ವರ್ಚ್ಯುವಲ್ ಚಿತ್ರಸಂತೆ 2021: ಆನ್ಲೈನ್ನಲ್ಲಿ ಕಲಾವಿದನ ಕುಂಚ ಮಾತಾಡಿದಾಗ..
ಇಂದು 11 ಗಂಟೆಗೆ ಚಿತ್ರಕಲಾ ಪರಿಷತ್‌ನ 18ನೇ ಚಿತ್ರಸಂತೆಗೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ವರ್ಚ್ಯುಯಲ್ ಆಗಿ ಚಾಲನೆ ನೀಡಿದ್ದಾರೆ. ಕೊವಿಡ್ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಚಿತ್ರಸಂತೆ ಆಯೋಜನೆ ಮಾಡಲಾಗಿದೆ.
ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಮ್ಮ ಮಾತುಗಳಷ್ಟೇ ಮುಖ್ಯವಲ್ಲ. ಮಾತಿಗೂ ಮೀರಿದ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವಿರುವುದು ಕಲೆಯಲ್ಲಿ ಮಾತ್ರ. ಕಲಾವಿದ ಮತ್ತು ಆಸ್ವಾದಕರ ಮಧ್ಯೆ ಒಂದು ರೀತಿಯ ಸಂಬಂಧ, ಸಂವಾದ ಸಾಧ್ಯವಾಗುತ್ತಾ ಹೋಗುವುದೇ ಈ ಕಲೆಯಲ್ಲಿ. ಸದ್ಯದ ಕೊರೋನಾ ಪರಿಸ್ಥಿತಿಯಲ್ಲಿ ಇದೆಲ್ಲ ಸಾಧ್ಯವಾಗುವುದೆ? ಎಂಬ ಪ್ರಶ್ನೆ ನಮ್ಮನ್ನು ಬಹುವಾಗಿ ಕಾಡುತ್ತಿದೆ. ಆದರೆ ಅದಕ್ಕೆ ಪರ್ಯಾಯವಾಗಿ ಕಲಾಜಗತ್ತಿನಲ್ಲಿ ಏನು ನಡೆಯುತ್ತಿದೆ? ಉತ್ತರ ಆನ್‌ಲೈನ್!
ಇಂದು (ಜ.3) 11 ಗಂಟೆಗೆ ಚಿತ್ರಕಲಾ ಪರಿಷತ್‌ನ 18ನೇ ಚಿತ್ರಸಂತೆಗೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ವರ್ಚ್ಯುವಲ್ ಚಾಲನೆ ನೀಡಿದರು. ಕೊವಿಡ್ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಆನ್‌ಲೈನ್ ಮೂಲಕ ಚಿತ್ರಸಂತೆ ಆಯೋಜನೆ ಮಾಡಲಾಗಿದೆ. ಒಟ್ಟು 1,500ಕ್ಕೂ ಹೆಚ್ಚು ಕಲಾವಿದರು ಇದರಲ್ಲಿ ಭಾಗಿಯಾಗಿದ್ದು, ಪ್ರತಿಯೊಬ್ಬರಿಗೂ ಪ್ರತ್ಯೇಕ ಆನ್‌ಲೈನ್ ಪುಟವನ್ನು ಮೀಸಲಿಡಲಾಗಿದೆ. ಒಬ್ಬ ಕಲಾವಿದ ತನ್ನ 10 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಬಹುದಾಗಿದೆ. ಇದು ಇಂದಿನಿಂದ ಸುಮಾರು ಒಂದು ತಿಂಗಳ ಕಾಲ ನಡೆಯಲಿದೆ.
ಏನಿದು ವರ್ಚ್ಯುವಲ್ ಚಿತ್ರಸಂತೆ? ಕೊರೊನಾ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ಚಿತ್ರಸಂತೆ ಆಯೋಜಿಸುವುದು ನಿಜಕ್ಕೂ ಸವಾಲೇ ಸರಿ. ಈ ಬಗ್ಗೆ ಪ್ರತಿಕ್ರಿಯಿಸಿದ ಕಲಾ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ರಾಘವೇಂದ್ರ ಕುಲಕರ್ಣಿ, ‘ಇಲ್ಲಿ ಸುಮಾರು 22ಕ್ಕೂ ಹೆಚ್ಚು ದೇಶಗಳ 1,500ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಿದ್ದಾರೆ. ಪ್ರತಿಯೊಬ್ಬರೂ ನೊಂದಣಿ ಮಾಡಿಕೊಂಡು ತಮ್ಮ ಕಲಾಕೃತಿಗಳನ್ನು ಪರಿಷತ್ತಿನ ಸುಪರ್ದಿಗೆ ಒಪ್ಪಿಸಿದ್ದಾರೆ. ಕ್ರಮೇಣ ಇವುಗಳನ್ನು ಪರಿಷತ್ತಿನ ವೆಬ್ಸೈಟಿನಲ್ಲಿ ನಮ್ಮ ತಂಡ ಪ್ರಕಟಿಸುತ್ತಾ ಹೋಗುತ್ತದೆ. ಕಲಾಕೃತಿಗಳೊಂದಿಗೆ ಕಲಾವಿದರ ವಿವರಗಳನ್ನೂ ನೀಡಲಾಗುತ್ತದೆ. ಗ್ರಾಹಕರು ತಮಗಿಷ್ಟವಾದ ಕಲಾಕೃತಿಗಳನ್ನು ಕಲಾವಿದರಿಗೆ ಕರೆ ಮಾಡಿ ಮಾತನಾಡುವ ಮೂಲಕ ಖರೀದಿ ಮಾಡಬಹುದು’ ಎನ್ನುತ್ತಾರೆ.
ವರ್ಷದ ಮೊದಲ ಭಾನುವಾರ ನಡೆಯುತ್ತಿದ್ದ ಈ ಸಂತೆ ಈಗ ಒಂದು ತಿಂಗಳ ಅವಧಿಗೆ ವಿಸ್ತರಿಸಿದೆ. ಸದ್ಯದ ಮಾಹಿತಿ ಪ್ರಕಾರ ಸೆಕೆಂಡಿಗೆ 8ರಿಂದ 10ಮಂದಿ ವೆಬ್ಸೈಟ್ಗೆ ಭೇಟಿ ನೀಡುತ್ತಿದ್ದಾರೆ. ಬೆಳಿಗ್ಗೆಯಿಂದ ಮಧ್ಯಾಹ್ನ 2ರ ಒಳಗೆ 56 ಸಾವಿರಕ್ಕೂ ಹೆಚ್ಚು ಮಂದಿ ಚಿತ್ರಸಂತೆಯನ್ನು ಆನ್‌ಲೈನ್ ಮೂಲಕ ವೀಕ್ಷಿಸಿದ್ದಾರೆ. ಸದ್ಯ ವರ್ಚ್ಯುವಲ್ ಚಿತ್ರಸಂತೆಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ವಿದೇಶದಿಂದಲೂ ಕೆಲ ಕಲಾವಿದರೂ ಇದರಲ್ಲಿ ಭಾಗಿಯಾಗಿ ತಮ್ಮ ಕಲೆ ಪ್ರದರ್ಶಿಸುತ್ತಿದ್ದು ಜಗತ್ತಿನಾದ್ಯಂತ ಅನೇಕ ವಿದೇಶಿ ಕಲಾವಿದರು ಚಿತ್ರಸಂತೆಯಲ್ಲಿ ನೊಂದಣಿ ಮಾಡಿಕೊಂಡಿದ್ದಾರೆ.
ಸಂಕಷ್ಟ ಸಮಯದಲ್ಲಿ ಆನ್‌ಲೈನ್ ಅನುಕೂಲ
ಈ ವರ್ಚ್ಯುವಲ್ ಚಿತ್ರಸಂತೆ ಬಹಳಷ್ಟು ಅನುಕೂಲ ಮಾಡಿಕೊಟ್ಟಿದೆ. ಎಲ್ಲದರಂತೆ ಚಿತ್ರಕಲೆಯೂ ಡಿಜಿಟಲೈಸ್ ಆಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ಆನ್ಲೈನ್ನಲ್ಲಿ ಪಬ್ಲಿಷ್ ಆಗುವುದರಿಂದ ನಮ್ಮ ಕಲೆ ಬಹಳ ಜನರನ್ನು ತಲುಪುತ್ತದೆ. ದೇಶ, ವಿದೇಶಗಳಲ್ಲಿ ಕೂತು ತಮ್ಮ ಪೇಂಟಿಂಗ್ಸ್ ಖರೀದಿಸಲು ಇದು ಉತ್ತಮ ವೇದಿಕೆ, ಮಾರಾಟಕ್ಕೆ ಸುಲಭ. ಕೊರೊನಾದಿಂದ ಸಾಕಷ್ಟು ಕಲಾವಿದರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ನಾವು ಪರಿಸರ, ಸುತ್ತಮುತ್ತಲಿನ ಜನರನ್ನು ನೋಡಿ ಅದರಿಂದ ಸ್ಪೂರ್ತಿ ಪಡೆದು ಚಿತ್ರಗಳನ್ನು ಬಿಡಿಸುತ್ತಿದ್ದೆವು. ಆದರೆ ಈ ಬಾರಿ ನಮ್ಮಲ್ಲಿ ನಿಶ್ಯಬ್ದ ಆವರಿಸಿತ್ತು. ನಮ್ಮೊಳಗೆ ನಡೆಯುವ ಭಾವನಾತ್ಮಕ ತಾಕಲಾಟಗಳೇ ಅಮೂರ್ತವಾಗಿ ಕ್ಯಾನ್ವಾಸಿನ ಮೇಲೆ ಮೂಡುತ್ತಾ ಹೋದವು. ಆದರೆ ಹಳೆಯ ಚಿತ್ರಸಂತೆಯ ನೆನಪುಗಳು ಈಗಲೂ ಕಾಡುತ್ತವೆ. ಎಲ್ಲಾ ಭಾಗದ ಕಲಾವಿದರು ಒಂದೆಡೆ ಸೇರಿ, ಪರಸ್ಪರ ಚರ್ಚಿಸುತ್ತಿದ್ದೆವು. ಇರಲಿ, ಯಾವುದೋ ಒಂದು ರೂಪದಲ್ಲಿ ಕಲೆ ಮುಂದುವರೆಯುತ್ತಲೇ ಇರುತ್ತದೆ. ಯಾಕೆಂದರೆ ಕಲೆ ದೊಡ್ಡದು. -ಡಾ. ಸೌಮ್ಯ ಚೌವ್ಹಾನ್, ಕಲಾವಿದ
ಒಡನಾಟವೇ ಮಿಸ್ ಆಗಿದೆ
ಪ್ರತಿಬಾರಿ ಚಿತ್ರಸಂತೆಯಲ್ಲಿ ಜನಸಾಗರವೇ ಹರಿದು ಬರುತ್ತಿತ್ತು. ಗ್ರಾಹಕರಿಗೆ ನಮ್ಮ ಚಿತ್ರಗಳನ್ನು ತೋರಿಸಿ ಅವರೊಂದಿಗೆ ಒಂದು ಒಡನಾಡುವ ಅವಕಾಶ ಇರುತ್ತಿತ್ತು. ಆದರೆ ಈ ಬಾರಿ ಅದೆಲ್ಲವೂ ಮಿಸ್ ಆಗಿದೆ. ವರ್ಚ್ಯುವಲ್ ಚಿತ್ರಸಂತೆಯಿಂದ ಪರಸ್ಪರ ಕಲಾವಿದರ ಪರಿಚಯವಾಗುತ್ತಿದೆ ಎನ್ನುವುದೂ ಅಷ್ಟೇ ಖುಷಿ ಕೊಡುತ್ತದೆ. ಆನ್ಲೈನ್ನಲ್ಲಿ ಈ ಡೇಟಾ ಬಹುಕಾಲ ಉಳಿಯುವುದರಿಂದ ವ್ಯಾಪಾರಕ್ಕೂ ಅನುಕೂಲವಾಗುತ್ತದೆ. ಕೊರೊನಾ ಸಮಯದಲ್ಲಿ ಇತಂಹದೊಂದು ಯೋಜನೆ ಚೆನ್ನಾಗಿದೆ. -ಬಾಬು ಜಟ್ಟಾಕರ್, ಕಲಾವಿದ
ಸರಳ ಸಮಾರಂಭ ಚಿತ್ರಕಲಾ ಪರಿಷತ್ನಲ್ಲಿ ಭಾನುವಾರ ನಡೆದ ಸರಳ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಅಶ್ವತ್ತನಾರಾಯಣ ಚಿತ್ರಸಂತೆಗೆ ಚಾಲನೆ ನೀಡಿದರು. ಈ ಸಂದರ್ಭ ಹಲವು ಹಿರಿಯ ಕಲಾವಿದರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಚಿತ್ರನೋಟ ಇಲ್ಲಿದೆ.
Published On - 5:30 pm, Sun, 3 January 21