ಚಿತ್ರದುರ್ಗ: ಚಿತ್ರದುರ್ಗದ ಮುರುಘಾಮಠಕ್ಕೆ (Muruga Mutt) ಆಡಳಿತಾಧಿಕಾರಿ ನೇಮಿಸಲು ಮನವಿ ಮಾಡಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆಯಿಂದ ಜಿಲ್ಲಾಧಿಕಾರಿಗೆ ವರದಿ ಕೇಳಿದ್ದೇವೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಚಿತ್ರದುರ್ಗದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಹೇಳಿದ್ದಾರೆ. ಇಂದು (ನ. 8) ಚಿತ್ರದುರ್ಗದ (chitradurga) ಸಾಣೇಹಳ್ಳಿ ಬಳಿಯ ಹೆಲಿಪ್ಯಾಡ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಮುರುಘಾಶ್ರೀಗಳಿಂದ ಅಕ್ಷಮ್ಯ ಅಪರಾಧ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಪ್ರಕರಣ ನ್ಯಾಯಾಲಯದಲ್ಲಿದೆ ಈಗ ಏನೂ ಹೇಳಲಾಗದು ಎಂದು ಜಾರಿಕೊಂಡರು.
ಶತಮಾನಗಳ ನಂಬಿಕೆಗೆ ಕೊಡಲಿ ಪೆಟ್ಟು ಕೊಡುವ ಕೆಲಸ ನಡೆದಿದೆ
ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಕುರಿತು ಮಾತನಾಡಿದ ಸಿಎಂ ಬೊಮ್ಮಾಯಿ ಶತಮಾನಗಳ ನಂಬಿಕೆಗೆ ಕೊಡಲಿ ಪೆಟ್ಟು ಕೊಡುವ ಕೆಲಸ ನಡೆದಿದೆ. ನಂಬಿಕೆ, ವಿಶ್ವಾಸದ ಮೇಲೆ ಧರ್ಮ ನಡೆಯುತ್ತಿದೆ. ಸತೀಶರ ಶಾಲಾ ದಾಖಲಾತಿಯಲ್ಲಿ ಹಿಂದೂ ಎಂದು ಇದೆ ಅಲ್ಲವೇ ? ತಾಂತ್ರಿಕವಾದ ಸರ್ಟಿಫಿಕೇಟ್, ನಂಬಿಕೆ ಶತಮಾನದಿಂದ ಇದೆ. ಜನರ ನಂಬಿಕೆಗೆ ಘಾಸಿ ಮಾಡಿದ ಬಳಿಕ ಚರ್ಚೆ ಏನು ಮಾಡುವುದು. ಚರ್ಚೆಯೂ ಬೇಕಿಲ್ಲ, ಕ್ಷಮೆಯೂ ಬೇಕಿಲ್ಲ, ಜನ ತೀರ್ಮಾನಿಸುತ್ತಾರೆ ಎಂದು ಕಿಡಿಕಾರಿದರು.
ಆಹ್ವಾನ ನೀಡುತ್ತೇವೆ ಸಿದ್ಧರಾಮಯ್ಯ ಬಂದು ಜನಸಂಕಲ್ಪ ಯಾತ್ರೆ ನೋಡಲಿ
ಬಿಜೆಪಿ ಜನ ಸಂಕಲ್ಪ ಯಾತ್ರೆಗೆ ಜನರ ಕೊರತೆ ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದ ಕುರಿತು ಪ್ರತಿಕ್ರಿಯಿಸಿ ಸಿದ್ಧರಾಮಯ್ಯ ಅವರಿಗೆ ಬಂದು ಜನಸಂಕಲ್ಪ ಯಾತ್ರೆ ನೋಡಲು ಹೇಳಿ. ಆಹ್ವಾನ ನೀಡುತ್ತೇವೆ ಸಿದ್ಧರಾಮಯ್ಯ ಬಂದು ನೋಡಲಿ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸಿಎಂ ಬೊಮ್ಮಾಯಿ ಭೇಟಿ
ಇದೇ ವೇಳೆ ಸಾಣೇಹಳ್ಳಿ ಬಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮೈದಾನಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಿದರು. ಈ ವೇಳೆ ಮಕ್ಕಳಿಗೆ ಚಾಕೋಲೇಟ್ ನೀಡಿದರು. ವಿದ್ಯಭ್ಯಾಸ ಮಾಡಿ ಏನಾಗಬೇಕೆಂದಿದ್ದೀರಿ ಎಂದು ಮಕ್ಕಳಿಗೆ ಸಿಎಂ ಪ್ರಶ್ನೆ ಮಾಡಿದರು. ಆಗ ವಿದ್ಯಾರ್ಥಿಗಳು ಡಾಕ್ಟರ್, ಸೈಂಟಿಸ್ಟ್, ಎಸ್ಪಿ, ಡಿಸಿ ಆಗುವ ಗುರಿಯಿದೆ ಎಂದು ಹೇಳಿದರು. ಆಗ ಸಿಎಂ ಬೊಮ್ಮಾಯಿ ಉತ್ತಮ ವಿದ್ಯಭ್ಯಾಸ ಮಾಡಿ ಶಾಲೆ ಮತ್ತು ಪೋಷಕರಿಗೆ ಗೌರವ ತರಬೇಕೆಂದು ಕಿವಿ ಮಾತು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ