ಬಿಹಾರ ಚುನಾವಣೆಗೆ ಫಂಡಿಂಗ್ ಮಾಡಿ ಮಂತ್ರಿ ಪಟ್ಟದ ಷರತ್ತು ಹಾಕಿದ್ರಾ ಕಾಂಗ್ರೆಸ್ ಶಾಸಕ?
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅಕ್ರಮ ಆನ್ಲೈನ್ ಗೇಮ್ ಕೇಸ್ ಸಂಬಂಧ ಸದ್ಯ ಇಡಿ ಇಕ್ಕಳದಲ್ಲಿ ಸಿಲುಕಿ ಜೈಲಿನಲ್ಲಿ ವಿಲ ವಿಲ ಅಂತಾ ಒದ್ದಾಡುತ್ತಿದ್ದಾರೆ. ಸದ್ಯ ಇಡಿ ಅಧಿಕಾರಿಗಳು ವೀರೇಂದ್ರ ಪಪ್ಪಿಯ ಸಾಮ್ರಾಜ್ಯವನ್ನ ಜಾಲಾಡುತ್ತಿದ್ದು, ಚಿನ್ನದ ಖಜಾನೆಯೇ ಸಿಕ್ಕಿದೆ. ಹಾಗಾದ್ರೆ, ಪಪ್ಪಿ ಸಾಮ್ರಾಜ್ಯದಲ್ಲಿ ಇಡಿಗೆ ಸಿಕ್ಕಿದ್ದೇನು? ಅದಕ್ಕೂ ಮುನ್ನ ಕೋಟಿ ಕೋಟಿ ಸಾಮ್ರಾಜ್ಯ ಕಟ್ಟಿ ಕೊಂಡಿರೋ ವೀರೇಂದ್ರ ಪಪ್ಪಿಯ ಪ್ಲ್ಯಾನ್ ಏನಾಗಿತ್ತು? ಅದೆಂಥಾ ಷರತ್ತು ಹಾಕಿ ಹಣ ಹೂಡಿಕೆ ಮಾಡಲು ಪಪ್ಪಿ ರೆಡಿಯಾಗಿದ್ರು ಎನ್ನುವ ಎಕ್ಸ್‌ಕ್ಲೂಸಿವ್ ಮಾಹಿತಿ ಇಲ್ಲಿದೆ.

ಚಿತ್ರದುರ್ಗ, (ಅಕ್ಟೋಬರ್ 10): ಇಡಿ (ED) ಅಧಿಕಾರಿಗಳ ತನಿಖೆ ವೇಳೆ ಚಿತ್ರದುರ್ಗ (Chitradruga) ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯ (Congress MLA Veerenra Pappy) ಅಕ್ರಮ ಬಗೆದಷ್ಟು ಬಯಲಾಗುತ್ತಿದೆ. ರಾಜ್ಯ ಸಚಿವ ಸಂಪುಟ ಸೇರಿಸಿಕೊಳ್ಳುವಂತೆ ವೀರೇಂದ್ರ ಪಪ್ಪಿ ಷರತ್ತುವೊಂದನ್ನ ಹಾಕಿದ್ರಂತೆ. ಬಿಹಾರ ಚುನಾವಣೆಗೆ 300 ಕೋಟಿ ರೂಪಾಯಿ ಫಂಡ್ ಮಾಡಲು ಸಿದ್ಧವಾಗಿದ್ದರು ಎನ್ನಲಾಗಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಫಂಡಿಂಗ್ ಮಾಡಿ, ತಾನು ಮಂತ್ರಿಯಾಗಲು ಪ್ಲ್ಯಾನ್ ಸಹ ಮಾಡಿಕೊಂಡಿದ್ದರು ಎನ್ನುವ ಸ್ಫೋಟಕ ಅಂಶ ತಿಳಿದುಬಂದಿದೆ. ಆದ್ರೆ, ಇಡಿ ದಾಳಿಯಿಂದ ವೀರೇಂದ್ರ ಪಪ್ಪಿಯ ಸಚಿವ ಸ್ಥಾನದ ಕನಸು ಭಗ್ನವಾಗಿದ್ದು, ರಾಜಕೀಯ ಭವಿಷ್ಯಕ್ಕೆ ಬ್ರೇಕ್ ಬಿದ್ದಿದೆ.
ಸದ್ಯ ವಿರೇಂದ್ರ ಪಪ್ಪಿ ನ್ಯಾಯಾಂಗ ಬಂಧನದ್ದರೆ, ಇತ್ತ ನಿನ್ನೆಯೂ(ಅ.09) ಚೆಳ್ಳಿಕೆರೆಯ ಫೆಡರಲ್ ಬ್ಯಾಂಕ್‌ನಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, 2 ಲಾಕರ್‌ನಲ್ಲಿ 50 ಕೋಟಿ ರೂಪಾಯಿ ಮೌಲ್ಯದ 44 ಕೆಜಿಯಷ್ಟು ಚಿನ್ನವನ್ನ ಸೀಜ್ ಮಾಡಲಾಗಿದೆ. ಈ ಮೂಲಕ ಇದುವರೆಗೂ ಬರೋಬ್ಬರಿ 150 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಸ್ತುಗಳ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಲಾಕರ್ ರಹಸ್ಯ ಬಯಲು: ಇಡಿಗೆ ಸಿಕ್ತು 44 ಕೆಜಿ ಚಿನ್ನ
103ಕೋಟಿ ಮೌಲ್ಯದ ವಾಹನಗಳು, 21ಕೆಜಿ ಚಿನ್ನ
ಈವರೆಗೂ ಪಪ್ಪಿಗೆ ಸೇರಿರುವ 103 ಕೋಟಿ ಮೌಲ್ಯದ ವಾಹನಗಳು ಮತ್ತು 21 ಕೆಜಿಯಷ್ಟು ಚಿನ್ನವನ್ನ ಇಡಿ ಸೀಜ್ ಮಾಡಿದೆ. ಅಲ್ಲದೇ 150 ಕೋಟಿ ಆನ್‌ಲೈನ್ ಬೆಟ್ಟಿಂಗ್ ವ್ಯವಹಾರದಲ್ಲಿ ಆದಾಯ ಪತ್ತೆಯಾಗಿದ್ದು, ಬೆಟ್ಟಿಂಗ್ ಆ್ಯಪ್‌ಗಳ ಮೂಲಕವೇ ಸುಮಾರು 2 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಿರೋ ಇಡಿ ತನಿಖೆಯಿಂದ ಗೊತ್ತಾಗಿದೆ. ಹಾಗೆಯೇ ಇಡಿ ಅಧಿಕಾರಿಗಳ ತನಿಖೆ ವೇಳೆ ಮಹತ್ವದ ದಾಖಲೆಗಳು ಪತ್ತೆಯಾಗಿವೆ.
ಅಕ್ರಮ ಬೆಟ್ಟಿಂಗ್ ಆ್ಯಪ್ ಮೂಲಕ ಹಣ ಸಂಪಾದಿಸಿ ಬಿಹಾರ ಚುನಾವಣೆಗೆ ಫಂಡಿಂಗ್ ಮಾಡಿ, ಮಂತ್ರಿಯಾಗಲು ವೀರೇಂದ್ರ ಪಪ್ಪಿ ಸಿದ್ಧರಾಗಿದ್ರು ಎನ್ನಲಾಗಿದೆ. ಆದ್ರೆ, ಇಡಿ ದಾಳಿಯಿಂದ ವೀರೇಂದ್ರ ಪಪ್ಪಿಯ ಲೆಕ್ಕಾಚಾರಗಳು ಉಲ್ಟಾ ಆಗಿವೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಇಡಿ ಮತ್ತೊಂದು ಶಾಕ್: ಅಕೌಂಟ್‌ಗಳಲ್ಲಿದ್ದ 55 ಕೋಟಿ ರೂ. ಜಪ್ತಿ
ಒಟ್ಟಾರೆಯಾಗಿ, ಈ ಅಕ್ರಮ ಆನ್ಲೈನ್ ಬೆಟ್ಟಿಂಗ್ ಮತ್ತು ಹಣ ವರ್ಗಾವಣೆ ಪ್ರಕರಣದಲ್ಲಿ ಶಾಸಕ ವೀರೇಂದ್ರ ಪಪ್ಪಿಯವರ ಒಡೆತನದ ಸಂಸ್ಥೆಗಳು ಒಂದೇ ಗೇಟ್‌ವೇ ಮೂಲಕ 2,000 ಕೋಟಿಗೂ ಹೆಚ್ಚು ಹಣವನ್ನ ಸಂಗ್ರಹಿಸಿರುವ ಬಗ್ಗೆ ಕೋರ್ಟ್ಗೆ ಇ.ಡಿ ಮಾಹಿತಿ ನೀಡಿದೆ.. ಇ.ಡಿ ದಾಳಿ ಮುಂದುವರೆದಿದ್ದು, ಪ್ರಕರಣದ ತನಿಖೆ ಮತ್ತಷ್ಟು ಆಳಕ್ಕೆ ಇಳಿಯುವ ಸಾಧ್ಯತೆಯಿದೆ.
ಕ್ಯಾಸಿನೋ ಬ್ಯುಸಿನೆಸ್, ಆನ್ಲೈನ್, ಆಫ್ಲೈನ್ ಬೆಟ್ಟಿಂಗ್ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ, ಉದ್ಯಮಿ ವೀರೇಂದ್ರ ಪಪ್ಪಿಯ ಸಾಮ್ರಾಜ್ಯ ಕಂಡ ಇಡಿ ಶಾಕ್ ಆಗಿದೆ.
ರಾಹುಲ್ ಗಾಂಧಿ ಮಾಡೆಲ್ ಎಂದ ಬಿಜೆಪಿ
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯವಾಗಿ ಪೋಸ್ಟ್ ಮಾಡಿದೆ. ಕಾಂಗ್ರೆಸ್ ಭ್ರಷ್ಟ ಶಾಸಕ ವೀರೇಂದ್ರ ಪಪ್ಪಿ ಬಂಧನವಾಗದಿದ್ದರೆ ಬಿಹಾರ ಚುನಾವಣೆಗೆ ಕಾಂಗ್ರೆಸ್ಗೆ ಫಂಡಿಂಗ್ ದೊರೆಯುತ್ತಿತ್ತು. ಹೈಕಮಾಂಡ್ ಗೆ 300 ಕೋಟಿ ಫಂಡಿಂಗ್ ದೊರೆಯುತ್ತಿತ್ತು. ಅಲ್ಲದೇ ಭ್ರಷ್ಟ ಶಾಸಕ ಸಚಿವರಾಗುವ ಅವಕಾಶ ಪಡೆಯುತ್ತಿದ್ರು. ಇದು ರಾಹುಲ್ ಗಾಂಧಿ ಮಾಡೆಲ್. ಕಾಂಗ್ರೆಸ್ನಲ್ಲಿರುವ ಬಹುತೇಕ ನಾಯಕರ ಕಥೆ ಇದೇ ಆಗಿದೆ. ರಾಹುಲ್, ಕುಟುಂಬದ ಜೋಳಿಗೆ ತುಂಬಿದ್ರೆ CM ಆಗಬಹುದು. ಶಾಸಕ ಏನು ಮಂತ್ರಿ, ಮುಖ್ಯಮಂತ್ರಿಯೂ ಆಗಬಹುದು ಎಂದು ವ್ಯಂಗ್ಯವಾಡಿದೆ.
ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Fri, 10 October 25



