ಹುಬ್ಬಳ್ಳಿ ಧಾರವಾಡ: 5ನೇ ದಿನಕ್ಕೆ ಕಾಲಿಟ್ಟ ಪಾಲಿಕೆ ಸಿಬ್ಬಂದಿ ಮುಷ್ಕರ, ಜನ ಪರದಾಟ
ಕರ್ನಾಟಕದ ಹತ್ತು ಮಹಾನಗರ ಪಾಲಿಕೆಗಳ ಸಿಬ್ಬಂದಿ ಐದು ದಿನಗಳಿಂದ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. 7ನೇ ವೇತನ ಆಯೋಗದ ಸೌಲಭ್ಯ, ಜ್ಯೋತಿ ಸಂಜೀವಿನಿ ಯೋಜನೆ, ಹುದ್ದೆ ಭರ್ತಿ ಮುಂತಾದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅವರು ಪ್ರತಿಭಟಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪಾಲಿಕೆ ಸೇರಿದಂತೆ ಪಾಲಿಕೆಗಳಲ್ಲಿ ಸೇವೆಗಳು ಸ್ಥಗಿತಗೊಂಡಿವೆ.

ಹುಬ್ಬಳ್ಳಿ, ಜುಲೈ 12: ಕಳೆದ 5 ದಿನಗಳಿಂದ ಕರ್ನಾಟಕದ ಹತ್ತು ಮಹಾನಗರ ಪಾಲಿಕೆಗಳ (Municipal Corporation) ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇತ್ತ ಸರ್ಕಾರ ಅವರ ಬೇಡಿಕೆ ಈಡೇರಿಸುವ ಕೆಲಸಕ್ಕೆ ಮುಂದಾಗುವ ಲಕ್ಷಣ ಕಾಣಿಸುತ್ತಿಲ್ಲ. ಮತ್ತೊಂದಡೆ, ಸಿಬ್ಬಂದಿ ಪಟ್ಟು ಸಡಿಲಿಸುತ್ತಿಲ್ಲ. ಹೀಗಾಗಿ ಹುಬ್ಬಳ್ಳಿ-ಧಾರವಾಡ (Hubli Dharawad) ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಹತ್ತು ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಜನರು, ದೈನಂದಿನ ಕೆಲಸ ಕಾರ್ಯಗಳಿಗಾಗಿ ಪಾಲಿಕೆಗೆ ಪ್ರತಿನಿತ್ಯ ಅಲೆಯುವಂತಹ ಸ್ಥಿತಿ ನಿರ್ಮಣವಾಗಿದೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತಾಗಿದೆ ಜನರ ಸ್ಥಿತಿ.
ಮಹಾನಗರ ಪಾಲಿಕೆಗಳ ಕಚೇರಿಗೆ ಹೋದರೆ ಇದೀಗ ಬೀಗ ಹಾಕಿದ ದೃಶ್ಯಗಳು ಮಾತ್ರ ಕಾಣುತ್ತಿವೆ. ಕೆಲವಡೆ ಕಚೇರಿಗಳು ತೆರೆದಿದ್ದರೂ ಕೆಲಸ ಮಾಡುವ ಸಿಬ್ಬಂದಿ ಇಲ್ಲ. ಹೀಗಾಗಿ ಪ್ರತಿನಿತ್ಯ ರೇಷನ್ ಕಾರ್ಡ್, ಆಸ್ತಿ ವಿಚಾರಗಳು, ಮನೆ ನಿರ್ಮಾಣ ಪರವಾನಗಿ ಸೇರಿದಂತೆ ಹತ್ತಾರು ಕೆಲಸಗಳಿಗೆ ಬರುವ ಜನರು, ಖಾಲಿಯಿರುವ ಅಥವಾ ಬೀಗ ಹಾಕಿರುವ ಕಚೇರಿಯನ್ನು ನೋಡಿ ಮರಳಿ ಹೋಗುವಂತಾಗಿದೆ. ಇದಕ್ಕೆಲ್ಲಾ ಕಾರಣ, ಪಾಲಿಕೆ ಸಿಬ್ಬಂದಿ ಪ್ರತಿಭಟನೆ.
ಜುಲೈ 8 ರಿಂದ ಪಾಲಿಕೆ ಸಿಬ್ಬಂದಿ ಮುಷ್ಕರ
ಹುಬ್ಳಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಹತ್ತು ಮಹಾನಗರ ಪಾಲಿಕೆ ಸಿಬ್ಬಂದಿ ಜುಲೈ 8 ರಿಂದ ಕೆಲಸಕ್ಕೆ ಸಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪಾಲಿಕೆ ಸಿಬ್ಬಂದಿ ಬೇಡಿಕೆಗಳೇನು?
ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸುವಂತೆ ನಮಗೂ 7 ನೇ ವೇತನ ಆಯೋಗದ ಸೌಲಭ್ಯಗಳನ್ನು ಸರ್ಕಾರ ಆರ್ಥಿಕ ಇಲಾಖೆಯಿಂದ ಬಿಡುಗಡೆ ಮಾಡಬೇಕು ಎಂಬುದು ಅವರ ಆಗ್ರಹವಾಗಿದೆ. ತಮಗೂ ಜ್ಯೋತಿ ಸಂಜೀವಿನಿ ಆರೋಗ್ಯ ಸೇವೆಯನ್ನು ಜಾರಿಗೊಳಿಸಬೇಕು. ಪಾಲಿಕೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ, ಕೆಲಸದ ಭಾರವನ್ನು ಕಡಿಮೆ ಮಾಡಬೇಕು ಎಂಬುದೂ ಸೇರಿದಂತೆ ಆರಕ್ಕೂ ಹೆಚ್ಚು ಬೇಡಿಕೆಗಳ ಇಡೇರಿಕೆಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದಾರೆ. ಅನೇಕ ಸಿಬ್ಬಂದಿ ಬೆಂಗಳೂರಲ್ಲಿ ಹೋರಾಟ ನಡೆಸುತ್ತಿದ್ದರೆ, ಇತ್ತ ಉಳಿದ ಸಿಬ್ಬಂದಿ ತಮ್ಮ ಪಾಲಿಕೆಯ ಆವರಣದಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ ನಗರದಲ್ಲಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿರುವ 1700 ಹೆಚ್ಚು ಸಿಬ್ಬಂದಿ ಕೂಡಾ ಸಾಮೂಹಿಕ ರಜೆ ಹಾಕಿದ್ದು, ಪಾಲಿಕೆಯ ಕೆಲಸಕ್ಕೆ ಹಾಜರಾಗಿಲ್ಲ.
ಇದನ್ನೂ ಓದಿ: ಜುಲೈ 8 ರಂದು ರಾಜ್ಯದ 10 ಮಹಾನಗರ ಪಾಲಿಕೆಗಳು ಬಂದ್..! ಇಲ್ಲಿದೆ ಕಾರಣ
ಶುಕ್ರವಾರ ಪಾಲಿಕೆಯ ನೌಕರರ ಮುಖಂಡರು, ಸರ್ಕಾರದ ಅಧಿಕಾರಿಗಳ ಜೊತೆ ನಡೆದ ಮಾತುಕತೆ ಸಫಲವಾಗದ ಹಿನ್ನೆಲೆಯಲ್ಲಿ, ಸಿಬ್ಬಂದಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಇಂದಿಗೆ ನೌಕರರ ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ.
ಸರ್ಕಾರ ಆದಷ್ಟು ಬೇಗನೆ ಪಾಲಿಕೆ ಸಿಬ್ಬಂದಿ ಜೊತೆ ಮತ್ತೊಂದು ಸುದ್ದಿನ ಮಾತುಕತೆ ನಡೆಸಿ, ಅವರ ಬೇಡಿಕೆಗಳನ್ನು ಪರಿಶೀಲನೆ ನಡೆಸಬೇಕಿದೆ. ಸಾಧ್ಯವಿರುವ ಬೇಡಿಕೆಗಳನ್ನು ಈಡೇರಿಸುವ ಕೆಲಸ ಮಾಡಬೇಕಿದೆ. ಇಲ್ಲದಿದ್ದರೆ, ಜನರು ಹತ್ತಾರು ಕೆಲಸಗಳಿಗೆ ಪಾಲಿಕೆಗೆ ಪ್ರತಿನಿತ್ಯ ಅಲೆದು ಅಲೆದು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಬೇಕಾಗುತ್ತದೆ.



