ಚಳ್ಳಕೆರೆಯಲ್ಲಿ ಮನಕಲುಕುವ ಘಟನೆ; ಮರಿಕೋತಿ ಕಳೆದು ಕೊಂಡು ತಾಯಿ ಮಂಗ ಮೂಕರೋದನೆ
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಮರಿಕೋತಿಯೊಂದು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿದ್ದು ತಾಯಿ ಮಂಗ ತನ್ನ ಮರಿಯನ್ನು ಎಚ್ಚರಗೊಳಿಸಲು ಹರಸಾಹಸ ಪಟ್ಟಿದೆ. ತಾಯಿ ಮಂಗದ ಮೂಕರೋದನೆ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಚಿತ್ರದುರ್ಗ: ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ಸಂಬಂಧವೆಂದರೆ ತಾಯಿ-ಮಕ್ಕಳ ಸಂಬಂಧ. ಇದಕ್ಕೆ ಸಾಕ್ಷಿಯಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದಲ್ಲಿ ಮನಕಲುಕಿದ ಘಟನೆ ನಡೆದಿದೆ. ಮರಿಕೋತಿ ಕಳೆದುಕೊಂಡು ತಾಯಿ ಮಂಗ ಮೂಕರೋದನೆ ಪಟ್ಟ ಘಟನೆ ಜನರಲ್ಲಿ ಕಣ್ಣೀರು ತರಿಸುವಂತಿತ್ತು. ವಿದ್ಯುತ್ ತಂತಿ ಸ್ಪರ್ಶಿಸಿ ಮರಿಕೋತಿ ಮೃತಪಟ್ಟಿದ್ದು ಮರಿಯನ್ನು ಎಚ್ಚರಗೊಳಿಸಲು ತಾಯಿ ಮಂಗ ಹರಸಾಹಸ ಪಟ್ಟ ಕಣ್ಣೀರು ಹಾಕಿದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಮನಕಲಕುವ ಘಟನಾವಳಿಯೊಂದು ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ಶಾಂತಿ ನಗರದಲ್ಲಿ ನಡೆದಿದೆ. ಬೆಳಗಿನ ಜಾವ ಎಂದಿನಂತೆ ಮಂಗಗಳ ಹಿಂಡು ಶಾಂತಿ ನಗರದ ಮನೆಗಳ ಬಳಿ ಓಡಾಡುತ್ತಿದ್ದವು. ಆಹಾರ ಹರಸಿ ನಾಡಿಗೆ ಬಂದ ಮಂಗಗಳು ಸಹಜ ಕಪಿಚೇಷ್ಟೆ ಮಾಡುತ್ತಿದ್ದವು. ಅದೇ ವೇಳೆ ತಾಯಿಯಿಂದ ಬೇರ್ಪಟ್ಟ ಮರಿ ಮಂಗವೊಂದು ಅತ್ತಿಂದಿತ್ತ ಜಿಗಿಯುವ ವೇಳೆ ಏಕಾಏಕಿ ವಿದ್ಯುತ್ ತಂತಿ ಸ್ಪರ್ಶಕ್ಕೆ ಒಳಗಾಗಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ನೆಲಕ್ಕೆ ಬಿದ್ದ ಮರಿ ಮಂಗ ಕ್ಷಣಾರ್ಧದಲ್ಲೇ ಜೀವ ಕಳೆದುಕೊಂಡಿದೆ. ಮಾರು ದೂರದಲ್ಲಿದ್ದ ತಾಯಿ ಮಂಗ ಓಡೋಡಿ ಬಂದು ಕಂದನನ್ನು ಮಡಿಲಿಗೆ ಹಾಕಿಕೊಂಡಿದೆ. ತನ್ನ ಕಂದನನ್ನು ಕೂಗಿ ಕರೆದು ಎಬ್ಬಿಸಲು ಪ್ರಯತ್ನಿಸಿದೆ. ಜೀವ ಉಳಿಸಲು ಮರಿಯನ್ನು ಹೊತ್ತುಕೊಂಡು ಅತ್ತಿಂದಿತ್ತ ಓಡಾಡುತ್ತ ಹರಸಾಹಸ ಪಟ್ಟಿದೆ. ಕೊನೆಗೆ ಮನೆ ಮೇಲಿನ ಸಿಂಟೆಕ್ಸ್ ಟ್ಯಾಂಕ್ ಬಳಿಗೆ ತೆರಳಿ ನೀರಿನಿಂದ ಮುಖಕ್ಕೆ ಚಿಮ್ಮಿ ಮರುಜೀವ ನೀಡುವ ವಿಫಲ ಯತ್ನ ಮಾಡಿದೆ. ಶಾಂತಿ ನಗರದ ಕೆಲವು ತಾಯಿ ಮಂಗ ತನ್ನ ಮರಿಯ ಜೀವ ಉಳಿಸಲು ಪರದಾಡಿದ ಪರಿಯ ಘಟನಾವಳಿಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಸದ್ಯ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಮಂಗಗಳ ಕಪಿಚೇಷ್ಟೆಯನ್ನು ಮಾತ್ರ ಕಂಡು ಓಡಿಸಲು ಮುಂದಾಗುತ್ತಿದ್ದ ಜನರೀಗ ಮಂಗದ ಮಮತಾಕಾರ ಕಣ್ತುಂಬಿಕೊಂಡು ಕಣ್ಣಾಲಿಗಳು ಒದ್ದೆ ಆಗುತ್ತಿವೆ. ಮೂಕ ಪ್ರಾಣಿಗೆ ಅದೆಷ್ಟು ಪ್ರೀತಿ , ಕಾಳಜಿ ಇದೆಯಲ್ಲ ಎಂದು ಮಾತಾಡಿಕೊಳ್ಳುವಂತಾಗಿದೆ.
ಶಾಂತಿ ನಗರದ ಜನರು ಮರಿಯನ್ನು ಕಳೆದುಕೊಂಡ ತಾಯಿ ಮಂಗದ ಆಕ್ರಂದನ ಕಂಡು ಮೂಕ ವಿಸ್ಮಿತರಾಗಿದ್ದಾರೆ. ಮಾತು ಬಾರದ ಮೂಕ ಪ್ರಾಣಿಯಲ್ಲೂ ಜೀವ ಪರ ಕಾಳಜಿ ಇರುವುದು ಮಾನವೀಯತೆ ಮರೆತಿರುವ ನಿಜ ಮಾನವರ ಕಣ್ಣು ತೆರೆಸುವಂಥ ಘಟನೆ ಆಗಿದೆ. ಜೀವ ಕಳೆದುಕೊಂಡ ಮರಿಯನ್ನು ಎತ್ತಿಕೊಂಡು ಓಡಾಡಿದ ತಾಯಿ ಮಂಗ ಸಿಂಟೆಕ್ಸ್ ಬಳಿ ಕೊಂಡೊಯ್ದು ನೀರು ಚಿಮ್ಮಿಸಿ ಎಚ್ಚರಿಸಲು ಪ್ರಯತ್ನಿಸಿತು. ಎಚ್ಚರಗೊಳ್ಳದಿದ್ದಾಗ ಮರಿಯನ್ನು ಬಿಡದೆ ಮಡಿಲಲ್ಲೇ ಎತ್ತಿಕೊಂಡು ಹೋಯಿತು ಎಂದು ಪ್ರತ್ಯಕ್ಷದರ್ಶಿ ಫರೀದ್ ಖಾನ್ ತಿಳಿಸಿದ್ದಾರೆ.
ಶಾಂತಿ ನಗರ, ಗಾಂಧಿ ನಗರ ಬಡಾವಣೆಗಳಲ್ಲಿ ಅನೇಕ ವರ್ಷಗಳಿಂದ ಮಂಗಗಳ ಹಿಂಡು ಆಗಾಗ ಕಾಣಿಸಿಕೊಳ್ಳುತ್ತವೆ. ಆದ್ರೆ, ಇದೇ ಮೊದಲ ಸಲ ಹೀಗೆ ಮಂಗದ ಮರಿ ಸಾವಿಗೀಡಾಗಿದೆ. ಮರಿಯ ಮೇಲೆ ತಾಯಿ ಮಂಗ ತೋರಿದ ಪ್ರೀತಿ ಇಡೀ ಬಡಾವಣೆಯ ಜನರು ಮರುಗುವಂತೆ ಮಾಡಿದೆ. ಇಂಥ ಘಟನೆಗಳು ಮರು ಕಳಿಸದಂತೆ ಅರಣ್ಯ ಇಲಾಖೆ ಮತ್ತು ಸಂಬಂಧಿತ ಇಲಾಖೆಯವರು ಮುಂಜಾಗೃತಾ ಕ್ರಮ ಕೈಗೊಳ್ಳಬೇಕೆಂದು ಎಂದು ಸ್ಥಳೀಯ ನಿವಾಸಿ ತಾರಾ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Gold and Silver Price: ಪ್ರೀತಿಪಾತ್ರರಿಗಾಗಿ ಆಭರಣ ಖರೀದಿಸುವ ಬಯಕೆ ಇದೆಯೇ? ಇಲ್ಲಿದೆ ಚಿನ್ನ, ಬೆಳ್ಳಿ ದರ ವಿವರ ಚೆಕ್ ಮಾಡಿ
Published On - 7:49 am, Thu, 10 February 22