ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ; ಒಂದು ಎಕರೆ ಜಮೀನಿನಲ್ಲಿ ಕ್ಯಾಬೇಜ್ ಬೆಳೆದು ಬಂಪರ್ ಆದಾಯ ಪಡೆದ ಹಾವೇರಿ ಯುವಕ

ರೈತ ಸಂತೋಷ ಕ್ಯಾಬೇಜ್ ಬೆಳೆಯಲು ಬೀಜ, ಗೊಬ್ಬರ, ಔಷಧಿ ಎಂದು ಒಟ್ಟು 42 ಸಾವಿರ ರೂಪಾಯಿ ಖರ್ಚು ಮಾಡಿದ್ದರು. ಆದರೆ ಮೊದಲನೇ ಕಟಾವಿಗೆ ಕ್ಯಾಬೇಜ್ ಬೆಳೆಗೆ ಒಂದು ಕೆಜಿಗೆ 13.50 ಪೈಸೆ ದರ ಸಿಕ್ಕಿದೆ. ಟನ್​ಗೆ 13500 ರೂಪಾಯಿ ದರ ಸಿಕ್ಕಿದೆ. ಮೊದಲನೇ ಕಟಾವಿನಲ್ಲಿ ರೈತ ಸಂತೋಷ ಕ್ಯಾಬೇಜ್ ಬೆಳೆಯಲು ಮಾಡಿದ ಖರ್ಚು ತೆಗೆದು ಬರೋಬ್ಬರಿ ಎರಡೂವರೆ ಲಕ್ಷ ರೂಪಾಯಿ ಆದಾಯ ದೊರೆತಿದೆ.

ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ; ಒಂದು ಎಕರೆ ಜಮೀನಿನಲ್ಲಿ ಕ್ಯಾಬೇಜ್ ಬೆಳೆದು ಬಂಪರ್ ಆದಾಯ ಪಡೆದ ಹಾವೇರಿ ಯುವಕ
ಒಂದು ಎಕರೆ ಜಮೀನಿನಲ್ಲಿ ಕ್ಯಾಬೇಜ್ ಬೆಳೆದು ಬಂಪರ್ ಆದಾಯ

ಹಾವೇರಿ : ಕ್ಯಾಬೇಜ್ ಬೆಳೆ ಬೆಳೆಯುವುದು ಅಂದರೆ ಸುಲಭದ ಮಾತಲ್ಲ. ಕ್ಯಾಬೇಜ್ ಬೆಳೆಗೆ ಆಗಾಗ ಔಷಧಿ ಸಿಂಪಡನೆ ಮಾಡಲೇಬೇಕು. ಔಷಧಿ ಸಿಂಪಡನೆ ಮಾಡದಿದ್ದರೆ ಹೂ ಕೋಸು ಅಥವಾ ಕ್ಯಾಬೇಜ್ (Cabbage) ಬೆಳೆ ಬದುಕುವುದು ತುಂಬಾ ಕಡಿಮೆ. ಹೀಗಾಗಿ ಕ್ಯಾಬೇಜ್ ಬೆಳೆ ಬೆಳೆಯುವುದಕ್ಕೆ ಸಾಕಷ್ಟು ಖರ್ಚು ಮಾಡಬೇಕು. ಆದರೆ ಹಾವೇರಿಯ ಯುವ ರೈತ ಕೇವಲ ಒಂದು ಎಕರೆ ಜಮೀನಿನಲ್ಲಿ ಕ್ಯಾಬೇಜ್ ಬೆಳೆ ಬೆಳೆದು ಬಂಪರ್ ಫಸಲು ತೆಗೆಯುವುದರ ಜತೆಗೆ ಹೆಚ್ಚು ಆದಾಯವನ್ನು ಗಳಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಅರಳಿಕಟ್ಟಿ ಗ್ರಾಮದ ಯುವ ರೈತ ಸಂತೋಷ ಮಾಲ್ತೇಶ ಲಿಂಗದೇವರಕೊಪ್ಪ ಉತ್ತಮ ಕ್ಯಾಬೇಜ್ ಫಸಲು ತೆಗೆದು ಇತರರಿಗೆ ಮಾದರಿಯಾಗಿದ್ದಾರೆ. ತಮ್ಮ ಕುಟುಂಬಕ್ಕೆ ಸೇರಿದ ಒಂದು ಎಕರೆ ಜಮೀನಿನಲ್ಲಿ ಕ್ಯಾಬೇಜ್ ಬೆಳೆ ಬೆಳೆಯುವ ಮನಸ್ಸು ಮಾಡಿದ್ದ ಸಂತೋಷ, ಹೆಚ್ಚು ಔಷಧಿ ಸಿಂಪಡನೆ ಮಾಡಬೇಕು, ಹೆಚ್ಚು ಖರ್ಚು ಮಾಡಬೇಕು ಎಂಬುದನ್ನು ಅರಿತಿದ್ದರೂ ಮನಸ್ಸಿದ್ದರೆ ಮಾರ್ಗ ಎನ್ನುವಂತೆ ತಂದೆಯ ಜತೆ ಸೇರಿಕೊಂಡು ಒಂದು ಎಕರೆ ಜಮೀನಿನಲ್ಲಿ ಕ್ಯಾಬೇಜ್ ಬೆಳೆ ಹಾಕಿದ್ದರು.

ರೈತ ಸಂತೋಷ ಅವರ ನಿರೀಕ್ಷೆಗೂ ಮೀರಿ ಕ್ಯಾಬೇಜ್ ಫಸಲು ಬಂದಿದ್ದು, ಮೊದಲನೆ ಕಟಾವಿನಲ್ಲೇ 21 ಟನ್ ಕ್ಯಾಬೇಜ್ ಫಸಲು ಬಂದಿದೆ. ರೈತ ಸಂತೋಷ ಕ್ಯಾಬೇಜ್ ಬೆಳೆಯಲು ಬೀಜ, ಗೊಬ್ಬರ, ಔಷಧಿ ಎಂದು ಒಟ್ಟು 42 ಸಾವಿರ ರೂಪಾಯಿ ಖರ್ಚು ಮಾಡಿದ್ದರು. ಆದರೆ ಮೊದಲನೇ ಕಟಾವಿಗೆ ಕ್ಯಾಬೇಜ್ ಬೆಳೆಗೆ ಒಂದು ಕೆಜಿಗೆ 13.50 ಪೈಸೆ ದರ ಸಿಕ್ಕಿದೆ. ಟನ್​ಗೆ 13500 ರೂಪಾಯಿ ದರ ಸಿಕ್ಕಿದೆ. ಮೊದಲನೇ ಕಟಾವಿನಲ್ಲಿ ರೈತ ಸಂತೋಷ ಕ್ಯಾಬೇಜ್ ಬೆಳೆಯಲು ಮಾಡಿದ ಖರ್ಚು ತೆಗೆದು ಬರೋಬ್ಬರಿ ಎರಡೂವರೆ ಲಕ್ಷ ರೂಪಾಯಿ ಆದಾಯ ದೊರೆತಿದೆ.

ಲಾಕ್​ಡೌನ್​ನಿಂದ ಶುರುವಾಗಿತ್ತು ಆತಂಕ
ಕೊರೊನಾ ಲಾಕ್​ಡೌನ್​ನಿಂದಾಗಿ ಕ್ಯಾಬೇಜ್ ಬೆಳೆದಿದ್ದ ಸಂತೋಷ ಅವರಿಗೆ ದೊಡ್ಡ ಚಿಂತೆ ಎದುರಾಗಿತ್ತು. ಏಕೆಂದರೆ ಲಾಕ್​ಡೌನ್ ಸಮಯದಲ್ಲಿ ಬೇರೆ ರಾಜ್ಯಗಳ ವ್ಯಾಪಾರಸ್ಥರು ಕ್ಯಾಬೇಜ್ ಖರೀದಿಗೆ ಬರುತ್ತಿರಲಿಲ್ಲ. ಆಗ ದರವೂ ಒಂದು ಕೆಜಿಗೆ ಕೇವಲ 6 ರೂಪಾಯಿ ಇತ್ತು. ಆದರೆ ಲಾಕ್​ಡೌನ್ ಮುಗಿಯುವ ಸಮಯಕ್ಕೆ ಸರಿಯಾಗಿ ಸಂತೋಷ ಅವರ ಜಮೀನಿನಲ್ಲಿ ಬೆಳೆದಿದ್ದ ಕ್ಯಾಬೇಜ್ ಫಸಲು ಕಟಾವಿಗೆ ಬಂದಿದೆ. ಹೀಗಾಗಿ ವ್ಯಾಪಾರಸ್ಥರು ಸಂತೋಷ ಅವರ ಜಮೀನಿನಲ್ಲಿ ಬೆಳೆದಿದ್ದ ಕ್ಯಾಬೇಜ್ ಅನ್ನು ಮಾರಾಟಕ್ಕಾಗಿ ಅಹಮದಾಬಾದ್ ಮಾರುಕಟ್ಟೆಗೆ ಕಳಿಸಿದ್ದಾರೆ.

ಕ್ಯಾಬೇಜ್ ಬೆಳೆ ಸಾಮಾನ್ಯವಾಗಿ ಒಂದು ಎಕರೆಗೆ ಹನ್ನೆರಡರಿಂದ ಹದಿನೈದು ಟನ್ ಫಸಲು ಬರುತ್ತದೆ. ಅಬ್ಬಬ್ಬಾ ಅಂದರೆ ಹದಿನಾರು ಟನ್ ಫಸಲು ಬಂದಿದ್ದು ಕೇಳಿದ್ದೇವೆ. ಆದರೆ ನಮ್ಮ ಜಮೀನಿನಲ್ಲಿ ಒಂದು ಎಕರೆಯಲ್ಲಿ ಹಾಕಿದ್ದ ಕ್ಯಾಬೇಜ್ ಬೆಳೆ ಮೊದಲನೇ ಕಟಾವಿಗೆ 21 ಟನ್ ಫಸಲು ನೀಡಿದೆ. ಇನ್ನು ಎರಡನೇ ಕಟಾವಿನಲ್ಲೂ ಆರು ಟನ್‌ನಷ್ಟು ಫಸಲು ಬರುವ ನಿರೀಕ್ಷೆ ಇದ್ದು, ಈಗಾಗಲೆ ಎರಡೂವರೆ ಲಕ್ಷ ರೂಪಾಯಿ ಆದಾಯ ಬಂದಿದೆ. ಇದು ಖುಷಿಯ ವಿಚಾರ ಎಂದು ಕ್ಯಾಬೇಜ್ ಬೆಳೆದ ರೈತ ಸಂತೋಷ ತಿಳಿಸಿದ್ದಾರೆ.

farmer

ರೈತ ಸಂತೋಷ

ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಸಂತೋಷ ಕಷ್ಟಪಟ್ಟು ಕೃಷಿ ಕೆಲಸ ಮಾಡಿದ್ದಕ್ಕೆ ಕ್ಯಾಬೇಜ್ ಬಂಪರ್ ಫಸಲಿನ‌ ಜತೆಗೆ ಉತ್ತಮ ಆದಾಯ ತಂದು ಕೊಟ್ಟಿದೆ. ಫಸಲು ಉತ್ತಮವಾಗಿ ಬರುವ ನಿರೀಕ್ಷೆ ಇದ್ದರೂ, ಕೊರೊನಾ ಲಾಕ್​ಡೌನ್​ನಿಂದಾಗಿ ಉತ್ತಮ ಬೆಲೆ ಸಿಗುತ್ತದೆಯೋ ಇಲ್ಲವೋ ಎಂಬ ಚಿಂತೆ ಸಂತೋಷನನ್ನು ಕಾಡುತ್ತಿತ್ತು. ಆದರೆ ಉತ್ತಮ ಫಸಲಿನ ಜತೆಗೆ ಉತ್ತಮ ದರವೂ ಸಿಕ್ಕು ಸಂತೋಷಗೆ ಆದಾಯ ಬಂದಿದೆ ಎಂದು ಸಂತೋಷನ ಸಂಬಂಧಿ ಹನುಮಂತಪ್ಪ ಸುಂಕದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ: ಪ್ರಭುಗೌಡ.ಎನ್.ಪಾಟೀಲ

ಇದನ್ನೂ ಓದಿ:
ಬಾಗಲಕೋಟೆ: ಶಿಕ್ಷಕನ ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಹೆಸರನ್ನು ನೋಡೋದೆ ಚೆಂದಾ!

ಮುಕ್ಕಾಲು ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದು ಆದಾಯ ಗಳಿಸಿದ ರೈತ; ಬಿಬಿಎಂ ಪದವೀಧರನ ಕೃಷಿ ಒಲವು