ಚಿತ್ರದುರ್ಗ: ಯುವಕನಿಗೆ ಬಲವಂತವಾಗಿ ಮರ್ಮಾಂಗ ಶಸ್ತ್ರಚಿಕಿತ್ಸೆ ಮಾಡಿಸಿದ ಮಂಗಳಮುಖಿಯರು

ಚಿತ್ರದುರ್ಗದಲ್ಲಿ 22 ವರ್ಷದ ಯುವಕನೊಬ್ಬನನ್ನು ಅಪಹರಿಸಿ, ಹಲ್ಲೆ ನಡೆಸಿ, ಬಲವಂತವಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದಾವಣಗೆರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ, ನಂತರ ಯುವಕನನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಲಾಗಿದೆ. ಪೋಷಕರ ದೂರಿನ ಮೇರೆಗೆ ಪೊಲೀಸರು ಇಬ್ಬರು ಟ್ರಾನ್ಸ್‌ಜೆಂಡರ್‌ಗಳಾದ ಅನುಷ್ಕಾ, ನಳಿನಾ ಅವರನ್ನು ಬಂಧಿಸಿದ್ದಾರೆ. ಈ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ಚಿತ್ರದುರ್ಗ: ಯುವಕನಿಗೆ ಬಲವಂತವಾಗಿ ಮರ್ಮಾಂಗ ಶಸ್ತ್ರಚಿಕಿತ್ಸೆ ಮಾಡಿಸಿದ ಮಂಗಳಮುಖಿಯರು
ಅನುಷ್ಕಾ, ನಳಿನಾ
Image Credit source: Tv9 kannada
Edited By:

Updated on: Oct 15, 2026 | 12:51 PM

ಚಿತ್ರದುರ್ಗ, ಅ.15: ಚಿತ್ರದುರ್ಗದಲ್ಲಿ 22 ವರ್ಷದ ಯುವಕನೊಬ್ಬನನ್ನು ಅಪಹರಿಸಿ, ಬಂದಿಸಿ ಹಲ್ಲೆ ನಡೆಸಿ, ಬಲವಂತವಾಗಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ (Gender Reassignment Surgery) ಒಳಪಡಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರು ಟ್ರಾನ್ಸ್‌ಜೆಂಡರ್‌ಗಳ ವಿರುದ್ಧ ಪರಶುರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಸಂತ್ರಸ್ತ ಯುವಕ ಕಳೆದ ನಾಲ್ಕು ವರ್ಷಗಳಿಂದ ಚಿತ್ರದುರ್ಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಸಣ್ಣದಾಗಿ ಹೂವಿನ ವ್ಯಾಪಾರ ಮಾಡುತ್ತಿದ್ದನು. ದೇವಸ್ಥಾನಗಳಿಗೆ ಹೂವು ಪೂರೈಸುವ ವೇಳೆ ಆತನಿಗೆ ಟ್ರಾನ್ಸ್‌ಜೆಂಡರ್ ವ್ಯಕ್ತಿಯೊಬ್ಬರ ಪರಿಚಯವಾಗಿತ್ತು.

ಆ ಟ್ರಾನ್ಸ್‌ಜೆಂಡರ್ ಮತ್ತು ಮತ್ತೊಬ್ಬ ವ್ಯಕ್ತಿ ಸೇರಿ ಯುವಕನಿಗೆ ವಿರೋಧವಿದ್ದರೂ ಬಲವಂತವಾಗಿ ಮಹಿಳೆಯರ ಬಟ್ಟೆ ಧರಿಸಿ ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದರು. ಸೆಪ್ಟೆಂಬರ್ 1 ರಂದು ಆತನ ಮುಖಕ್ಕೆ ಬಟ್ಟೆ ಕಟ್ಟಿ, ವಾಹನದಲ್ಲಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಯಾವುದೇ ಒಪ್ಪಿಗೆಯಿಲ್ಲದೆ ಜನನಾಂಗದ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.

ಶಸ್ತ್ರಚಿಕಿತ್ಸೆಯ ಬಳಿಕ ಚಿತ್ರದುರ್ಗದ ಸ್ಟೇಡಿಯಂ ರಸ್ತೆ ಬಳಿಯ ಬುದ್ರಾನಗರದ ಕೊಠಡಿಯೊಂದರಲ್ಲಿ ಆತನನ್ನು ಕೂಡಿಹಾಕಿ ಹೊರಗೆ ಲಾಕ್ ಮಾಡಿದ್ದರು. ಸೆಪ್ಟೆಂಬರ್ 11 ರಂದು ಧಾರ್ಮಿಕ ವಿಧಿವಿಧಾನದ ವೇಳೆ ಆರೋಪಿಗಳಲ್ಲಿ ಒಬ್ಬರು ಶಸ್ತ್ರಚಿಕಿತ್ಸೆಯ ಗಾಯದ ಬಳಿ ಇದ್ದಿಲು ಕಾವನ್ನು ಇಟ್ಟಿದ್ದರಿಂದ ಯುವಕನ ಎರಡೂ ತೊಡೆಗಳಿಗೆ ಸುಟ್ಟ ಗಾಯಗಳಾಗಿವೆ. ನೋವಿನಿಂದ ಆತ ಜೋರಾಗಿ ಕೂಗಾಡಿದಾಗ ಕೂಡ ಹಲ್ಲೆ ನಡೆಸಲಾಗಿದೆ.

ಸೆಪ್ಟೆಂಬರ್ 29 ರಂದು ಆರೋಪಿಗಳು ಯುವಕನನ್ನು ಬಿಡುಗಡೆ ಮಾಡಿ, ಚಿತ್ರದುರ್ಗ ನಗರದ ಚಳ್ಳಕೆರೆ ವೃತ್ತದಲ್ಲಿ ಭಿಕ್ಷೆ ಬೇಡುವಂತೆ ಸೂಚಿಸಿದ್ದರು. ಬಳಿಕ ಯುವಕ ತನ್ನ ಕುಟುಂಬಕ್ಕೆ ಕರೆ ಮಾಡಿ ತನಗೆ ನಡೆಯಲು ಆಗುತ್ತಿಲ್ಲವೆಂದೂ, ರಕ್ತಸ್ರಾವ ಹಾಗೂ ಸುಸ್ತು ಆಗುತ್ತಿರುವುದಾಗಿ ತಿಳಿಸಿದ್ದಾನೆ. ಪೋಷಕರು ಆತನನ್ನು ಜಜ್ಜೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ನಂತರ ಪರಶುರಾಂಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇದನ್ನೂ ಓದಿ : ರಾಬಕೊವಿ ಹಾಲು ಒಕ್ಕೂಟದಲ್ಲಿ ₹16.5 ಕೋಟಿ ಅವ್ಯವಹಾರ ಆರೋಪ: ಎಂಡಿ ಸೇರಿ ಆರು ಜನರ ವಿರುದ್ಧ ಎಫ್​ಐಆರ್

ಅಕ್ಟೋಬರ್ 9 ರಂದು ಯುವಕನ ತಂದೆ ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಕಾನೂನುಬಾಹಿರ ಗುಂಪು ಸೇರುವುದು, ಹಲ್ಲೆ, ಅಕ್ರಮ ಬಂಧನ, ಅಪಹರಣ, ಕ್ರಮಿನಲ್ ಸಂಚು ಮತ್ತು ಮಾನವ ಕಳ್ಳಸಾಗಣೆ ಸೇರಿದಂತೆ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಚಿತ್ರದುರ್ಗ ನಗರ ಠಾಣೆ ಪೊಲೀಸರು, ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಾದ ಅನುಷ್ಕಾ, ನಳಿನಾ ಇದೀಗ ಪೋಲಿಸರು ವಶಪಡೆದಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Thu, 15 October 26

ಬಸವರಾಜ ಮುದನೂರ್

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Loading...
Unable to load recommendations.
Follow Us