AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ ಕೋಟೆನಾಡಿನ ಮಾದರಿ ಶಾಲೆ

ಶಾಲೆಯಲ್ಲಿ 8 ವಿಶಾಲವಾದ ಕೊಠಡಿಗಳಿದ್ದು ಉತ್ತಮ ಡೆಸ್ಕ್ , ಬೋರ್ಡ್ ಮತ್ತು ಪೀಠೋಪಕರಣಗಳನ್ನು ಅಳವಡಿಸಲಾಗಿದೆ. ಮಕ್ಕಳನ್ನು ಆಕರ್ಷಿಸುವ ಸುಂದರ ಗೋಡೆ ಬರಹಗಳನ್ನು ಬರೆಯಲಾಗಿದೆ. ಅಂತೆಯೇ ಇತಿಹಾಸ, ವಿಜ್ಞಾನ ಸೇರಿದಂತೆ ಇತರೆ ಮಾಹಿತಿ‌ ಫಲಕಗಳಿವೆ.

ಮಕ್ಕಳನ್ನು ಕೈ ಬೀಸಿ ಕರೆಯುತ್ತಿದೆ ಕೋಟೆನಾಡಿನ ಮಾದರಿ ಶಾಲೆ
ಜವನಗೊಂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
preethi shettigar
| Edited By: |

Updated on:Apr 04, 2021 | 10:02 AM

Share

ಚಿತ್ರದುರ್ಗ: ಸರ್ಕಾರಿ ಶಾಲೆ ಎಂದರೆ ಜನರು ಮೂಗು ಮುರಿಯುವ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಶಾಲೆಗಳ ಆಕರ್ಷಣೆಯಿಂದಾಗಿ ಪೋಷಕರು ಹೆಚ್ಚು ಬೆಲೆ ತೆತ್ತಾದರೂ ಸರಿ ಮಕ್ಕಳನ್ನು ಅಲ್ಲಿಗೇ ಕಳುಹಿಸಬೇಕು ಎನ್ನುವಂತಾಗಿದ್ದಾರೆ. ಆದರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾತ್ರ ಯಾವ ಖಾಸಗಿ ಶಾಲೆಗೂ ಕಡಿಮೆ‌ ಇಲ್ಲದಂತ ಹೈಟೆಕ್ ಶಾಲೆ‌ಯಾಗಿ ನಿರ್ಮಾಣವಾಗಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಕಲಿಕೆಗೆ ಪೂರಕ ವಾತಾವರಣ ಇರುವ ಸುಂದರ ಶಾಲಾ ಕಟ್ಟಡ ಇದ್ದು, ಮಕ್ಕಳನ್ನು ಶಾಲೆಯತ್ತ ಬರ ಸೆಳೆಯುವ ಸುಂದರಗೋಡೆ ಚಿತ್ತಾರಗಳು ಇಲ್ಲಿ ಇದೆ. ಕಲೆ, ಸಾಹಿತ್ಯ, ಇತಿಹಾಸ, ವಿಜ್ಞಾನ, ನಾಡು ನುಡಿಯ ಮಾಹಿತಿ ನೀಡುವ ಜ್ಞಾನ ಭಂಡಾರವಾದ ನಾಲ್ಕು ದಶಕಗಳಷ್ಟು ಹಳೆಯದಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ಗ್ರಾಮದ ಮಕ್ಕಳನ್ನು ಕಲಿಕೆಗೆ ಆಹ್ವಾನಿಸುತ್ತಿದೆ.

ಸಂಪೂರ್ಣವಾಗಿ ಶಿಥಿಲ ಹಂತದಲ್ಲಿ ಇದ್ದ ಈ ಶಾಲೆ ಬಗ್ಗೆ ಎ.ನಾರಾಯಣಸ್ವಾಮಿ ಗ್ರಾಮಕ್ಕೆ ಭೇಟಿ ನೀಡಿದಾಗ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತಿಳಿಸಿದ್ದರು. ಅದರಂತೆ ಹೈಟೆಕ್ ಶಾಲೆ ನಿರ್ಮಾಣದ ಭರವಸೆ ನೀಡಿದ ಸಂಸದರು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಬೆಂಗಳೂರಿನ ಬಾಷ್ ಕಂಪನಿಗೆ ಶಾಲೆ ಅಭಿವೃದ್ಧಿ ಪಡಿಸಲು ಮನವಿ ಮಾಡಿದ್ದರು. ಅಂತೆಯೇ ಸುಮಾರು 2ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಶಾಲೆ ನಿರ್ಮಿಸಲಾಗಿದೆ.

ಏಪ್ರಿಲ್ 3ರಂದು ಸಂಸದ ನಾರಾಯಣಸ್ವಾಮಿ ಈ ಶಾಲಾ ಕಟ್ಟಡವನ್ನು ಉದ್ಘಾಟಿಸಿದರು. ಈ ವೇಳೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಬಾಷ್ ಕಂಪನಿ ಮುಖ್ಯಸ್ಥ ಗುರುಪ್ರಸಾದ್, ಡಿಡಿಪಿಐ ರವಿಶಂಕರರೆಡ್ಡಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹೈಟೆಕ್ ಶಾಲೆ ನಿರ್ಮಾಣದ ಬಗ್ಗೆ ಸಂಸದ ನಾರಾಯಣಸ್ವಾಮಿ ಖುಷಿ ವ್ಯಕ್ತಪಡಿಸಿದ್ದಾರೆ.

chitradurga school

ಸಂಸದ ನಾರಾಯಣಸ್ವಾಮಿ ಈ ಶಾಲಾ ಕಟ್ಟಡವನ್ನು ಉದ್ಘಾಟಿಸಿದರು

ಜಿಲ್ಲೆಯಲ್ಲಿ ಸಭೆಯನ್ನು ಮಾಡಿದ್ದೆವು ಆಗ ಚಿತ್ರದುಗರ್ದಲ್ಲಿನ ಈ ಶಾಲೆಗೆ ಕಟ್ಟಡ ಬೇಕು ಎಂಬ ಬಗ್ಗೆ ಮಾಹಿತಿ ಸಿಕ್ಕಿತು. ನಂತರ ಬಾಷ್ ಕಂಪನಿಗೆ ಈ ಕಟ್ಟಡ ನಿರ್ಮಾಣದ ಜವಾಬ್ದಾರಿ ವಹಿಸಿದ್ದೆವು. ಸದ್ಯ ಕಟ್ಟಡ ನಿರ್ಮಾಣವಾಗಿದ್ದು, ಇದು ಮೌಲ್ಯಗಳನ್ನು ಮತ್ತು ನೀತಿ ಪಾಠಗಳನ್ನು ನೀಡುತ್ತದೆ. ಇನ್ನು ಈ ಶಾಲೆಯಲ್ಲಿ ಮಳೆಕೊಯ್ಲು ಮತ್ತು ಶೌಚಾಯಗಳ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಹೀಗಾಗಿ ಈ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಚಿತ್ರದುರ್ಗದ ಸಂಸದರಾದ ಎ.ನಾರಾಯಣಸ್ವಾಮಿ ಹೇಳಿದ್ದಾರೆ.

chitradurga school

ಶಿಥಿಲ ಹಂತದಲ್ಲಿ ಇದ್ದ ಶಾಲೆ ಹೈಟೆಕ್ ಶಾಲೆಯಾಗಿ ನಿರ್ಮಾಣ

ಶಾಲೆಯಲ್ಲಿ 8 ವಿಶಾಲವಾದ ಕೊಠಡಿಗಳಿದ್ದು ಉತ್ತಮ ಡೆಸ್ಕ್ , ಬೋರ್ಡ್ ಮತ್ತು ಪೀಠೋಪಕರಣಗಳನ್ನು ಅಳವಡಿಸಲಾಗಿದೆ. ಮಕ್ಕಳನ್ನು ಆಕರ್ಷಿಸುವ ಸುಂದರ ಗೋಡೆ ಬರಹಗಳನ್ನು ಬರೆಯಲಾಗಿದೆ. ಅಂತೆಯೇ ಇತಿಹಾಸ, ವಿಜ್ಞಾನ ಸೇರಿದಂತೆ ಇತರೆ ಮಾಹಿತಿ‌ ಫಲಕಗಳಿವೆ. ಶಿಕ್ಷಕರ ಕೊಠಡಿ, ಕಂಪ್ಯೂಟರ್ ಕೊಠಡಿ ಸೇರಿದಂತೆ ಪ್ರತ್ಯೇಕ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದ್ದು, ಯಾವ ಖಾಸಗಿ ಶಾಲೆಗೂ ಕಡಿಮೆ‌ ಇಲ್ಲದ ಹೈಟೆಕ್ ಶಾಲೆ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ.

ನಮ್ಮ ಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತದೆ. ಆದರೆ, ಶಾಲಾ ಕಟ್ಟಡ ಶಿಥಿಲಗೊಂಡಿದ್ದು, ಆತಂಕ ಸೃಷ್ಟಿಸಿತ್ತು. ಈಗ ಗುಣಮಟ್ಟದ ಶಿಕ್ಷಣದ ಜತೆಗೆ ಹೈಟೆಕ್ ಶಾಲೆಯು ನಿರ್ಮಾಣ ಆಗಿದ್ದು, ಖುಷಿ ಮೂಡಿಸಿದೆ ಎಂದು ವಿದ್ಯಾರ್ಥಿನಿ ಬಿಂದು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜವನಗೊಂಡನಹಳ್ಳಿ ಗ್ರಾಮದಲ್ಲಿ ಬೃಹತ್ ಹೈಟೆಕ್ ಶಾಲೆ ನಿರ್ಮಾಣ ಆಗಿದೆ. ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲದ ಶಾಲೆ ವಿದ್ಯಾರ್ಥಿಗಳನ್ನು ಕಲಿಕೆ ಕಡೆಗೆ ಆಹ್ವಾನಿಸಿದೆ. ಪ್ರತಿ ಗ್ರಾಮದಲ್ಲೂ ಉತ್ತಮ ಗುಣಮಟ್ಟದ ಶಾಲೆ ಮತ್ತು ಶಿಕ್ಷಣ ಲಭಿಸುವಂತಾಗಲಿ ಎಂಬುದು ಜನರ ಆಶಯ.

(ವರದಿ:ಬಸವರಾಜ್ ಮುದನೂರ್-9980914116)

ಇದನ್ನೂ ಓದಿ: ಕೊರೊನಾ ಎರಡನೇ ಅಲೆಗೆ ಕಾಫಿನಾಡು ಕಂಗಾಲು.. ಮೊನ್ನೆ ದಂಪತಿ ಸಾವು, ಇಂದು ಒಂದೇ ಶಾಲೆಯ 26 ವಿದ್ಯಾರ್ಥಿನಿಯರಿಗೆ ಸೋಂಕು

(Chitradurga government school is attracting students with modern facilities)

Published On - 10:01 am, Sun, 4 April 21