ಮೀಸಲಾತಿಗೆ ಮಸಿ ಬಳಿಯುವ ಪ್ರಯತ್ನ ಸರಿಯಲ್ಲ: ವಿಚಾರ ಸಂಕಿರಣದಲ್ಲಿ ನಾಗಮೋಹನ್ ದಾಸ್ ಅಭಿಪ್ರಾಯ

Reservation: ಮೀಸಲಾತಿಯಿಂದ ರೈತರ ಸಮಸ್ಯೆ ಬಗೆಹರಿಯಲ್ಲ. ಸರ್ಕಾರ ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅವರನ್ನು ಕಾಪಾಡಬೇಕು. ದೇಶದಲ್ಲಿ ಮೀಸಲಾತಿ ಬಿಕ್ಕಟ್ಟನ್ನು ಹುಟ್ಟು ಹಾಕಿ ಇದನ್ನು ಕಿತ್ತು ಹಾಕುವ ಹುನ್ನಾರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ‌ ಎಂದರು.

ಮೀಸಲಾತಿಗೆ ಮಸಿ ಬಳಿಯುವ ಪ್ರಯತ್ನ ಸರಿಯಲ್ಲ: ವಿಚಾರ ಸಂಕಿರಣದಲ್ಲಿ ನಾಗಮೋಹನ್ ದಾಸ್ ಅಭಿಪ್ರಾಯ
ನ್ಯಾಯಮೂರ್ತಿ ನಾಗಮೋಹನ್​ ದಾಸ್
Follow us
TV9 Web
| Updated By: ganapathi bhat

Updated on:Apr 06, 2022 | 7:09 PM

ಬೆಂಗಳೂರು: ಎಲ್ಲರೂ ಸಂವಿಧಾನ ಅರ್ಥಮಾಡಿಕೊಂಡರೆ ಬಹುತ್ವ, ಸಮಾನತೆ ಸೇರಿದಂತೆ ಎಲ್ಲ ವಿಚಾರಗಳನ್ನು ತಿಳಿದುಕೊಳ್ಳಬಹುದು. ಪ್ರತಿ ಧರ್ಮದವರು ಮೀಸಲಾತಿಯ ಸೌಲಭ್ಯವನ್ನು ಅನುಭವಿಸುತ್ತಿದ್ದಾರೆ. ಆದರೆ ಎಸ್​ಸಿ, ಎಸ್​ಟಿ ಮೀಸಲಾತಿ ಬಗ್ಗೆ ಮಾತನಾಡುತ್ತಿರುವುದು ಸರಿಯಲ್ಲ. ಮೀಸಲಾತಿ ಬಡತನ ನಿವಾರಣೆಯ ಕಾರ್ಯಕ್ರಮವಲ್ಲ. ಬಡತನ ನಿವಾರಣೆಗಾಗಿ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಆದರೆ ಇರುವ ಮೀಸಲಾತಿಗೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ತಿಳಿಸಿದರು.

ಪ್ರಸ್ತುತ ರಾಜ್ಯದಲ್ಲಿ ಚರ್ಚಾ ವಿಷಯವಾಗಿರುವ ಮೀಸಲಾತಿ ವಿಚಾರಕ್ಕೆ ಸಂಬಂಧ ಪಟ್ಟಂತೆ ‘ಮೀಸಲಾತಿ ವಾಸ್ತವ ಸ್ಥಿತಿಗತಿಗಳು’ ಎಂಬ ವಿಷಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಪ್ರಜಾ ಪರಿವರ್ತನಾ ವೇದಿಕೆ ವತಿಯಿಂದ ಬೆಂಗಳೂರಿನ ವಸಂತನಗರದ ಅಂಬೇಡ್ಕರ್​ ಭವನದಲ್ಲಿ (ಮಾ.10) ಹಮ್ಮಿಕೊಳ್ಳಲಾಗಿತ್ತು. ವಿಚಾರ ಸಂಕಿರಣ ಉದ್ಘಾಟಿಸಿ ನ್ಯಾಯಮೂರ್ತಿ ನಾಗಮೋಹನ್ ದಾಸ್ ಮಾತನಾಡಿದರು.

ಮೀಸಲಾತಿ ವಿಚಾರದಲ್ಲಿ ನಮ್ಮ ಮುಂದೆ ಅನೇಕ ಸವಾಲುಗಳಿವೆ. ಒಳಮೀಸಲಾತಿ, ಕೆನೆಪದರ ಅನೇಕ ವಿಚಾರಗಳು ಚರ್ಚೆಯಲ್ಲಿವೆ. ನ್ಯಾಯಮೂರ್ತಿ ಸದಾಶಿವ ಆಯೋಗ, ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಗಳು ಇನ್ನೂ ಹಾಗೇ ಉಳಿದುಕೊಂಡಿವೆ. ಮೀಸಲಾತಿ ವಿಚಾರದಲ್ಲಿ ಎಲ್ಲವನ್ನೂ ಸಮಗ್ರವಾಗಿ ಅಧ್ಯಯನ ನಡೆಸಿ ಒಂದು ಮೀಸಲಾತಿ ನೀತಿಯನ್ನು ರೂಪಿಸಬೇಕಿದೆ ಎಂದು ಹೇಳಿದರು.

ಮೀಸಲಾತಿಯಿಂದ ರೈತರ ಸಮಸ್ಯೆ ಬಗೆಹರಿಯಲ್ಲ. ಸರ್ಕಾರ ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಅವರನ್ನು ಕಾಪಾಡಬೇಕು. ದೇಶದಲ್ಲಿ ಮೀಸಲಾತಿ ಬಿಕ್ಕಟ್ಟನ್ನು ಹುಟ್ಟು ಹಾಕಿ ಇದನ್ನು ಕಿತ್ತು ಹಾಕುವ ಹುನ್ನಾರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ‌ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ರಾಜ್ಯಾಧ್ಯಕ್ಷ, ವಿಚಾರವಾದಿ ಬಿ. ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯದಲ್ಲಿ ಮೀಸಲಾತಿಗಾಗಿ ಸರಣಿ ಯಾತ್ರೆ, ಸಮಾವೇಶಗಳು ನಡೆಯುತ್ತಿದೆ. ಮೀಸಲಾತಿ ಕಲ್ಪನೆ ಒಂದು ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ದುರ್ಬಲವಾಗಿದ್ದು, ಕೀಳರಿಮೆಯಲ್ಲಿ ಬದುಕಿದ್ದು, ಮೇಲ್ವರ್ಗಗಳ ದೌರ್ಜನ್ಯ, ದಬ್ಬಾಳಿಕೆಗೆ ಗುರಿಯಾಗಿದ್ದಲ್ಲಿ ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶವನ್ನು ಹೊಂದಿದೆ. ಈ ದುರ್ಬಲತೆಯನ್ನು ವೈಜ್ಞಾನಿಕ ಸಮೀಕ್ಷೆಗೆ ಒಳಪಡಿಸದೇ ಮೀಸಲಾತಿ ಬೇಡಿಕೆ ಎಷ್ಟರ ಮಟ್ಟಿಗೆ ಸಮಂಜಸವಾದದು ಎಂದು ಹೇಳಬೇಕಾದ ಸಂದರ್ಭ ಎದುರಾಗಿದೆ ಎಂದು ಹೇಳಿದರು.

ತಮಿಳುನಾಡಿನ ಮಾದರಿಯಲ್ಲಿ ಶೇ 69ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು. ವಿವಿಧ ಜನಾಂಗಗಳು ಅವೈಜ್ಞಾನಿಕವಾಗಿ ಮೀಸಲಾತಿಯ ಬೇಡಿಕೆಯನ್ನು ಕೇಳುತ್ತಿದ್ದಾರೆ. 1950ರಿಂದ ಇಲ್ಲಿಯ ತನಕ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ವಿಸ್ತರಿಸದೇ ಇರುವುದು ಅನುಮಾನವಾಗಿ ಕಾಡುತ್ತದೆ. ಮೀಸಲಾತಿಯನ್ನು ನ್ಯಾಯಾಲಯದ ಮೂಲಕ ಶೇ 49.5ಕ್ಕೆ ನಿರ್ಬಂಧಿಸಿರುವುದಾದರೂ ಏಕೆ ಎಂಬ ಪ್ರಶ್ನೆಯನ್ನು ಎತ್ತಬೇಕಿದೆ ಎಂದು ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಆಯವ್ಯಯದಲ್ಲಿ 1.50 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಪರಿಶಿಷ್ಟರು ಸೇರಿದತೆ ಹಿಂದುಳಿದ ವರ್ಗಗಳ ನಿಗಮಕ್ಕೆ ಕೇವಲ 500 ಕೋಟಿ ರೂಪಾಯಿ ಹಣ ನೀಡಿದ್ದಾರೆ. ಅದೇ ರೀತಿ ಕೇವಲ 50 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯಕ್ಕೆ ತಲಾ 500 ಕೋಟಿ ರೂಪಾಯಿ ಅನುದಾನ ನೀಡಿರುವುದು ಎಷ್ಟರ ಮಟ್ಟಿಗೆ ಸರಿ. ಈ ರೀತಿ ನೋಡಿದರೆ, ಹಿಂದುಳಿದ ವರ್ಗಗಳ ನಿಗಮಕ್ಕೆ ಕನಿಷ್ಠ 1500 ಕೋಟಿ ರೂಪಾಯಿ ಅನುದಾನವನ್ನು ಒದಗಿಸಬೇಕೆಂದು ಆಗ್ರಹಿಸಿದರು.

ಬಸವಣ್ಣನ ಅನುಭವ ಮಂಟಪ ಪರಿಕಲ್ಪನೆ ಹಿನ್ನಲೆಯಲ್ಲಿ ಹುಟ್ಟಿದ ಮಠಗಳು ಸಹ ಜಾತೀಯ ಮಠಗಳಾಗಿ ಪರಿವರ್ತಿತವಾಗಿ ವರ್ತಿಸುತ್ತಿರುವುದು ದುರಂತವಾಗಿದೆ. ಇಂತಹ ಮಠಗಳು ಯಾವುದೇ ವೈಜ್ಞಾನಿಕ ತಳಹದಿಯ ಸಮೀಕ್ಷಗೆ ಒಳಪಡದೇ ತಮ್ಮ ಜಾತಿಗಳಿಗೆ ಇಂತಹ ಪ್ರವರ್ಗದಲ್ಲಿ ಮೀಸಲಾತಿ ನೀಡಬೇಕೆಂದು ವರ್ತಿಸುತ್ತಿರುವ ಸಂಗತಿ ಯಾವುದೇ ನಾಗರಿಕ ಸಮಾಜಗಳ ಉಚಿತವಲ್ಲದ ವರ್ತನೆಯಾಗಿದೆ ಎಂದು ಹೇಳಿದರು.

ಶೋಷಿತ ಸಮುದಾಯಗಳಿಗೆ ಮೀಸಲಾತಿ ನೀಡಲು ಭಾರತದ ಯಾವ ನಾಗರಿಕ ಸಮಾಜ ವಿರೋಧಿಸುವುದಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ನೀಡಲಾದ ಮೀಸಲಾತಿ ಕೇವಲ ಶೇ. 50 ರಷ್ಟಾದರೆ, ಹಿಂದುಳಿದ ವರ್ಗಗಳಿಗೆ ಜಾರಿಗೆ ತಂದಿರುವ ಮೀಸಲಾತಿ ಕೇವಲ ಶೇ. 6.9 ಮಾತ್ರವಾಗಿದ್ದು, ನೀಡಬೇಕಿದ್ದ ಮೀಸಲಾತಿಯನ್ನು ನ್ಯಾಯಬದ್ದವಾಗಿ ಕೇಳಬೇಕಿದೆ ಎಂದು ತಿಳಿಸಿದರು.

ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ್ ಮಾತನಾಡಿದರು. ಈ ದೇಶದಲ್ಲಿ ಅಂಬೇಡ್ಕರ್ ಪ್ರಜಾಪ್ರಭುತ್ವ ಇಲ್ಲ. ಮೀಸಲಾತಿಯನ್ನು ಸರ್ವನಾಶ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಮೀಸಲಾತಿ ಜಾಗೃತಿ ಕುರಿತು 30 ಜಿಲ್ಲೆಗಳಲ್ಲಿ ಇಂತಹ ವಿಚಾರ ಸಂಕಿರಣ ನಡೆಯಬೇಕು ಎಂದು ಹೇಳಿದರು.

ಸಮಾವೇಶದಲ್ಲಿ ಚಿಂತಕ ಡಾ.ರೋಷನ್ ಮುಲ್ಲಾ, ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಮಾರಪ್ಪ, ದಲಿತ ಮುಖಂಡ ಮುನಿ ವೆಂಕಟಪ್ಪ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ದಲಿತ ಸಂಘಟನಗಳ ಕಾರ್ಯಕರ್ತರು, ವೇದಿಕೆಯ ಕಾರ್ಯಕರ್ತರು ಸೇರಿದಂತೆ ಮತ್ತಿತರರ ದಲಿತ ಮುಖಂಡರು ಹಾಜರಿದ್ದರು.

ಟಿವಿ9 ಕನ್ನಡ ಡಿಜಿಟಲ್ ಕೂಡ ಈ ವಿಚಾರವಾಗಿ ಚರ್ಚಾ ಕಾರ್ಯಕ್ರಮ ನಡೆಸಿಕೊಟ್ಟಿತ್ತು. ನ್ಯಾ. ನಾಗಮೋಹನ್ ದಾಸ್ ಭಾಗವಹಿಸಿದ್ದರು. ಸಂಪೂರ್ಣ ಚರ್ಚೆ ಮತ್ತು ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ : TV9 Digital Live | ಸಮಸ್ಯೆಗಳಿರುವುದು ನಿಜ, ಆದರೆ ಮೀಸಲಾತಿಯೊಂದೇ ಪರಿಹಾರವಲ್ಲ: ನಾಗಮೋಹನ್ ದಾಸ್

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ ನೀಡಲು ಪೂರಕ ದಾಖಲೆ ಸಲ್ಲಿಸಬೇಕು: ಹಿಂದುಳಿದ ವರ್ಗಗಳ ಆಯೋಗದಿಂದ ಸ್ವಾಮೀಜಿಗೆ ನೋಟಿಸ್

Published On - 9:59 pm, Sun, 14 March 21