ಚಿತ್ರದುರ್ಗ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಹೋರಾಟ ವಿಚಾರವಾಗಿ ಚಿತ್ರದುರ್ಗದಲ್ಲಿ ಪಿಡಬ್ಲ್ಯುಡಿ ಸಚಿವ ಸಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ. ಇದು ಸೌಹಾರ್ದಯುತವಾಗಿ ಬಗೆಹರಿಯುವ ವಿಶ್ವಾಸವಿದೆ. ಸಮಾಜ ಮತ್ತು ಸರ್ಕಾರ ನನಗೆ ಎರಡು ಕಣ್ಣುಗಳಿದ್ದಂತೆ. ಯಾವ ಕಣ್ಣು ಬೇಕು ಅಂದರೆ ನಾನು ಏನು ಹೇಳಲಾಗದು ಎಂದು ಸಚಿವ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ. ಸರ್ಕಾರವನ್ನು ಹಾಗೂ ಪಂಚಮಸಾಲಿ ಸಮುದಾಯವನ್ನು ಎರಡು ಕಣ್ಣುಗಳು ಎಂದು ಉತ್ತರಿಸಿದ್ದಾರೆ.
ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಅವರು ಹೇಳಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೋರಾಟ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಜಯ ಮೃತ್ಯುಂಜಯ ಶ್ರೀ ಭೇಟಿ, ಮಾತುಕತೆ ಮೂಲಕ ವಿವಾದ ಸೌಹಾರ್ದಯುತವಾಗಿ ಬಗೆಹರಿಯುವ ವಿಶ್ವಾಸವಿದೆ. ಸಮುದಾಯ ಮತ್ತು ಸರ್ಕಾರ ನನಗೆ ಎರಡು ಕಣ್ಣುಗಳಿದ್ದಂತೆ. ಯಾವ ಕಣ್ಣು ಬೇಕು ಎಂದರೆ ಏನು ಹೇಳಲಾಗದು ಎಂದು ಹೇಳಿದ್ದಾರೆ.
ಗಣೇಶೋತ್ಸವಕ್ಕೆ ನಿರ್ಬಂಧ ನಿರ್ಧಾರ ವಿಚಾರ ಧರ್ಮಸಂಕಟ ಆಗಿದೆ. ನಾಡಿನ ಜನ ಪರಂಪರೆಯನ್ನೂ ನೋಡಿಕೊಳ್ಳಬೇಕು. ಜನಜೀವನ ಮತ್ತು ಆರೋಗ್ಯವೂ ಕಾಪಾಡಬೇಕಿದೆ. ಸಂಸ್ಕೃತಿ, ಹಬ್ಬ ಹರಿದಿನ ಆಚರಿಸಲು ಜನ ಉತ್ಸಾಹದಲ್ಲಿ ಇರ್ತಾರೆ. ಉತ್ಸಾಹದಿಂದ ಜೀವಕ್ಕೆ ಅಪಾಯ ತಂದುಕೊಳ್ಳಬಾರದು. ಕೊವಿಡ್ 2ನೇ ಅಲೆಯಲ್ಲಿ ಅನೇಕರನ್ನು ಕಳೆದುಕೊಂಡಿದ್ದೇವೆ. 3ನೇ ಅಲೆ ಬಂದರೆ ಅದರ ಪರಿಣಾಮ ಊಹಿಸಲಾಗದು ಎಂದು ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಹೋರಾಟದ ನೇತೃತ್ವ ವಹಿಸಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಿಎಂ ಭೇಟಿ ಮಾಡಿದ್ದಾರೆ. 2ಎ ಮೀಸಲಾತಿ ವಿಚಾರವಾಗಿ ಸಿಎಂ, ಸ್ವಾಮೀಜಿ ಚರ್ಚೆ ನಡೆಸಿದ್ದಾರೆ. ಹೋರಾಟ ಯಶಸ್ವಿಯಾಗಬೇಕು ಎಂಬ ಭಾವನೆ ನನ್ನಲ್ಲೂ ಇದೆ. ಸರ್ಕಾರ, ಸಮಾಜದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತೇನೆ ಎಂದು ಶಿವಮೊಗ್ಗದಲ್ಲಿ ಮಾತನಾಡಿದ ಸಿ.ಸಿ. ಪಾಟೀಲ್ ತಿಳಿಸಿದ್ದಾರೆ.
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದಾರೆ. ಕೆಲವರು ದೊಡ್ಡ ಸಮಾಜದ ನಾಯಕರಾಗಬೇಕೆಂಬ ಆಸೆ ಇರುತ್ತೆ. ಅದಕ್ಕಾಗಿ ಮಾಜಿ ಸಚಿವ ಎಂ.ಬಿ. ಪಾಟೀಲ್ ಕನಸು ಕಾಣುತ್ತಿದ್ದಾರೆ. ಈ ಹಿಂದೆ ಹೀಗೆ ಮಾಡಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಧರ್ಮ, ಜಾತಿ ವಿಚಾರ ಬಹಳ ಸೂಕ್ಷ್ಮವಾದದ್ದು. ಪ್ರತಿಯೊಬ್ಬರಿಗೂ ಆಯಾ ಧರ್ಮ, ಜಾತಿ ಬಗ್ಗೆ ಅಭಿಮಾನವಿರುತ್ತೆ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆಯೊಂದಿಗೆ ರಾಜಕಾರಣ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.
ಮೀಸಲಾತಿ ಪರಾಮರ್ಶನೆಗೆ ಉನ್ನತ ಮಟ್ಟದ ಸಮಿತಿ ರಚನೆ ಕರ್ನಾಟಕದಲ್ಲಿ ಪಂಚಮಸಾಲಿ ಮತ್ತು ಕುರುಬ ಸಮುದಾಯಗಳಿಗೆ ಮೀಸಲಾತಿ ಒದಗಿಸುವ ಕೂಗು ಬಲ ಪಡೆದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಿವಿಧ ಸಮುದಾಯಗಳಿಗೆ ಮೀಸಲಾತಿಯನ್ನು ಪರಾಮರ್ಶಿಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಸದ್ಯ 3ಬಿ ಮೀಸಲಾತಿಗೆ ಒಳಪಟ್ಟಿರುವ ಪಂಚಮಸಾಲಿ ಸಮುದಾಯವನ್ನು 2ಎ ಅಡಿ ತರಬಹುದೇ ಎಂಬುದರ ಈ ಸಮಿತಿ ಪರಾಮರ್ಶಿಸಲಿದೆ. ನ್ಯಾ. ಎಚ್ಎ.ನ್.ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಜಾರಿಗೆ ತರಲು ಅಗತ್ಯ ಸಲಹೆ ಸೂಚನೆಗಳನ್ನು ಸಹ ಈ ಸಮಿತಿ ನೀಡಲಿದೆ. ಸಮಿತಿಯ ನೇತೃತ್ವವನ್ನು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಸುಭಾಷ್ ಅಡಿ ಅವರಿಗೆ ವಹಿಸಲಾಗಿದೆ.
ಇದನ್ನೂ ಓದಿ: ಪಂಚಮಸಾಲಿ ಸಮಾಜದ 3ನೇ ಪೀಠದ ಕುರಿತು ಸ್ಫೋಟಕ ಹೇಳಿಕೆ ನೀಡಿದ ಮನಗೂಳಿ ಹಿರೇಮಠದ ಸಂಗನ ಬಸವ ಸ್ವಾಮೀಜಿ
ಇದನ್ನೂ ಓದಿ: ಪಂಚಮಸಾಲಿ, ಕುರುಬ, ಒಕ್ಕಲಿಗ ಸಮುದಾಯಗಳಿಗೆ ಮೀಸಲಾತಿ ಪರಾಮರ್ಶನೆಗೆ ಉನ್ನತ ಮಟ್ಟದ ಸಮಿತಿ ರಚನೆ