ಹಬ್ಬದ ಸಮಯದಲ್ಲಿಯೇ ಕುಸಿದ ಹೂವಿನ ಬೆಲೆ; ಬರದ ನಡುವೆ ಕಷ್ಟಪಟ್ಟು ಬೆಳೆ ಬೆಳೆದ ರೈತ ಕಂಗಾಲು
ಪ್ರತಿವರ್ಷ ಆ ಭಾಗದ ರೈತರು ಸೇವಂತಿ ಹೂವು ಬೆಳೆಸಿ ಕೈ ತುಂಬಾ ಹಣ ಗಳಿಸುತ್ತಿದ್ದರು. ಆದರೆ, ಈ ವರ್ಷದ ಚೆಂಡು, ಸೆವಂತಿ ಹೂವು ಬೆಳೆಸಿದ ರೈತರು ಕೈ ಸುಟ್ಟುಕೊಂಡಿದ್ದಾರೆ. ದಸರಾ, ದೀಪಾವಳಿ, ಸಮಯದಲ್ಲಿ ಸೆಂವತಿ, ಚೆಂಡು ಹೂವಿಗೆ ಬಾರೀ ಬೇಡಿಕೆಯಿತ್ತು. ಆದರೆ, ಈ ಸಲ ದರ ಕುಸಿತಗೊಂಡಿದ್ದು, ರೈತರನ್ನು ಆತಂಕಕ್ಕೆ ತಳ್ಳಿದೆ.
ಬೀದರ್, ಅ.29: ಗಡಿ ಜಿಲ್ಲೆ ಬೀದರ್(Bidar)ನಲ್ಲಿ ದಸರಾ ಹಾಗೂ ದೀಪಾವಳಿ ಸಮಯಕ್ಕೆ ಹೂವು ಮಾರುಕಟ್ಟೆಗೆ ಬರುವ ಉದ್ದೇಶದಿಂದ ಜಿಲ್ಲೆಯ ರೈತರು ಒಂದು ಗುಂಟೆಯಾದರೂ ಚೆಂಡು, ಸೇವಂತಿ, ಗುಲಾಬಿ ಹೀಗೆ ವಿವಿಧ ರೀತಿಯ ಹೂವುಗಳ (Flowers) ನ್ನು ಬೆಳೆಸುತ್ತಾರೆ. ಈ ವರ್ಷವೂ ಕೂಡ ಜಿಲ್ಲೆಯ ಸುಮಾರು 800 ಎಕರೆಯಷ್ಟು ಪ್ರದೇಶದಲ್ಲಿ ವಿವಿಧ ಹೂವುಗಳನ್ನ ರೈತರು ಬೆಳೆಸಿದ್ದಾರೆ. ಆದರೆ, ಈ ವರ್ಷ ಜಿಲ್ಲೆಯಲ್ಲಿ ಮಳೆಯ ಕೊರೆತೆಯಿಂದಾಗಿ ಹೂವು ಬೆಳೆಗಾರ ರೈತರ ನಷ್ಟಕ್ಕೆ ತುತ್ತಾಗಿದ್ದಾರೆ. ಮಳೆಯ ಕೊರೆತೆಯ ಪರಿಣಾಮದಿಂದಾಗಿ ಹೂವು ತನ್ನ ಗುಣಮಟ್ಟವನ್ನ ಕಳೆದುಕೊಂಡಿದ್ದು, ಮಾರುಕಟ್ಟೆಯಲ್ಲಿಯೂ ಕೂಡ ದರ ಕುಸಿತಕ್ಕೆ ಕಾರಣವಾಗಿದೆ. ಇನ್ನು ಕೆಲವು ರೈತರು ಉತ್ತಮವಾಗಿ ಹೂವು ಬೆಳೆಸಿದ್ದರೂ, ಅವರಿಗೂ ಕೂಡ ದರ ಕುಸಿತದಿಂದಾಗಿ ಕಟಾವು ಮಾಡಿ ಮಾರುಕಟ್ಟೆಗೆ ಸಾಗಸಿದ ಹಣವು ಬರದಂತಾ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಸಮಾಧಾನ ವ್ತಕ್ತ ಪಡಿಸುತ್ತಿದ್ದಾರೆ.
50 ರೂಪಾಯಿಗೆ ಕುಸಿತ ಕಂಡ ಸೇವಂತಿ
ಪ್ರತಿವರ್ಷ ದಸರಾ ದೀಪಾವಳಿ ಸಮಯದಲ್ಲಿ ಕೆಜಿಗೆ 200 ರಿಂದ 300 ರೂಪಾಯಿ ಮಾರಾಟವಾಗುತ್ತಿದ್ದ ಸೇವಂತಿ, ಈ ವರ್ಷ 50 ರೂಪಾಯಿಗೆ ಕುಸಿದಿದೆ. ದೀಪಾವಳಿ, ದಸರಾ ಸಮಯದಲ್ಲಿ ಜಿಲ್ಲೆಯ ಪ್ರತಿಯೊಬ್ಬ ರೈತರು ತಮ್ಮ ಹೊಲದಲ್ಲಿ ಒಂದು ಗುಂಟೆಯಷ್ಟಾದರೂ ಚೆಂಡು, ಸೇವಂತಿ, ಹೂವುಗಳನ್ನ ಬೆಳೆಸಿದ್ದು, ಇಡೀ ಹೊಲವೇ ಕಲರ್ಫುಲ್ ಆಗಿ ಕಾಣುತ್ತಿದೆ. ಸೆವಂತಿ, ಕಾಕಡಾ ಹಾಗೂ ಗುಲಾಬಿ ಹೂವುಗಳ ಪರಿಮಳದ ಕಂಪು ಎಲ್ಲೇಡೆಯೂ ಸೂಸುತ್ತಿವೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ನೀಡುವ ಪುಷ್ಪ ಬೆಳೆ ಎಂದೆ ಪರಿಗಣಿಸಲ್ಪಟ್ಟ ಚೆಂಡು ಹೂ, ಬರದ ಮಧ್ಯೆಯೂ ಸಮೃದ್ಧವಾಗಿ ಬೆಳೆದು ನಿಂತು ಈ ಬಾರಿಯ ದೀಪಾವಳಿಗೆ ಕಂಗೊಳಿಸುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಈ ವರ್ಷ ಚೆಂಡು ಹೂವಿಗೆ ಅಷ್ಟೊಂದು ಪ್ರಮಾಣದಲ್ಲಿ ದರವಿಲ್ಲ. ಹೀಗಾಗಿ ರೈತರು ನಷ್ಟವಾಗುತ್ತಿದೆಂದು ಹೇಳುತ್ತಿದ್ದಾರೆ.
ಮಳೆಯ ಕೊರೆತೆಯಿಂದಾಗಿ ಶೇಕಡಾ 40 ರಷ್ಟು ಹೂವು ಹಾಳಾಗಿದ್ದು, ಇನ್ನುಳಿದ ಹೂವಿಗೂ ಕೂಡ ಮಾರುಕಟ್ಟೆಯಲ್ಲಿ ದರವಿಲ್ಲ. ಹೀಗಾಗಿ ಕಟಾವು ಮಾಡಿ, ಬಾಡಿಗೆ ವಾಹನದಲ್ಲಿ ಹೂವು ತೆಗೆದುಕೊಂಡು ಹೋಗಿ ಮಾರಾಟ ಮಾಡಿದರೂ ನಮಗೆ ಲಾಭ ಬರುವುದಿಲ್ಲ ಎಂದು ರೈತರು ಹೇಳುತ್ತಿದ್ದಾರೆ. ಇನ್ನೂ ಜಿಲ್ಲೆಯ ಹೂವು ಬೆಳೆಗಾರ ರೈತರ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾತನಾಡಿ ‘ ಜಿಲ್ಲೆಯಲ್ಲಿ 8 ನೂರು ಎಕರೆಯಷ್ಟು ಪ್ರದೇಶದಲ್ಲಿ ಹೂವು ಬೆಳೆಸಿದ್ದಾರೆ. ಆದರೆ, ಈ ವರ್ಷ ಮಳೆಯ ಕೊರೆತಯಿಂದಾಗಿ ಸ್ವಲ್ಪ ಮಟ್ಟಿಗೆ ಹೂವು ಹಾಳಾಗಿದ್ದು, ಮಾರುಕಟ್ಟೆಯಲ್ಲಿಯೂ ದರ ಕುಸಿದಿದೆ. ರೈತರಿಗೆ ನಷ್ಟವಾಗುವ ಭೀತಿಯಿದೆ ಎಂದು ಹೇಳುತ್ತಿದ್ದಾರೆ. ಇನ್ನು ಅತಿ ಹೆಚ್ಚಾಗಿ ಭಾಲ್ಕಿ ತಾಲೂಕಿನ ಅಹಮಾದಾಬಾದ್, ಹಾಲಹಿಪ್ಪಾರ್ಗಾ ಗ್ರಾಮದ ಸುತ್ತಮುತ್ತಲೂ ಹೆಚ್ಚಿನ ಸಂಖ್ಯೆಯ ರೈತರು ಹೂವು ಬೆಳೆಸುತ್ತಾರೆ. ಆದರೆ, ನಮಗೆ ದರ ಸಿಗದೆ ಇದ್ದುದ್ದರಿಂದಾಗಿ ನಷ್ಟವಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ದೀಪಾವಳಿ ದಸರಾ ಸಮಯದಲ್ಲಿ ಜಿಲ್ಲೆಯ ಶೇಕಡಾ 40 ರಷ್ಟೂ ರೈತರು ಬಗೆ ಬಗೆಯ ಹೂಗಳನ್ನ ತಮ್ಮ ಹೊಲದಲ್ಲಿ ಬೆಳೆಯುತ್ತಾರೆ. ಅತೀವೃಷ್ಠಿ-ಅನಾವೃಷ್ಠಿಯಿಂದ ಬಿತ್ತಿದ ಬೆಳೆ ಕೈ ಕೊಟ್ಟರೂ, ಹೂವಿನ ಬೆಳೆ ಯಾವಾಗಲೂ ಕೈಕೊಟ್ಟಿಲ್ಲ. ಹೀಗಾಗಿ ಹಬ್ಬದ ಸಮಯದಲ್ಲಿ ಹೂವು ಬೆಳೆದು ಹಿಂಗಾರು-ಮುಂಗಾರು ಬೆಳೆ ಹಾನಿಯಾದರೂ ರೈತರು ಚಿಂತೆ ಮಾಡದೆ ಹೂವಿನಲ್ಲಿ ಅದರ ಲಾಭವನ್ನ ಮಾಡಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಮಳೆಯ ಕೊರೆತೆಯ ನಡುವೆಯೂ ಹೂವು ಬೆಳೆ ಚನ್ನಾಗಿದ್ದರೂ ದರ ಕುಸಿದಿದ್ದು, ರೈತರನ್ನ ಸಂಕಷ್ಟಕ್ಕೆ ತಳ್ಳಿದಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ