ಚಿತ್ರದುರ್ಗ: ಕಷ್ಟಪಟ್ಟು ಬೆಳೆದ ಹೂವಿಗೆ ಸಿಗದ ಬೆಲೆ; ಬೇಸತ್ತು ಹೂಬೆಳೆ ನಾಶಕ್ಕೆ ಮುಂದಾದ ರೈತ
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಒಂದು ಕಡೆ ಭೀಕರ ಬರಗಾಲ ಎದುರಾಗಿದೆ. ಮತ್ತೊಂದು ಕಡೆ ರೈತರು ಬೆವರು ಸುರಿಸಿ ದುಡಿದ ಹೂಬೆಳೆಗೆ ಬೆಲೆ ಇಲ್ಲದಂತಾಗಿದೆ. ಹೀಗಾಗಿ, ಕಂಗಾಲಾದ ರೈತರು, ತಾವೇ ಜತನದಿಂದ ಬೆಳೆದಿದ್ದ ಹೂಬೆಳೆಯನ್ನು ನಾಶಪಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಚಿತ್ರದುರ್ಗ, ನ.28: ಭೀಕರ ಬರಗಾಲದ ನಡುವೆಯೂ ಹೂವಿನ ಬೆಳೆ ಉತ್ತಮ ಫಲ ನೀಡಿದೆ. ಆದರೆ, ಮಾರುಕಟ್ಟೆಯಲ್ಲಿ ಹೂವಿನ ಬೆಲೆ(Flower Rate) ದಿಢೀರ್ ಕುಸಿತ ಕಂಡಿದ್ದು, ರೈತರು ಕಂಗಾಲಾಗಿದ್ದಾರೆ. ಹೂ ಬೆಳೆಯಿಂದ ಆದಾಯಕ್ಕಿಂತ ನಷ್ಟವೇ ಹೆಚ್ಚೆಂಬುದು ಅರಿತ ರೈತರು, ಇದೀಗ ಬೆಳೆ ನಾಶಕ್ಕೆ ಮುಂದಾಗಿದ್ದಾರೆ.ಕೋಟೆನಾಡು ಚಿತ್ರದುರ್ಗ(Chitradurga) ತಾಲೂಕಿನ ಹುಣಸೇಕಟ್ಟೆ, ದೊಡ್ಡ ಸಿದ್ದವ್ವನಹಳ್ಳಿ, ಕ್ಯಾದಿಗ್ಗೆರೆ ಮತ್ತು ಚಳ್ಳಕೆರೆ ರಸ್ತೆ ಪ್ರದೇಶದಲ್ಲಿ ನೂರಾರು ರೈತರು, ಸೇವಂತಿಗೆ, ಚಂಡು ಹೂವು, ಮಲ್ಲಿಗೆ ಹೂವು, ರೂಬಿ ಹೂವು ಸೇರಿದಂತೆ ವಿವಿಧ ಹೂವುಗಳನ್ನು ಈ ಭಾಗದ ರೈತರು ಬೆಳೆಯುತ್ತಾರೆ.
ಈ ವರ್ಷ ಬರದ ನಡುವೆಯೂ ರೈತರು ಕಷ್ಟಪಟ್ಟು ಹೂ ಬೆಳೆಯನ್ನು ಬದುಕಿಸಿಕೊಂಡಿದ್ದರು. ಆದರೆ ಹೆಚ್ಚಿನ ಪ್ರಮಾಣದಲ್ಲಿ ಹೂವಿನ ಬೆಳೆ ಫಲ ನೀಡಿದ್ದರ ಪರಿಣಾಮ ಹೂವಿನ ಬೆಲೆ ದಿಢೀರ್ ಕುಸಿತವಾಗಿದೆ. ಹೂ ಬೆಳೆದ ರೈತಾಪಿ ವರ್ಗ ಕಂಗಾಲಾಗಿದ್ದಾರೆ. ಮಾರುಕಟ್ಟೆಯಲ್ಲಿ ಹೂವನ್ನು ಕೊಂಡುಕೊಳ್ಳುವವರೇ ಇಲ್ಲದಂತಾಗಿದೆ. ಹೀಗಾಗಿ, ಸರ್ಕಾರ ಹೂವಿನ ಬೆಳೆಗಾರರಿಗೆ ಈ ಹಿಂದಿನಿಂದಲೂ ಬೆಳೆ ಪರಿಹಾರ ನಿಡಿಲ್ಲ. ಈಗಲಾದರೂ ಎಕರೆಗೆ 20ಸಾವಿರಕ್ಕೂ ಅಧಿಕ ಹಣ ಪರಿಹಾರ ನೀಡಬೇಕೆಂಬುದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಹಬ್ಬದ ಸಮಯದಲ್ಲಿಯೇ ಕುಸಿದ ಹೂವಿನ ಬೆಲೆ; ಬರದ ನಡುವೆ ಕಷ್ಟಪಟ್ಟು ಬೆಳೆ ಬೆಳೆದ ರೈತ ಕಂಗಾಲು
ಇನ್ನು ಕ್ಯಾದಿಗ್ಗೆರೆ ಗ್ರಾಮದ ರೈತ ಸತೀಶ್ 2 ಎಕರೆಯಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ಹೂ ಬೆಳೆ ಬೆಳೆದಿದ್ದರು. ಆದ್ರೆ, ಮಾರುಕಟ್ಟೆಯಲ್ಲಿ ಕೆಜಿಗೆ 10 ರೂಪಾಯಿಯಂತೆ ಹೂವಿನ ಖರೀದಿ ನಡೆಯುತ್ತಿದೆ. ಹೀಗಾಗಿ, ಹೂಬೆಳೆ ಬೆಳೆದಿದ್ದರ ಪರಿಣಾಮ ಭಾರೀ ನಷ್ಟವಾಗಿದ್ದು, ಟ್ರ್ಯಾಕ್ಟರ್ ಮೂಲಕ ಬೆಳೆ ನಾಶ ಪಡಿಸುತ್ತಿದ್ದೇವೆಂದು ರೈತ ಹೇಳುತ್ತಾರೆ. ಒಟ್ಟಾರೆಯಾಗಿ ರೈತಾಪಿ ವರ್ಗ ಬರಗಾಲದ ನಡುವೆಯೂ ಹರಸಾಹಸ ಪಟ್ಟು ಹೂ ಬೆಳೆಯನ್ನು ಉಳಿಸಿಕೊಂಡಿತ್ತು. ಆದ್ರೆ, ಬೆಲೆ ಕುಸಿತದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಿಂದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ, ಸರ್ಕಾರ ಹೂವಿನ ಬೆಳೆಗಾರರತ್ತ ಗಮನಹರಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂಬುದು ರೈತರ ಆಗ್ರಹವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ