
ಚಿತ್ರದುರ್ಗ, ಜೂನ್ 18: ಇತ್ತೀಚೆಗೆ ಬೆಳಗಾವಿಯ ಶಿವಾನಂದ ನೀಲಣ್ಣವರ ಶಿವಂ ಅಸೋಸಿಯೇಟ್ ಕಂಪನಿಯಿಂದ ಸಾವಿರಾರು ಕೋಟಿ ರೂ ವಂಚನೆ (Fraud) ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈ ಬಳಿಕ ಹಾವೇರಿ, ರಾಯಚೂರು ಮತ್ತು ತುಮಕೂರಿನಲ್ಲೂ ದುಷ್ಕರ್ಮಿಗಳು ಜನರಿಗೆ ಲಕ್ಷಾಂತರ ರೂ ವಂಚಿಸಿದ್ದರು. ಇದೀಗ ಚಿತ್ರದುರ್ಗದಲ್ಲಿ (chitradurga) ಆಂಧ್ರ ಮೂಲದ ಕಂಪನಿಯಿಂದ ಸುಮಾರು 470 ಜನರಿಂದ 60 ರಿಂದ 70 ಕೋಟಿ ರೂ ಹಣ ಸಂಗ್ರಹಿಸಿ ವಂಚಿಸಲಾಗಿದೆ. ಸದ್ಯ ವಂಚನೆಗೊಳಗಾದ ಜನರು ಜಿಲ್ಲಾ ಪೊಲೀಸ್ ಕಛೇರಿಗೆ ದೂರು ನೀಡಿದ್ದಾರೆ.
ಆಂಧ್ರ ಮೂಲದ ಎಸ್‌ಎಲ್‌ವಿ ಕಂಪನಿ ಉದ್ಯೋಗ ಹಾಗೂ ವಿಶೇಷ ಪ್ಯಾಕೇಜ್ ಆಮಿಷ ತೋರಿಸಿ ಚಿತ್ರದುರ್ಗದ ಸುಮಾರು 470 ಜನರಿಗೆ 60 ರಿಂದ 70 ಕೋಟಿ ರೂ ವಂಚಿಸಿದೆ. ರಾಜೇಶ್ ಬೊಮ್ಮಾಲ ಎಂಬುವವನು ಅಮಾಯಕ ಜನರಿಗೆ ವಂಚಿಸಿದ್ದಾನೆ.
ಇದನ್ನೂ ಓದಿ: ಮನೆಯಲ್ಲೇ ಪ್ಯಾಕಿಂಗ್ ಕೆಲಸ ಅಂತ ನಂಬಿಸಿ 10 ಕೋಟಿ ರೂ. ಎಗರಿಸಿದ್ರು: ಹಾವೇರಿಯ ‘SLV ಮಹಿಳಾ ಮಾರ್ಟ್’ ಮಾಲೀಕರ ಮಹಾಮೋಸ
ಈ ರಾಜೇಶ್ ಬೊಮ್ಮಾಲ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಕಂಪನಿ ಬಗ್ಗೆ ಆಕರ್ಷಕ ಪ್ರಚಾರ ಮಾಡಿದ್ದಾನೆ. ಇದನ್ನು ನಂಬಿ ನೂರಾರು ಕೂಲಿಕಾರ್ಮಿಕರು, ಗೃಹಿಣಿಯರು, ನಿರುದ್ಯೋಗಿ ಯುವಕರು ಫೈನಾನ್ಸ್ನಲ್ಲಿ ಸಾಲ ಮಾಡಿ ಕಂಪನಿಗೆ ಹಣ ಕಟ್ಟಿದ್ದಾರೆ.
ಅಷ್ಟೇ ಅಲ್ಲದೆ ಇನ್ನು ಕೆಲವರು ಚಿನ್ನಾಭರಣ, ಆಸ್ತಿಪತ್ರವನ್ನೂ ಒತ್ತೆಯಿಟ್ಟು ಕಂಪನಿಗೆ ಹಣ ತುಂಬಿದ್ದರು. ಆದರೆ ಇದೀಗ ವಂಚಕರು ಹಣದೊಂದಿಗೆ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದು, ಜನರಿಗೆ ದಿಕ್ಕು ತೋಚದಂತಾಗಿದೆ. ಹಾವೇರಿ, ರಾಯಚೂರು, ತುಮಕೂರು ಮಾದರಿಯಲ್ಲೇ ಚಿತ್ರದುರ್ಗದಲ್ಲೂ ವಂಚನೆ ನಡೆದಿದೆ. ಸದ್ಯ ನ್ಯಾಯ ಕೊಡಿಸುವಂತೆ ಸಂತ್ರಸ್ತ ಜನರು ಅಳಲು ತೋಡಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.