ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ: ಚಿತ್ರದುರ್ಗ ಕೋರ್ಟ್ ಆದೇಶ
ಮುರುಘಾ ಶರಣರೊಂದಿಗೆ ಮತ್ತೋರ್ವ ಆರೋಪಿ (ಎ2) ಲೇಡಿ ವಾರ್ಡನ್ ನ್ಯಾಯಾಂಗ ಬಂಧನವನ್ನೂ ಕೋರ್ಟ್ ವಿಸ್ತರಿಸಿದೆ.
ಚಿತ್ರದುರ್ಗ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಬಂಧನದಲ್ಲಿರುವ ಶಿವಮೂರ್ತಿ ಮುರುಘಾ ಶರಣರ ನ್ಯಾಯಾಂಗ ಬಂಧನದ ಅವಧಿಯನ್ನು 14 ದಿನಗಳ ಅವಧಿಗೆ ವಿಸ್ತರಿಸಿ ಚತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ನ್ಯಾಯಾಂಗ ಬಂಧನದ ಅವಧಿಯನ್ನು ನ 3ರವರೆಗೆ ವಿಸ್ತರಿಸಲಾಗಿದೆ. ಮುರುಘಾ ಶರಣರೊಂದಿಗೆ ಮತ್ತೋರ್ವ ಆರೋಪಿ (ಎ2) ಲೇಡಿ ವಾರ್ಡನ್ ನ್ಯಾಯಾಂಗ ಬಂಧನವನ್ನೂ ಕೋರ್ಟ್ ವಿಸ್ತರಿಸಿದೆ. ವಿಚಾರಣೆ ವೇಳೆ ಶಿವಮೂರ್ತಿ ಶರಣರು ಇಂದು ಮಾಸ್ಕ್ ಇಲ್ಲದೆ ಕೋರ್ಟ್ಗೆ ಹಾಜರಾಗಿದ್ದರು.
ಮೈಸೂರಿನಲ್ಲೇ ಸಂತ್ರಸ್ತ ಬಾಲಕಿ, ತಾಯಿಯ ಹೇಳಿಕೆ ದಾಖಲು
ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಬಾಲಕಿ ಮತ್ತು ಆಕೆಯ ತಾಯಿಯ ಹೇಳಿಕೆಯನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಸಿಆರ್ಪಿಸಿ 161ರ ಅಡಿಯಲ್ಲಿ ನಗರದ ಒಡನಾಡಿ ಸಂಸ್ಥೆಯಲ್ಲಿಯೇ ಅ 17ರ ಸಂಜೆ ದಾಖಲಿಸಿಕೊಂಡರು. ಕೊವಿಡ್ ಪಿಡುಗು ವ್ಯಾಪಿಸಿಕೊಂಡಿದ್ದ ಸಂದರ್ಭದಲ್ಲಿ ಮುರುಘಾ ಶರಣರು ಲೇಡಿ ವಾರ್ಡನ್ ಮೂಲಕ ತಮ್ಮ ಕೋಣೆಗೆ ಕರೆಸಿಕೊಳ್ಳುತ್ತಿದ್ದರು. ಅವರಿಂದ ವರ್ಷಗಟ್ಟಲೆ ಲೈಂಗಿಕ ದೌರ್ಜನ್ಯವಾಗಿದೆ ಎಂದು ಬಾಲಕಿ ಮತ್ತು ಆಕೆಯ ತಾಯಿ ಹೇಳಿಕೆ ದಾಖಲಿಸಿದರು. ಇಬ್ಬರೂ ನೀಡಿರುವ ಹೇಳಿಕೆಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿವೆ ಎಂದು ಪೊಲೀಸ್ ಮೂಲಗಳು ಟಿವಿ9ಗೆ ಮಾಹಿತಿ ನೀಡಿವೆ.
ಚಿತ್ರದುರ್ಗದಿಂದ ಬಂದಿದ್ದ ಮೂವರು ಪೊಲೀಸ್ ಅಧಿಕಾರಿಗಳು ಸಂತ್ರಸ್ತ ಬಾಲಕಿಯರು ಮತ್ತು ಪೋಷಕರಿಂದ ಸೆಕ್ಷನ್ 161ರ ಅಡಿಯಲ್ಲಿ ಹೇಳಿಕೆ ಪಡೆದರು. ಬಾಲಕಿಯ ಆರೋಗ್ಯ ಸಮಸ್ಯೆ, ಭದ್ರತಾ ದೃಷ್ಟಿಯಿಂದ ವಿಚಾರಣೆ ನಡೆಯುತ್ತಿದೆ. 2-3 ದಿನಗಳ ನಂತರ ವೈದ್ಯಕೀಯ ಪರೀಕ್ಷೆ ನಡೆಸುವ ಸಾಧ್ಯತೆಯಿದೆ ಎಂದು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹೇಳಿದರು. ಮಕ್ಕಳ ಹೇಳಿಕೆ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಮೈಸೂರಿನ ಒಡನಾಡಿ ಸಂಸ್ಥೆಯಿಂದ ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಮಕ್ಕಳು ಪೋಷಕರೊಂದಿಗೆ ಮೈಸೂರಿನಲ್ಲಿ ಇದ್ದಾರೆ.
ಪ್ರಭಾರ ಪೀಠಾಧ್ಯಕ್ಷರಾಗಿ ಬಸವಪ್ರಭುಶ್ರೀ ನೇಮಕ
ಚಿತ್ರದುರ್ಗದ ಮುರುಘಾ ಮಠಕ್ಕೆ ಪ್ರಭಾರ ಪೀಠಾಧ್ಯಕ್ಷರ ನೇಮಕವಾಗಿದೆ. ಹಲವರ ವಿರೋಧದ ನಡುವೆಯೂ ಕಾನೂನು ಪ್ರಕ್ರಿಯೆ ಮೂಲಕ ಅಧಿಕೃತವಾಗಿ ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ ಹೈಕೋರ್ಟ್ ಅನುಮತಿ ಪಡೆದು ಬಸವಪ್ರಭುಶ್ರೀ ನೇಮಕ ಕುರಿತು ಮುರುಘಾಮಠ ನಿನ್ನೆ (ಅಕ್ಟೋಬರ್ 16) ಅಧಿಕೃತ ಪ್ರಕಟಣೆ ಹೊರಡಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಧಾರ್ಮಿಕ, ಸೇವಾ, ಪೂಜಾ ಕಾರ್ಯಗಳು ಮಠದ ಪರಂಪರೆ ಮುಂದುವರೆಸಿಕೊಂಡು ಹೋಗಲು ಪ್ರಕಟಣೆಯಲ್ಲಿ ತಿಳಿಸಿದೆ.