್ವತಂತ್ರರಾಗಿರುತ್ತಾರೆ. ಹಾಗಾಗಿ ಅದರಂತೆ ಕ್ರಮ ವಹಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.

ಶಿಕ್ಷಕಿಯರ ವಸ್ತ್ರ ಸಂಹಿತೆ: ತಮಗೆ ಬೇಕಾದ ಉಡುಗೆ ತೊಡಲು ಶಿಕ್ಷಕಿಯರು ಸ್ವತಂತ್ರರು ಎಂದು ಚಿಕ್ಕಮಗಳೂರಿನ ಉಪನಿರ್ದೇಶಕರಿಂದ ಸ್ಪಷ್ಟನೆ
ಸಂಗ್ರಹ ಚಿತ್ರ
Preethi Shettigar

| Edited By: preethi shettigar

Jul 17, 2021 | 2:11 PM

ಚಿಕ್ಕಮಗಳೂರು: ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇತ್ತೀಚೆಗೆ  ಶಿಕ್ಷಕಿಯರ  ಉಡುಪು ಸಂಹಿತೆಯ ಬಗ್ಗೆ ಸ್ಪಷ್ಟತೆ ನೀಡುವಂತೆ ಚಿಕ್ಕಮಗಳೂರು ಜಿಲ್ಲೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿತ್ತು. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸ್ಪಷ್ಟನೆ ನೀಡಿದ್ದು, ಆ ಪ್ರಕಾರ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಬೋಧಕ ಅಥವಾ ಬೋಧಕೇತರ ಸಿಬ್ಬಂದಿಗಳು ಸಭ್ಯ ಉಡುಪು ಧರಿಸಿ ಕರ್ತವ್ಯ ನಿರ್ವಹಿಸುವುದು ಅವರ ಸ್ವತಂತ್ರವಾಗಿರುತ್ತದೆ. ನಿರ್ದಿಷ್ಟ ಉಡುಗೆಯನ್ನು ಧರಿಸಲು ನಿರ್ದೇಶನ ನೀಡಿ ಅವರ ವೈಯಕ್ತಿಕ ಸ್ವತಂತ್ರವನ್ನು ಕಸಿಯುವುದು ಸಾಧ್ಯವಿರುವುದಿಲ್ಲ ಎಂದು ಸೂಚಿಸಿದ್ದಾರೆ.  ಕೆಲವು ಶಾಲೆಗಳಲ್ಲಿ ಮಹಿಳಾ ಶಿಕ್ಷಕಿಯರು ಚೂಡಿದಾರ್ ಧರಿಸಿಕೊಂಡು ಬರುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವುದನ್ನು ಗಮನಿಸಿ, ಚಿಕ್ಕಮಗಳೂರು ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ  ಮನವಿ ಸಲ್ಲಿಸಿತ್ತು. ಹೀಗಾಗಿ ಸಭ್ಯ ಉಡುಗೆ ಧರಿಸುವ ಬಗ್ಗೆ ಜಿಲ್ಲೆಯ ಎಲ್ಲಾ ಸರ್ಕಾರಿ ಅನುದಾನಿತ ಖಾಸಗಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುವ ಬೋಧಕರು, ಮುಖ್ಯಸ್ಥರು ಸಭ್ಯ ವಸ್ತ್ರ ಸಂಹಿತೆಯ ಬಗ್ಗೆ ಆಕ್ಷೇಪ ಸಲ್ಲಿಸದಂತೆ ಶಿಕ್ಷಣ ಇಲಾಖೆ ಸೂಚಿಸಿದೆ.

ಮಹಿಳಾ ಧ್ವನಿ ಏನು ಹೇಳುತ್ತೆ? ಶಿಕ್ಷಕರು ಎಂದರೆ ಹೀಗೆ ಇರಬೇಕು, ಅವರು ಹೀಗೆ ಬಟ್ಟೆ ಧರಿಸಬೇಕು ಎಂಬ ನಿಯಮ ನಮ್ಮಲ್ಲಿದೆ. ಅದರಲ್ಲೂ ವಿಶೇಷವಾಗಿ ಶಿಕ್ಷಕಿಯರು ಸೀರೆಯೇ ಉಡಬೇಕು ಎಂಬುದಿದೆ. ಆದರೆ ಇದರಿಂದ ಅವರ ಅಂತರಾಳದಲ್ಲಿ ಕಾಡುವ ಪ್ರಶ್ನೆಗಳೇನು? ದೂರದಿಂದ ಬಸ್ಸು, ರೈಲು, ಆಟೋ ಹಿಡಿದು ಬರುವಾಗ ಅವರು ಪಡುವ ಕಷ್ಟವೇನು ಎನ್ನುವ ಬಗ್ಗೆ ಮಾತ್ರ ಈವರೆಗೂ ಯಾರು ಪ್ರಶ್ನೆ ಮಾಡಿಲ್ಲ. ಆದರೆ ಸಭ್ಯ ಎಂಬ ಬಟ್ಟೆಯ ಪದದ ಅರ್ಥ ಸೀರೆ ಅಲ್ಲ ಎಂಬುವುದು ಇತ್ತೀಚೆಗೆ ಬಹಳ ಸದ್ದು ಮಾಡುತ್ತಿದೆ. ಹಿಂದಿನಿಂದಲೂ ಈ ಬಗ್ಗೆ ಕೂಗೊಂದು ಕೇಳಿ ಬಂದಿದ್ದು, ಶಿಕ್ಷಕಿಯರು ಈ ವಿಚಾರವಾಗಿ ಟಿವಿ9 ಡಿಜಿಟಲ್​ ಜತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ವಸ್ತ್ರ ಸಂಹಿತೆಯನ್ನು ಈಗ ತೆಗೆದು ಹಾಕಿದ್ದೇನೂ ಅಲ್ಲ. ನನಗೆ ತಿಳಿದ ಮಟ್ಟಿಗೆ ಇಷ್ಟು ವರ್ಷವೂ ಯಾವ ತರನಾದ ಉಡುಗೆ ಧರಿಸಬೇಕೆನ್ನುವ ನಿಯಮ ಇದೆಯೇ ಹೊರತು ಇಂಥದ್ದೇ ಬಟ್ಟೆ ಧರಿಸಬೇಕೆಂಬ ನಿಯಮ ಇಲ್ಲ. ನಮ್ಮ ದೇಶದಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಎಷ್ಟೋ ಅಘೋಷಿತ ನಿಯಮಗಳು ಜಾರಿಯಲ್ಲಿವೆ. ಅವು ಹೆಣ್ಣುಮಕ್ಕಳ ಮೇಲೆ ಹಿಡಿತ ಸಾಧಿಸಲು ಹವಣಿಸುತ್ತಿರುತ್ತವೆ. ನೋಡಿ ಪುರುಷರು ಪ್ಯಾಂಟ್‌, ಶರ್ಟು ಧರಿಸಿಕೊಂಡು ತಮ್ಮ ಕಂಫರ್ಟ್‌ ಕಂಡುಕೊಂಡಿದ್ದಾರೆ ಎಂದು ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ದೇವಿ.ಪಿ ತಿಳಿಸಿದ್ದಾರೆ.

ಇಲ್ಲಿ ಬಟ್ಟೆಯ ಶೀಲ ಅಶ್ಲೀಲತೆಯ ಪ್ರಶ್ನೆಗಿಂತ ಹೆಣ್ಣುಮಕ್ಕಳು ಕಟ್ಟು ಮೀರಿ ಒಂದಿಷ್ಟು ಬಿಡುಗಡೆ ಕಾಣಲು ಬಯಸುವುದನ್ನು ಸಹಿಸದ ಮನಸ್ಥಿತಿ ಇದೆ ನೋಡಿ, ಅದು ತೋರುವ ಅಸಹನೆ ಇಲ್ಲಿ ಕಾಣುತ್ತಿರುವುದು. ಇರುವ ಎಷ್ಟೋ ಸದುದ್ದೇಶವುಳ್ಳ ನಿಯಮಗಳನ್ನು ಜಾರಿಮಾಡುವಲ್ಲಿ ತೋರದ ತುರ್ತು ಇಲ್ಲಿ ಇಲ್ಲದಿರುವ ನಿಯಮವನ್ನು ಸ್ಥಾಪಿಸುವಲ್ಲಿ ಕಾಣುವುದಕ್ಕೆ ಈ ಅಸಹನೆಯೇ ಕಾರಣ. ಉಡುಗೆ ಅವರವರ ಕಂಫರ್ಟ್​ಗೆ ಸಂಬಂಧಿಸಿದ್ದು ಸಭ್ಯ ಅಸಭ್ಯ ಎನ್ನುವುದು ನೋಟವನ್ನು ಅವಲಂಬಿಸಿದೆ, ಮನೋಭಾವವನ್ನು ಅವಲಂಬಿಸಿದೆ. ಬಟ್ಟೆಯನ್ನಲ್ಲ ಎಂದು ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ದೇವಿ.ಪಿ ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಕರು ಸಮಾಜಕ್ಕಿಂತ ಹೊರತಲ್ಲ. ಸಮಾಜದಲ್ಲಿ ವ್ಯಕ್ತಿಗಳ ಬೆಳವಣಿಗೆಗೆ ಅಡ್ಡಿಯಾಗುವ ಅನೇಕ ಸಂಗತಿಗಳು ಶಿಕ್ಷಣ ಕ್ಷೇತ್ರವನ್ನೂ ಕಾಡುತ್ತಿವೆ. ಲಿಂಗದ ನೆಲೆಯಲ್ಲಷ್ಟೇ ಅಲ್ಲ ಜಾತಿ, ವರ್ಗ, ಧಾರ್ಮಿಕ ತಾರತಮ್ಯ, ನಿರ್ಬಂಧಗಳು ಎಲ್ಲೆಡೆ ಇವೆ. ತಾಂತ್ರಿಕ ಸಮಸ್ಯೆಗಳೂ ಇರಬಹುದು. ಬಹಳ ಮುಖ್ಯವಾಗಿ, ನನಗೆ ಸದ್ಯಕ್ಕೆ ಹೇಳಬೇಕೆನಿಸುವುದು, ಇಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮತ್ತು ಸರ್ಕಾರದ ಭಾಗವಾಗಿ ಮಾಡುತ್ತಿರುವುದರಿಂದ ಅಧೀನತೆ ಪರಸ್ಪರ ಢೀ ಹೊಡೆಯುತ್ತವೆ. ಯುವ ಸಮುದಾಯವನ್ನು ಪ್ರಭಾವಿಸುವ ಶಿಕ್ಷಕರು ಹೆಚ್ಚು ಮುಕ್ತವಾಗಿ ಕೆಲಸ ಮಾಡುವ ವಾತಾವರಣ ಬೇಕು. ಇಲ್ಲವಾದಲ್ಲಿ ಜ್ಞಾನ ಸೃಷ್ಟಿಯಾಗುವುದಿಲ್ಲ. ಸಮುದಾಯದ ವಿವೇಕವೂ ನಾಶವಾಗುತ್ತದೆ ಎಂದು ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ದೇವಿ.ಪಿ ಹೇಳಿದ್ದಾರೆ.

ನಾವು ಮಾಡಿದ್ದು ದನಿಯೆತ್ತುವ ಕೆಲಸ ಅಷ್ಟೇ. ವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುವ, ವ್ಯಕ್ತಿ ಘನತೆಯನ್ನು ಅಲ್ಲಗಳೆಯುವ ಸಂದರ್ಭಗಳು ನಮ್ಮ ಸುತ್ತ ಪ್ರತಿನಿತ್ಯವೆಂಬಂತೆ ಕಾಣುತ್ತಿರುತ್ತವೆ. ಇವುಗಳ ವಿರುದ್ಧ ನಮ್ಮ ಮಿತಿಯೊಳಗೆ ದನಿಯೆತ್ತುವ ಕೆಲಸ ಮಾಡಬೇಕಿರುವುದು ನಮ್ಮ ಕರ್ತವ್ಯ. ವಸ್ತ್ರಸಂಹಿತೆ ಒಳಗಿರುವ ದೊಡ್ಡ ರೋಗದ ಒಂದು ಸಣ್ಣ ಚಿಹ್ನೆ. ತಾರತಮ್ಯದ ನೆಲೆಗಳು ಭಯ ಹುಟ್ಟಿಸುತ್ತವೆ. ನಾನು, ನನ್ನ ಗೆಳತಿಯರು ನಾವು ಪ್ರತಿನಿತ್ಯ ಬಟ್ಟೆಯ ಕಾರಣಕ್ಕೆ ಎದುರಿಸುತ್ತಿದ್ದ ಕಿರಿಕಿರಿಯಿಂದ ನಮ್ಮ ಅನುಭವವನ್ನು ಮತ್ತು ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಪತ್ರಿಕೆವೊಂದರಲ್ಲಿ ದಾಖಲಿಸಿದೆವು. ಅಚ್ಚರಿಯಾಗುವಷ್ಟು ಬೆಂಬಲ ಇದಕ್ಕೆ ದೊರೆಯಿತು. ಇದು ನಮ್ಮ ಉದ್ಯೋಗಕ್ಷೇತ್ರದಲ್ಲಿ ಈ ಸಮಸ್ಯೆ ಎದುರಿಸಲು ಬಲ ನೀಡಿತು ಎಂದು ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ದೇವಿ.ಪಿ ಅಭಿಪ್ರಾಯಪಟ್ಟಿದ್ದಾರೆ.

ಎಷ್ಟೋ ಜನಕ್ಕೆ ಇದು ಧೈರ್ಯವನ್ನೂ ನೀಡಿತು. ಆದರೆ ಇನ್ನೂ ಕಿರಿಕಿರಿ ತಪ್ಪಿದ್ದಲ್ಲ. ಬಟ್ಟೆಯ ವಿಚಾರದಲ್ಲಿ ಮಣಿಸಲಾಗದಾಗ ಇನ್ಯಾವುದೇ ವಿಚಾರ ಇಟ್ಟುಕೊಂಡು ನಿರಂತರ ತೊಂದರೆ ಕೊಡುವವರೂ ಇದ್ದಾರೆ. ಜೊತೆಗೆ, ಪ್ರತಿ ಸಲ ಉದ್ಯೋಗದ ಜಾಗ ಬದಲಾದಾಗ, ಮೇಲಾಧಿಕಾರಿ ಬದಲಾದಾಗ ಮತ್ತೆ ಮತ್ತೆ ದನಿಯೆತ್ತುತ್ತಲೇ ಇರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಿಕ್ಷಕಿಯರ ಮೇಲೆ ಇಂಥದೇ ಬಟ್ಟೆ ಧರಿಸಿ ಎಂಬ ಒತ್ತಡ ಹೇರುವುದು ವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಹೊರಡಿಸಿದ ಸೂಚನೆ ನಿಜಕ್ಕೂ ಸ್ವಾಗತಾರ್ಹ ನಡೆ ಎಂದು ಕನ್ನಡ ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ದೇವಿ.ಪಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಇಲಾಖೆ ಏನು ಹೇಳಿದೆ? ಸದ್ಯ ಎಲ್ಲಾ ಪ್ರಶ್ನೆಗೆ ತೆರೆ ಬಿದಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಈ ಬಗ್ಗೆ ತನ್ನ ಸುತ್ತೋಲೆಯಲ್ಲಿ ಸ್ಪಷ್ಟನೆ ನೀಡಿದ್ದು, ಆ ಪ್ರಕಾರ, ಶಾಲೆಗಳಲ್ಲಿ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಯರ ವ್ಯಕ್ತಿತ್ವ ವಿಕಾಸಗೊಳಿಸಿ ಇವರ ಭವಿಷ್ಯವನ್ನು ರೂಪಿಸುವ ಹೊಣೆ ಶಿಕ್ಷಕರ ಮೇಲಿರುತ್ತದೆ. ಅಂತೆಯೇ, ಶಿಕ್ಷಕರ ನಡೆ-ನುಡಿ, ಆಚಾರ-ವಿಚಾರಗಳು, ಅಭಿವ್ಯಕ್ತಿ, ಉಡುಗೆ-ತೊಡುಗೆ ಹಾಗೂ ಒಟ್ಟಾರೆಯಾಗಿ ಶಿಕ್ಷಕರ ಸಂಪೂರ್ಣ ವ್ಯಕ್ತಿತ್ವ ವಿದ್ಯಾರ್ಥಿಗಳ ಮೇಲೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಪ್ರಭಾವ ಬೀರುತ್ತದೆ. ಈ ಬಗ್ಗೆ ಶಿಕ್ಷಕರ ಶಿಕ್ಷಣದ ಸೇವಾ ಪೂರ್ವ ತರಬೇತಿ ಹಾಗೂ ಸೇವಾ ನಿರತ ತರಬೇತಿಗಳಲ್ಲಿ ಜಾಗೃತಗೊಳಿಸಲಾಗುತ್ತಿದೆ. ಈ ದಿಸೆಯಲ್ಲಿ ಸಭ್ಯ ಉಡುಪುಗಳನ್ನು ಧರಿಸುವ ವಿಷಯ, ಶಿಕ್ಷಕ- ಶಿಕ್ಷಕಿಯರುಗಳಲ್ಲಿ ಅಂತರ್ಗತವಾಗಿದೆ ಹಾಗೂ ಸಭ್ಯ ಉಡುಪುಗಳನ್ನು ಧರಿಸುವಲ್ಲಿ ಶಿಕ್ಷಕರು ಸ್ವತಂತ್ರರಾಗಿರುತ್ತಾರೆ. ಹೀಗಾಗಿ ಅದರಂತೆ ಕ್ರಮ ವಹಿಸಲು ಉಪನಿರ್ದೇಶಕರಿಗೆ ತಿಳಿಸಿದೆ ಎಂದು ಸೂಚಿಸಿದೆ.

documnet

ಸುತ್ತೋಲೆ ಪತ್ರದ ಪತ್ರಿ

ಇದನ್ನೂ ಓದಿ: Ripped Jeans; ತಿರತ್ ಸಿಂಗ್ ಅವರಿಗೊಂದು ಪತ್ರ: ‘ನೀವು ಟೀಚರ್ ಅಂತ ಹೆಂಗ್ ಗುರ್ತ್ ಹಿಡೀತಾವು ಹುಡ್ರು?’

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada