ಹಣ ದ್ವಿಗುಣ ಆಮಿಷವೊಡ್ಡಿ ವಂಚನೆ: ಜೆಡಿಎಸ್ ನಗರಸಭೆ ಸದಸ್ಯ ಸೇರಿ 9 ಜನ ಅರೆಸ್ಟ್, ವಂಚನೆ ಪ್ರಕರಣದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಶಾಮೀಲು

ಹಣ ದ್ವಿಗುಣ ಆಮಿಷವೊಡ್ಡಿ ವಂಚನೆ: ಜೆಡಿಎಸ್ ನಗರಸಭೆ ಸದಸ್ಯ ಸೇರಿ 9 ಜನ ಅರೆಸ್ಟ್, ವಂಚನೆ ಪ್ರಕರಣದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಶಾಮೀಲು
ಪೊಲೀಸ್ ಕಾನ್ಸ್ ಟೇಬಲ್ ಇಮಾಮ್‌ ಹುಸೇನ್ ಮತ್ತು ಬಂಧಿತ ಆರೋಪಿಗಳು

ಡಿಸೆಂಬರ್ 6 ರಂದು ದೊಡ್ಡಬಳ್ಳಾಪುರದ ನಾಗರಾಜ ಎಂಬುವರು ನಗರಸಭೆ ಸದಸ್ಯ ಚಂದ್ರಶೇಖರ್ ಹಾಗೂ ಇತರರ ವಿರುದ್ಧ ಚಿತ್ರದುರ್ಗದ ಬಡಾವಣೆ ಠಾಣೆಗೆ ದೂರು ನೀಡಿದ್ದರು. 6ಲಕ್ಷ ರೂಪಾಯಿ ಹಣ ದ್ವಿಗುಣಗೊಳಿಸಿ 18ಲಕ್ಷ ರೂಪಾಯಿ ನೀಡುವುದಾಗಿ ನಂಬಿಸಿ ವಂಚಿಸಿದ್ದಾರೆ.

TV9kannada Web Team

| Edited By: Ayesha Banu

Dec 23, 2021 | 11:49 AM

ಚಿತ್ರದುರ್ಗ: ಹಣ ದ್ವಿಗುಣ ಆಮಿಷವೊಡ್ಡಿ ವಂಚಿಸಿದ ಪ್ರಕರಣದಲ್ಲಿ ಪೊಲೀಸರು ಜೆಡಿಎಸ್ ನಗರಸಭೆ ಸದಸ್ಯ ಚಂದ್ರಶೇಖರ್ ಸೇರಿ ಒಂಭತ್ತು ಜನರನ್ನು ಬಂಧಿಸಿದ್ದಾರೆ. ಪೊಲೀಸ್ ತನಿಖೆಯಲ್ಲಿ ವಂಚನೆ ಜಾಲದಲ್ಲಿ ಶ್ರೀರಾಂಪುರ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಇಮಾಮ್‌ ಹುಸೇನ್ ಶಾಮೀಲಾಗಿರುವುದು ಬಯಲಾಗಿದೆ. ಸದ್ಯ ಪೊಲೀಸ್ ಕಾನ್ಸ್ ಟೇಬಲ್ ಇಮಾಮ್ ಹುಸೇನ್ ನಾಪತ್ತೆ ಆಗಿದ್ದು ಕಾನೂನು ಕ್ರಮಕ್ಕೆ ಪೊಲೀಸ್ ಅಧಿಕಾರಿಗಳು ಸಜ್ಜಾಗಿದ್ದಾರೆ.

ಪ್ರಕರಣದ ಹಿನ್ನೆಲೆ: ಡಿಸೆಂಬರ್ 6 ರಂದು ದೊಡ್ಡಬಳ್ಳಾಪುರದ ನಾಗರಾಜ ಎಂಬುವರು ನಗರಸಭೆ ಸದಸ್ಯ ಚಂದ್ರಶೇಖರ್ ಹಾಗೂ ಇತರರ ವಿರುದ್ಧ ಚಿತ್ರದುರ್ಗದ ಬಡಾವಣೆ ಠಾಣೆಗೆ ದೂರು ನೀಡಿದ್ದರು. 6ಲಕ್ಷ ರೂಪಾಯಿ ಹಣ ದ್ವಿಗುಣಗೊಳಿಸಿ 18ಲಕ್ಷ ರೂಪಾಯಿ ನೀಡುವುದಾಗಿ ನಂಬಿಸಿ ವಂಚಿಸಿದ್ದಾರೆ. ನಗರದ ಕೆಇಬಿ ಸ್ಟೇಷನ್ ಬಳಿ ಕರೆಸಿಕೊಂಡು 6ಲಕ್ಷ ನಗದು ಪಡೆದು ಬ್ಯಾಗೊಂದನ್ನು ನೀಡಿ 18ಲಕ್ಷ ಇರುವುದಾಗಿ ಹೇಳಿದ್ದರು. ಆದರೆ, ಬ್ಯಾಗಿನಲ್ಲಿ ಕೇವಲ‌ ಬ್ಲಾಕ್ ಪೇಪರ್ ಗಳಿದ್ದವು. ಹೀಗಾಗಿ, ನಂಬಿಸಿ ವಂಚಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಿದ್ದರು.

ವಂಚಕ ಫ್ಯಾಮಿಲಿ: ಪ್ರಕರಣ ದಾಖಲಿಸಿಕೊಂಡು ಪ್ರಕರಣದ ಬೆನ್ನು ಬಿದ್ದ ಪೊಲೀಸರಿಗೆ ಇಡೀ ಕುಟುಂಬ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದು ತಿಳಿದು ಬಂದಿದೆ. ಸುಮಾರು‌ 25 ವಂಚನೆ ಪ್ರಕರಣಗಳಲ್ಲಿ ಭಾಗಿ ಆಗಿರುವ ನಗರಸಭೆ ಸದಸ್ಯ ಚಂದ್ರಶೇಖರ್ ತನ್ನ ಇಬ್ಬರು ಪತ್ನಿಯರು ಹಾಗೂ ಸಂಬಂಧಿಕರನ್ನೂ ವಂಚನೆಗೆ ಬಳಸಿಕೊಂಡಿದ್ದು ಬಯಲಾಗಿದೆ.

ನಗರಸಭೆ ಸದಸ್ಯ ಚಂದ್ರಶೇಖರ್, ಪತ್ನಿಯರಾದ ತೇಜಸ್ವಿನಿ, ದೇವಕಿ ಹಾಗೂ ಸಂಬಂಧಿ ಎಸ್.ಕೆ. ರಾಜೇಶ ಹಾಗೂ ಚಿಕ್ಕಮಂಗಳೂರು ಮೂಲದ ಕೆ.ಟಿ.ಮೂರ್ತಿ, ಕೆ.ಟಿ.ನವೀನ್, ಪ್ರದೀಪ್, ಬೆಂಗಳೂರು ಮೂಲದ ವರುಣ್ ಕಾರ್ತಿಕ್, ಬಾಬು ಬಂಧಿತರು. ಬಂಧಿತರಿಂದ 2ಲಕ್ಷ 5ಸಾವಿರದ 600 ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ಕಾರು ಮತ್ತು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಂಚನೆಯಲ್ಲಿ ಪೊಲೀಸ್ ಪಾಲು: ವಂಚನೆ ಪ್ರಕರಣದಲ್ಲಿ ಹೊಸದುರ್ಗ ತಾಲೂಕಿನ ಶ್ರೀರಾಂಪುರ‌ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಇಮಾಮ್ ಹುಸೇನ್ ಶಾಮೀಲಾಗಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಇಮಾಮ್ ನಾಪತ್ತೆ ಆಗಿದ್ದಾರೆ. ಎರಡು ವರ್ಷದ ಹಿಂದೆ ಚಿತ್ರದುರ್ಗ ನಗರ ಠಾಣೆಯಲ್ಲಿ ಕಾರ್ಯ ನಿರ್ವಹಿಸುವ ವೇಳೆ ಅಕ್ರಮ ಅದಿರು ಸಾಗಣೆ ಪ್ರಕರದಲ್ಲಿ ಇಮಾಮ್ ಹುಸೇನ್ ಭಾಗಿ ಆಗಿದ್ದರು. ಪರಿಣಾಮ ಅಮಾನತ್ತುಗೊಂಡಿದ್ದರು, ನ್ಯಾಯಾಲಯದಲ್ಲಿ ಜಾಮೀನು ಪಡೆದಿದ್ದರು.

ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಒಂಭತ್ತು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್ ಕಾನ್ಸ್ ಟೇಬಲ್ ಇಮಾಮ್‌ಹುಸೇನ್ ಈ ಪ್ರಕರಣದಲ್ಲಿ ಶಾಮೀಲಾಗಿರುವ ಬಗ್ಗೆ ಮಾಹಿತಿಯಿದ್ದು ಕಾನೂನು ಕ್ರಮ ಜರುಗಿಸಲಾಗುವುದು. ಇತರೆ ಯಾರಿಗೆ ಈ ರೀತಿಯ ವಂಚನೆ ಆಗಿದ್ದರೆ ಠಾಣೆಗೆ ದೂರು ದಾಖಲಿಸಿ. ಪೊಲೀಸ್ ಇಲಾಖೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಎಸ್ಪಿ ಜಿ.ರಾಧಿಕಾ ಹೇಳಿದ್ದಾರೆ.

ವರದಿ- ಬಸವರಾಜ ಮುದನೂರ್, ಚಿತ್ರದುರ್ಗ

ಇದನ್ನೂ ಓದಿ: ಪುತ್ರ ಆರ್ಯನ್​ ವಿವಾದದ ಬಳಿಕ ಮೊದಲ ಬಾರಿಗೆ ಕೆಲಸಕ್ಕೆ ಮರಳಿದ ಶಾರುಖ್​: ಫೋಟೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada