ಸರ್ವರೋಗಕ್ಕೆ ಮದ್ದು ಚಗಳಿ ಚಟ್ನಿ..

ಚಗಳಿ ಚಟ್ನಿಯನ್ನು ಆನಾದಿ ಕಾಲದಿಂದಲೂ ಈ ಭಾಗದಲ್ಲಿ ತಿನ್ನುತ್ತಲೇ ಬರುತ್ತಿದ್ದಾರೆ. ಹೇಗೆ ಸಾರಾಯಿ ಸರ್ವ ರೋಗಕ್ಕೂ ಮದ್ದು ಅನ್ನೋ ಗಾದೆ ಮಾತಿದೆಯೋ, ಹಾಗೆ ಚಗಳಿ ಚಟ್ನಿ ತಿಂದರೆ ಯಾವ ಕಾಯಿಲೆನೂ ಕೂಡ ಹತ್ತಿರ ಸುಳಿಯಲ್ಲ ಅನ್ನೋದು ಮಲೆನಾಡಿಗರ ಗಾಢವಾದ ನಂಬಿಕೆ.

ಸರ್ವರೋಗಕ್ಕೆ ಮದ್ದು ಚಗಳಿ ಚಟ್ನಿ..
ಚಗಳಿ ಗೂಡು, ಚಗಳಿ ಚಣ್ನಿ

ಚಿಕ್ಕಮಗಳೂರು: ಇರುವೆಗಳು ಅಂದರೆ ಹೆದರಿಕೊಂಡು ಮಾರುದ್ದ ಓಡಿ ಹೋಗುವವರೇ ಜಾಸ್ತಿ. ಅದರಲ್ಲೂ ಕೆಂಪು ಇರುವೆಗಳು ಕಂಡರೆ ಸಹವಾಸವೇ ಬೇಡ ಅಂತಾ ಇರುವೆಗಳು ಇರುವ ಕಡೆ ಅಪ್ಪಿತಪ್ಪಿಯೂ ಮುಖ ಹಾಕುವುದಿಲ್ಲ. ಆದರೆ ಮಲೆನಾಡಿನಲ್ಲಿ ಕೆಂಪು ಇರುವೆಗಳೆಂದರೆ ಎಲ್ಲಿದ್ದಾವೆ ಅಂತಾ ಕೇಳುತ್ತಾರೆ. ಈಗಲೇ ಹೋಗಿ ಶಿಕಾರಿ ಮಾಡಿಕೊಂಡು ಬರೋಣ ಎಂದು ಸಿದ್ಧರಾಗುತ್ತಾರೆ.

ಅಷ್ಟೇ ಅಲ್ಲದೆ ಕೆಂಪು ಇರುವೆಗಳನ್ನು ಮನೆಗೆ ತಂದು ಬಾಯಲ್ಲಿ ನೀರುಣಿಸುವಂತೆ ಖಡಕ್ ಚಟ್ನಿ ಮಾಡಿ ಆಸ್ವಾದಿಸುತ್ತಾರೆ. ಕೆಂಪು ಇರುವೆನಾ ತಿನ್ನುತ್ತಾರಾ? ಚಟ್ನಿ ಮಾಡುತ್ತಾರಾ? ಅಂತಾ ಹುಬ್ಬೇರಿಸಬೇಡಿ. ಸದ್ಯ ಕೊರೊನಾಕ್ಕೂ ಕೂಡ ಕೆಂಪು ಇರುವೆ ಚಟ್ನಿನೇ ರಾಮಬಾಣ ಅಂತಾ ಕೆಲ ಸಂಶೋಧನೆಗಳು ಹೇಳಿವೆ.

ಏನಿದು ಕೆಂಪು ಇರುವೆ ಚಟ್ನಿ?
ಕೆಂಪು ಇರುವೆ ಚಟ್ನಿಯಲ್ಲಿ ಫಾರ್ಮಿಕ್ ಆ್ಯಸಿಡ್, ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ12, ಜಿಂಕ್ ಸೇರಿದಂತೆ ಕಬ್ಬಿಣಾಂಶ ಅಧಿಕವಾಗಿರುತ್ತದೆ. ಹೀಗಾಗಿ ಕೊರೊನಾಕ್ಕೆ ಪರಿಣಾಮಕಾರಿ ಮದ್ದು ಎನ್ನುವುದು ಕೆಲ ಸಂಶೋಧನೆಗಳು ಹೇಳಿದ್ದು, ಕೆಂಪು ಇರುವೆ ಚಟ್ನಿಗೆ ಇದೀಗ ಭಾರಿ ಮಹತ್ವ ಬಂದಿದೆ.

ಚಳಿಗಾಲದಲ್ಲಿ ಗೂಡು ಕಟ್ಟುವ ಕೆಂಪು ಇರುವೆ
ಚಳಿಗಾಲ ಬಂತೆಂದರೆ ಸಾಕು ಮಲೆನಾಡಿಗರಿಗೆ ಒಂದು ರೀತಿಯ ಹಬ್ಬ. ಏಕೆಂದರೆ ಈ ಕೆಂಪು ಇರುವೆಗಳು ಬೇರೆ ಸಮಯದಲ್ಲಿ ಗೂಡು ಕಟ್ಟಲ್ಲ. ಚಳಿಗಾಲದಲ್ಲಿ ಮಾತ್ರ ಗೂಡನ್ನು ಕಟ್ಟಿ ಮೊಟ್ಟೆ ಮಾಡಿ ಮರಿಗಳಿಗೆ ಜನ್ಮ ಕೊಡುತ್ತವೆ. ಹಾಗಾಗಿ ಈ ಕೆಂಪು ಇರುವೆಗಳನ್ನು ಇದೇ ಸಮಯದಲ್ಲಿ ಜನರು ಶಿಕಾರಿ ಮಾಡುತ್ತಾರೆ. ಅದರಲ್ಲೂ ಕಾಫಿನಾಡು ಚಿಕ್ಕಮಗಳೂರಿನ ಜನರು ಬಹಳ ಹಿಂದಿನಿಂದಲೂ ಕೆಂಪು ಇರುವೆಗಳನ್ನು ತಿನ್ನುತ್ತಾ ಬಂದಿದ್ದಾರೆ.

ಚಗಳಿ ಚಣ್ನಿ
ಕೆಂಪು ಇರುವೆಗಳನ್ನು ಮಲೆನಾಡಿಗರು ಚಗಳಿ ಎಂದು ಕರೆಯುತ್ತಾರೆ. ಇವುಗಳನ್ನು ಶಿಕಾರಿ ಮಾಡೋದು ಅಷ್ಟು ಸುಲಭದ ಕೆಲಸವಲ್ಲ. ಕೆಂಪು ಇರುವೆಗಳು ಕಚ್ಚಲು ಶುರು ಮಾಡಿದರೆ ಮುಗಿದೇ ಹೋಯ್ತು. ಹೀಗಾಗಿ ಎಚ್ಚರಿಕೆಯಿಂದಲೇ ಚಗಳಿಯನ್ನು ಗೂಡಿನಿಂದ ಬಿಡಿಸಿ ಪಾತ್ರೆಗಳಿಗೆ ಹಾಕುತ್ತಾರೆ. ಮೊದಲೇ ಪಾತ್ರೆಗಳಿಗೆ ಸ್ವಲ್ಪ ಉಪ್ಪನ್ನು ಹಾಕಿಕೊಂಡು ಬರುವುದರಿಂದ ಉಪ್ಪಿನ ಅಂಶಕ್ಕೆ ಬೇಗ ಇರುವೆಗಳು ಸಾಯುತ್ತವೆ.

ಚಗಳಿ ಚಣ್ನಿ ಮಾಡುವ ವಿಧಾನ
ಶಿಕಾರಿ ಮಾಡಿದ ಇರುವೆಗಳನ್ನು ಮನೆಗೆ ತಂದು ಆ ಪಾತ್ರೆಗೆ ಸ್ವಲ್ಪ ಶಾಕ ಕೊಟ್ಟು ಮತ್ತೊಮ್ಮೆ ಚಗಳಿಯನ್ನು ಸೊಪ್ಪು ಸದೆಯಿಂದ ಬೇರ್ಪಡಿಸುತ್ತಾರೆ. ಮತ್ತೊಂದು ಕಡೆ ಹಸಿ ಮೆಣಸಿನಕಾಯಿ ಅಥವಾ ಜೀರಿನ ಮೆಣಸಿನಕಾಯಿ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಹುರಿದುಕೊಂಡು ಚಗಳಿ ಜೊತೆ ಹಾಕಿ ರುಬ್ಬುವ ಕಲ್ಲಿನಲ್ಲಿ ಕಡೆಯುತ್ತಾರೆ. ಈ ವೇಳೆ ಅರಿಶಿನ ಮತ್ತು ಉಪ್ಪಿನ ಪುಡಿಯನ್ನು ಕೂಡ ಮಿಶ್ರಣ ಮಾಡಿ ಚೆನ್ನಾಗಿ ನುಣ್ಣಗೆ ಆಗುವ ತನಕ ಕಲ್ಲಿನಲ್ಲಿ ಕಡೆಯಲಾಗುತ್ತದೆ. ಚಗಳಿಯಲ್ಲಿ ಹುಳಿ ಅಂಶ ಇರುವುದರಿಂದ ಯಾವುದೇ ಹುಳಿ ಪದಾರ್ಥಗಳನ್ನು ಚಟ್ನಿಗೆ ಬಳಸುವುದಿಲ್ಲ. ಚೆನ್ನಾಗಿ ರುಬ್ಬುವ ಕಲ್ಲಿನಲ್ಲಿ ಕಡೆದ ಬಳಿಕ ರುಚಿ ರುಚಿಯಾದ ಚಗಳಿ ಚಟ್ನಿ ಸಿದ್ಧವಾಗುತ್ತದೆ. ರೆಡಿಯಾದ ಚಗಳಿ ಚಟ್ನಿಯನ್ನು ಅಕ್ಕಿ ರೊಟ್ಟಿ ಜೊತೆ ಸವಿದರೆ ಅದರ ಮಜಾನೇ ಬೇರೆ ಅಂತಾರೆ ಕಾಫಿನಾಡಿಗರು.

ಚಗಳಿ ಚಟ್ನಿಯನ್ನು ಆನಾದಿ ಕಾಲದಿಂದಲೂ ಈ ಭಾಗದಲ್ಲಿ ತಿನ್ನುತ್ತಲೇ ಬರುತ್ತಿದ್ದಾರೆ. ಹೇಗೆ ಸಾರಾಯಿ ಸರ್ವ ರೋಗಕ್ಕೂ ಮದ್ದು ಅನ್ನೋ ಗಾದೆ ಮಾತಿದೆಯೋ, ಹಾಗೆ ಚಗಳಿ ಚಟ್ನಿ ತಿಂದರೆ ಯಾವ ಕಾಯಿಲೆನೂ ಕೂಡ ಹತ್ತಿರ ಸುಳಿಯಲ್ಲ ಅನ್ನೋದು ಮಲೆನಾಡಿಗರ ಗಾಢವಾದ ನಂಬಿಕೆ. ಮನೆಯಲ್ಲಿ ಯಾರಿಗಾದರೂ ಶೀತ, ಜ್ವರ, ಟೈಪಾಯಿಡ್, ಕೆಮ್ಮು ಈ ರೀತಿಯ ಕಾಯಿಲೆಗಳು ಕಾಣಿಸಿಕೊಂಡರೆ ಮೊದಲು ಖಾರವಾದ ಚಗಳಿ ಚಟ್ನಿ ತಿನ್ನಿಸಿದರೆ ಕೂಡಲೇ ಎಲ್ಲಾ ಕಾಯಿಲೆ ಪಟಾಪಟ್ ಅಂತಾ ಹೊರಟು ಹೋಗುತ್ತದೆ ಎಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಗಲ್ ಗ್ರಾಮಸ್ಥರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಅಂಜಿಕೆಯಿಂದ ಚಗಳಿ ಚಟ್ನಿ ಎಂದರೆ ಮೂಗು ಮರಿಯುತ್ತಾರೆ. ಆದರೆ ಮಲೆನಾಡಿನ ಬಹುತೇಕರಿಗೆ ಚಗಳಿ ಚಟ್ನಿ ಅಂದ್ರೆ ಬಹಳ ಅಚ್ಚುಮೆಚ್ಚು. ಚಗಳಿ ಚಟ್ನಿ ತಿಂದರೆ ಒಳ್ಳೆಯದು ಎನ್ನುವ ವಿಚಾರ ಮಲೆನಾಡಿಗರಿಗೆ ತುಂಬಾ ಹಿಂದಿನಿಂದಲೇ ಗೊತ್ತಿರುವುದರಿಂದ ಚಗಳಿ ಅಥವಾ ಕೆಂಪು ಇರುವೆ ಮೇಲಿನ ಪ್ರೀತಿ ಇಂದಿಗೂ ಕೂಡ ಕಡಿಮೆಯಾಗಿಲ್ಲ.

 

ಕೆಂಪಿರುವೆ ಚಟ್ನಿ ಕೊರೊನಾಕ್ಕೆ ಲಸಿಕೆ ಆಗುತ್ತಾ? ಆಯುಷ್​ ಸಚಿವಾಲಯದಿಂದ ಶೀಘ್ರದಲ್ಲೇ ಸ್ಪಷ್ಟನೆ

Read Full Article

Click on your DTH Provider to Add TV9 Kannada