ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ಇಡಿ ಮತ್ತೊಂದು ಶಾಕ್: ಅಕೌಂಟ್‌ಗಳಲ್ಲಿದ್ದ 55 ಕೋಟಿ ರೂ. ಜಪ್ತಿ
ಅಕ್ರಮ ಬೆಟ್ಟಿಂಗ್, ಆನ್ ಲೈನ್ ಗೇಮಿಂಗ್ ದಂಧೆ ಆರೋಪ ಮೇಲೆ ಇಡಿ ಅಧಿಕಾರಿಗಳು ಚಿತ್ರದುರ್ಗ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಅವರ ನಿವಾಸದ ಮೇಲೆ ದಾಳಿ ಮಾಡಿದ್ದು, ಸದ್ಯ ವಿರೇಂದ್ರ ಪಪ್ಪಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ವಿರೇಂದ್ರ ಕೊಟ್ಟ ಮಾಹಿತಿ ಆಧರಿಸಿ ಇಡಿ ಅಧಿಕಾರಿಗಳು ಮನೆ, ಬ್ಯಾಂಕ್ ಅಕೌಂಟ್ ಗಳ ಶೋಧ ನಡೆಸಿದ್ದಾರೆ.

ಬೆಂಗಳೂರು/ಚಿತ್ರದುರ್ಗ (ಸೆಪ್ಟೆಂಬರ್ 03): ಅಕ್ರಮ ಬೆಟ್ಟಿಂಗ್ ಆರೋಪ ಸಂಬಂಧ ಚಿತ್ರದುರ್ಗದ (Chitradurga) ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ (KC Veerendra Pappi) ಅವರನ್ನು ಇಡಿ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದೆ. ಮತ್ತೊಂದೆಡೆ ವಿರೇಂದ್ರಗೆ ಸಂಬಂಧಿಸಿದಂತೆ ಆಸ್ತಿಯನ್ನು ಇಡಿ ಅಧಿಕಾರಿಗಳು ಶೋಧ ನಡೆಸಿದ್ದು, ಸದ್ಯ ವೀರೇಂದ್ರಗೆ ಸೇರಿದ ಬ್ಯಾಂಕ್ ಅಕೌಂಟ್‌ಗಳಲ್ಲಿದ್ದ 55 ಕೋಟಿ ರೂಪಾಯಿಯನ್ನು ಜಪ್ತಿ ಮಾಡಿದೆ. ಒಟ್ಟು 9 ಬ್ಯಾಂಕ್ ಖಾತೆಗಳು, ಒಂದು ಡಿಮ್ಯಾಟ್ ಅಕೌಂಟ್ ಹಾಗೂ 262 ಮ್ಯೂಲ್ ಖಾತೆಗಳಲ್ಲಿದ್ದ ಅಂದಾಜು 55 ಕೋಟಿ ರೂ. ಜಪ್ತಿ ಮಾಡಿದೆ. ಅಲ್ಲದೇ 5 ದುಬಾರಿ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದೆ.
ಸದ್ಯ ಇಡಿ ವಶದಲ್ಲಿರುವ ಶಾಸಕ ವೀರೇಂದ್ರ ಹೇಳಿಕೆ ಆಧರಿಸಿ ಅವರ ಮನೆ ಮೇಲೆ ದಾಳಿ ನಡೆಸಿದ್ದು, ಅವರ ಮನೆಯಲ್ಲಿರುವ ಐಶಾರಾಮಿ ಕಾರುಗಳ ಬಗ್ಗೆ ಪರಿಶೀಲನೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಮನೆ ಮಾತ್ರವಲ್ಲದೇ ಶಾಸಕ ವೀರೇಂದ್ರ ಪಪ್ಪಿಯ ಬ್ಯಾಂಕ್ ಖಾತೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಿ 55 ಕೋಟಿ ರೂ. ಫ್ರೀಜ್ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಬಂಧನ: ಇಡಿ ಅಧಿಕಾರಿಗಳಿಗೆ ಕೋರ್ಟ್ ತರಾಟೆ, ಇಲ್ಲಿದೆ ವಾದ ಪ್ರತಿವಾದ
ಚಳ್ಳಕೆರೆ ನಗರದ ಕೋಟೆಕ್ ಮಹೇಂದ್ರ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್‌ಗೆ ಇ.ಡಿ ಅಧಿಕಾರಿಗಳು ತೆರಳಿದ್ದರು. ಆ ಬ್ಯಾಂಕ್‌ನಲ್ಲಿ ವೀರೇಂದ್ರ ಪಪ್ಪಿ ಹಾಗೂ ಅವರ ಕುಟುಂಬ ಸದಸ್ಯರ ಹಣ ವರ್ಗಾವಣೆ ಬಗ್ಗೆ ಮಾಹಿತಿ, ದಾಖಲೆಯನ್ನ ಕೂಡ ಕಲೆ ಹಾಕಿದ್ದು, ಹಲವು ಬ್ಯಾಂಕ್ ಖಾತೆಗಳ ಮೂಲಕ ಆಗಿರುವ ಹಣಕಾಸು ವರ್ಗಾವಣೆ ಬಗ್ಗೆ ಮಾಹಿತಿ, ದಾಖಲೆಯನ್ನು ಸಂಗ್ರಹಿಸಿದ್ದರು. ಜೊತೆಗೆ ಬೆಟ್ಟಿಂಗ್ (Online Betting) ಆಪ್‌ಗಳ ಮೂಲಕ ಗಳಿಸಿದ ಹಣವನ್ನು ಈ ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡುವ ಮೂಲಕ ಅಕ್ರಮ ವ್ಯವಹಾರ ನಡೆಸಿದ್ದಾರೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಸಿದ್ದಾರೆ.
ಆಗಸ್ಟ್ 22ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿರುವ ವೀರೇಂದ್ರ ಪಪ್ಪಿ ನಿವಾಸ ಮೇಲೆ ಮುಂಜಾನೆ 5 ಗಂಟೆಗೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು ಮಧ್ಯರಾತ್ರಿವರೆಗೂ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಅಂದು ಪಪ್ಪಿ ಮನೆಯಲ್ಲಿ ಕೋಟಿ ಕೋಟಿ ಹಣ ಜೊತೆ ಚಿನ್ನಾಭರಣ ವಿದೇಶಿ ಕರೆನ್ಸಿಯನ್ನ ಇಡಿ ವಶಕ್ಕೆ ಪಡೆದಿತ್ತು. ಸತತ 18 ಗಂಟೆಗೂ ಹೆಚ್ಚು ಕಾಲ ಇಡಿ ಅಧಿಕಾರಿಗಳು ಪಪ್ಪಿ ಕೋಟೆಯನ್ನು ಜಾಲಾಡಿದ್ದರು. ಈ ವೇಳೆ 1 ಕೋಟಿ ರೂ ವಿದೇಶಿ ಕರೆನ್ಸಿ ಸೇರಿದಂತೆ ಸುಮಾರು 12 ಕೋಟಿ ರೂ ನಗದು ಪತ್ತೆ ಆಗಿತ್ತು. 6 ಕೋಟಿ ರೂ. ಮೌಲ್ಯದ ಚಿನ್ನ, ಸುಮಾರು 10 ಕೆಜಿ ಬೆಳ್ಳಿ ಜಪ್ತಿ ಮಾಡಲಾಗಿತ್ತು.
ವರದಿ: ಪ್ರದೀಪ್ ಚಿಕ್ಕಾಟೆ, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Wed, 3 September 25




