Nava Durga Utsava: ಕೋಟೆನಾಡು ದುರ್ಗದಲ್ಲಿ ನವದುರ್ಗಿಯರ ಭಕ್ತಿಭಾವದ, ಮನಮೋಹಕ ಉತ್ಸವ
chitradurga utsava: ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ದೇವತೆಯರ ವಿಶೇಷ ಉತ್ಸವ ನಡೆಯಿತು. ನಗರಪೂರ್ಣ ದೇವತೆಯರ ಉತ್ಸವ ಮೂರ್ತಿಯ ಮೆರವಣಿಗೆ ನಡೆದಿದ್ದು ಗತಕಾಲದ ಇತಿಹಾಸವನ್ನು ಮರುಕಳಿಸುವಂತಿತ್ತು.
ಚಿತ್ರದುರ್ಗ ಉತ್ಸವ: ಕೋಟೆನಾಡು ಚಿತ್ರದುರ್ಗ ನಗರ (chitradurga) ನವದುರ್ಗಿಯರ ನಾಡು ಸಹ ಹೌದು. ಇಲ್ಲಿ ಆರಾಧ್ಯ ದೇವಿಯರ ಸಾಂಪ್ರದಾಯಿಕ ಜಾತ್ರೆ, ಉತ್ಸವಗಳು (utsava) ನಡೆಯುವುದು ಸಹಜ. ಆದ್ರೆ, ನಾಡ ದೇವಿಯರನ್ನೆಲ್ಲಾ ಒಂದೆಡೆ ಸೇರಿಸಿ ರಾಜಬೀದಿಯಲ್ಲಿ ವಿಶೇಷ ಉತ್ಸವ (Nava Durga utsava) ನಡೆಸಲಾಯಿತು. ಈ ಕುರಿತು ವರದಿ ಇಲ್ಲಿದೆ.
ಕೋಟೆನಾಡಿನ ರಾಜಬೀದಿಯಲ್ಲಿ ನಾಡ ಆರಾಧ್ಯ ದೇವಿಯರ ಸಾಂಪ್ರದಾಯಿಕ ಉತ್ಸವ. ದೇವಿಯರ ವಿಶೇಷ ಉತ್ಸವ ಕಣ್ತುಂಬಿಕೊಳ್ಳಲು ಸೇರಿದ ಜನಸ್ತೋಮ. ಸಾಲಾಗಿ 14 ದೇವಿಯರ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದಲ್ಲಿ. ಹೌದು, ಕೋಟೆನಾಡಿನ ಆರಾಧ್ಯ ದೇವತೆ, ದೇವತೆಗಳ ಹಿರಿಯಕ್ಕ ಏಕನಾಥೇಶ್ವರಿ ದೇವಿಗೆ ಭಕ್ತರು ಸುಮಾರು 1ಕೋಟಿ ವೆಚ್ಚದಲ್ಲಿ ಒಂದೂವರೆ ಕೆಜಿಯಷ್ಟು ತೂಕದ ಚಿನ್ನದ ಮುಖಪದ್ಮ ಮಾಡಿಸಿದ್ದಾರೆ.
ಹೀಗಾಗಿ, ಏಕನಾಥೇಶ್ವರಿಯ ಮುಖಪದ್ಮ ಲೋಕಾರ್ಪಣೆ ಹಾಗೂ ಉತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೂರು ದಿನಗಳ ಕಾಲ ಏಕನಾಥೇಶ್ವರಿಯ ವಿಶೇಷ ಉತ್ಸವ ಆಯೋಜಿಸಲಾಗಿದೆ. ಮೊದಲ ದಿನ ಬಸವನಬಾವಿಯಲ್ಲಿ ಉತ್ಸವಮೂರ್ತಿಯ ಗಂಗಾಪೂಜೆ, ಎರಡನೇ ದಿನ ಏಳು ಸುತ್ತಿನ ಕೋಟೆಯ ದೇಗುಲದ ಎದುರಿನ ಉಯ್ಯಾಲೆ ಕಂಬದಲ್ಲಿ ಉಯ್ಯಾಲೆ ಉತ್ಸವ, ಮೂರನೇ ದಿನವಾದ ನಿನ್ನೆ ಗುರುವಾರ ನಾಡ ಆರಾಧ್ಯ ದೇವಿಯರ ನಡುವೆ ಹಿರಿಯಕ್ಕ ಏಕನಾಥೇಶ್ವರಿ ದೇವಿಯ ಭವ್ಯ ಉತ್ಸವ ನಡೆಯಿತು. ನಾಡ ಸಮೃದ್ಧಿಗಾಗಿ ಈ ವಿಶೇಷ ಉತ್ಸವ ಆಯೋಜಿಸಲಾಗಿದೆ ಅಂತಾರೆ ಏಕಾನಾಥೇಶ್ವರಿ ಭಕ್ತರಾದ ಮಲ್ಲಿಕಾರ್ಜುನ್, ಮಾಜಿ ನಗರಸಭೆ ಸದಸ್ಯ.
ಇನ್ನು ಹಿರಿಯಕ್ಕ ಏಕನಾಥೇಶ್ವರಿ ಉತ್ಸವಮೂರ್ತಿ ಜತೆಯಲ್ಲಿ ಉಚ್ಚಂಗೆಮ್ಮ, ಬನಶಂಕರೆಮ್ಮ, ತಿಪ್ಪಿನಘಟ್ಟಮ್ಮ, ಬರಗೇರಮ್ಮ, ಗೌರಸಂದ್ರ ಮಾರಮ್ಮ, ದುರ್ಗಮ್ಮ, ಧರ್ಮದೇವತೆಯರು ಸೇರಿ ಸುಮಾರು 14 ದೇವತೆಯರ ಉತ್ಸವ ಮೂರ್ತಿಗಳನ್ನು ಮೊದಲ ಕೋಟೆ ಬಳಿಯ ಏಕನಾಥೇಶ್ವರಿ ದೇಗುಲದ ಆವರಣಕ್ಕೆ ಕರೆತಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ರಾಜಬೀದಿಯ ಮೂಲಕ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿ ಇಡೀ ನಗರ ಸಂಚರಿಸಲಾಯಿತು. ವಿಶೇಷ ಹೂವಿನ ಅಲಂಕಾರದೊಂದಿಗೆ ನಗರದೇವತೆಗಳ ಮೆರವಣಿಗೆಯನ್ನು ಜನರು ಕಣ್ತುಂಬಿಕೊಂಡರು. ಬಡಾವಣೆಗಳ ಬಳಿಗೆ ಬಂದ ಸಾಲುಸಾಲು ದೇವತೆಯರ ದರ್ಶನ ಪಡೆದ ಭಕ್ತರು ಪುನೀತ ಭಾವ ಅನುಭವಿಸಿದರು.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ದೇವತೆಯರ ವಿಶೇಷ ಉತ್ಸವ ನಡೆಯಿತು. ನಗರಪೂರ್ಣ ದೇವತೆಯರ ಉತ್ಸವ ಮೂರ್ತಿಯ ಮೆರವಣಿಗೆ ನಡೆದಿದ್ದು ಗತಕಾಲದ ಇತಿಹಾಸವನ್ನು ಮರುಕಳಿಸುವಂತಿತ್ತು. ದೇವತೆಯರ ನಗರ ಸಂಚಾರ, ವಿಶೇಷ ಉತ್ಸವದಿಂದಾಗಿ ನಾಡು ಸುಖ, ಶಾಂತಿ, ಸಮೃದ್ಧಿ ಆಗಲಿದೆ ಎಂಬುದು ದುರ್ಗದ ಜನರ ನಂಬಿಕೆ ಆಗಿದೆ. (ವರದಿ: ಬಸವರಾಜ ಮುದನೂರ್, ಟಿವಿ 9, ಚಿತ್ರದುರ್ಗ)