ಕೋಟೆನಾಡು ಚಿತ್ರದುರ್ಗದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಭಿನ್ನ ಆಚರಣೆ; ಊರಿಗೆ ಬೇಲಿ ಹಾಕಿ ಊರು ತೊರೆದ ಗ್ರಾಮಸ್ಥರು
ರಾಜ್ಯದ ಬಹುತೇಕ ಕಡೆ ಭರ್ತಿ ಮಳೆ ಸುರಿದಿದೆ, ಕೆಲವೆಡೆ ಪ್ರವಾಹವೇ ಸಂಭವಿಸಿದೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಮಳೆಗಾಗಿ ಪ್ರಾರ್ಥಿಸಿ ವಿಭಿನ್ನ ಆಚರಣೆಗಳು ನಡೆಯುತ್ತಿವೆ. ಜನ ಜಾನುವಾರು, ದೇವರ ಉತ್ಸವಮೂರ್ತಿಗಳ ಸಮೇತ ಊರು ತೊರೆದ ಜನ, ಊರಿಗೇ ಬೇಲಿ ಹಾಕುವ ಮೂಲಕ ಮಳೆಗಾಗಿ ಪ್ರಾರ್ಥನೆ ನಡೆದಿದೆ. ಏನೀ ವಿಶಿಷ್ಟ ಆಚರಣೆ ಅಂತೀರಾ? ಈ ವರದಿ ಓದಿ.
ಚಿತ್ರದುರ್ಗ, ಆ.10: ಚಿತ್ರದುರ್ಗ(Chitradurga) ಜಿಲ್ಲೆಯ ಚಳ್ಳಕೆರೆ ಮತ್ತು ಮೊಳಕಾಲ್ಮೂರು ಭಾಗದಲ್ಲಿ ಬರದ ಛಾಯೆ ಮೂಡಿದೆ. ನಿರಂತರ ಬರಗಾಲ ಎದುರಿಸುತ್ತಿರುವ ಜನರು ಪುರಾತನ ಆಚರಣೆಯ ಮೊರೆ ಹೋಗಿದ್ದಾರೆ. ಈ ಹಿಂದಿನಿಂದಲೂ ಈ ಭಾಗದ ಜನರು ಬರಗಾಲ ಆವರಿಸಿದ ಸಂದರ್ಭದಲ್ಲಿ ಹೊರಬೀಡು ಆಚರಣೆ ಆಚರಿಸುತ್ತಾರೆ. ಕಳೆದೆ ಒಂದೂವರೆ ದಶಕದ ಹಿಂದೆ ಈ ಆಚರಣೆ ಆಚರಿಸಲಾಗಿತ್ತು. ಇದೀಗ ಮತ್ತೆ ಅಂಥದ್ದೇ ಭೀಕರ ಬರಗಾಲದ ಛಾಯೆ ಮೂಡಿದ್ದು ಬಡ ಜನರು, ಕೃಷಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ, ಊರ ಹಿರಿಯರು ಹೊರಬೀಡು ಆಚರಣೆಗೆ ನಿರ್ಧರಿಸಿದ್ದಾರೆ.
ಏನೀ ಆಚರಣೆ?
ಅಂತೆಯೇ ಇಂದು ಬೆಳಗ್ಗೆ 6ಗಂಟೆಗೆ ಊರು ತೊರೆದ ಗ್ರಾಮಸ್ಥರು ಊರಿಗೇ ಬೇಲಿ ಹಾಕಿದ್ದರು. ಆರಾಧ್ಯ ದೇವರುಗಳಾದ ಜುಂಜಪ್ಪ, ರಂಗಪ್ಪ ಮತ್ತು ತಿಮ್ಮಪ್ಪ ಉತ್ಸವ ಮೂರ್ತಿಗಳನ್ನು ಊರು ಹೊರಗಿನ ಹನುಮಪ್ಪನ ದೇಗುಲಕ್ಕೆ ತರುತ್ತಾರೆ. ದಿನ ಬಳಕೆಯ ವಸ್ತುಗಳು, ಧವಸ ಧಾನ್ಯಗಳು, ಜಾನುವಾರುಗಳ ಸಮೇತ ಬಂದು ಹೊರವಲಯದ ತೋಟ, ಗದ್ದೆಗಳಲ್ಲಿ ವಾಸ್ತವ್ಯ ಹೂಡುತ್ತಾರೆ. ಇಡೀ ದಿನ ಅಲ್ಲೆ ಇದ್ದೂ ಹೊಲ ಗದ್ದೆಗಳಲ್ಲೇ ತಿಂಡಿ, ಊಟೋಪಚಾರ ಮುಗಿಸುತ್ತಾರೆ. ಸಂಜೆ ವೇಳೆಗೆ ಹನುಮಪ್ಪನ ದೇಗುಲ ಬಳಿಯ ಮಜ್ಜನ ಬಾವಿಯಲ್ಲಿ ಆರಾಧ್ಯ ದೇವರುಗಳ ಗಂಗಾಪೂಜೆ ಪೂರೈಸಿ ಮಳೆ ಬೆಳೆ ಸಮೃದ್ಧಿಗೆ ಪ್ರಾರ್ಥಿಸುತ್ತಾರೆ. ಗೋಪೂಜೆ ಸಲ್ಲಿಸಿ ಹೊತ್ತು ಮುಳುಗುವ ವೇಳೆಗೆ ಸರಿಯಾಗಿ ಗ್ರಾಮಕ್ಕೆ ಬರುತ್ತಾರೆ. ಮೊದಲು ಗೋವನ್ನು ಗ್ರಾಮ ಪ್ರವೇಶಕ್ಕೆ ಬಿಟ್ಟು ಬಳಿಕ ದೇವರುಗಳೊಂದಿಗೆ ಗ್ರಾಮಸ್ಥರು ಗ್ರಾಮ ಪ್ರವೇಶಿಸುತ್ತಾರೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಮಳೆಗಾಗಿ ಪ್ರಾರ್ಥಿಸಿ ಗಂಡು ಮಕ್ಕಳಿಗೆ ಮದುವೆ; ಕೆಲ ಹೊತ್ತಲ್ಲೇ ವರುಣನ ಆಗಮನ
ಇನ್ನು ಬುಡಕಟ್ಟು ಸಂಸ್ಕೃತಿಯ ಈ ಹೊರಬೀಡು ಆಚರಣೆ ಕೇವಲ ಕಾಡುಗೊಲ್ಲರಿಗೆ ಮಾತ್ರ ಸೀಮಿತ ಆಗಿಲ್ಲ. ಬದಲಾಗಿ ದೊಡ್ಡೇರಿ ಉಪ್ಪಾರಹಟ್ಟಿಯಲ್ಲಿ ವಾಸವಾಗಿರುವ ಎಲ್ಲಾ ಸಮುದಾಯದ ಜನರೂ ಭಾಗಿ ಆಗುತ್ತಾರೆ. ಯಾರೊಬ್ಬರೂ ಸಹ ಊರಲ್ಲಿ ಉಳಿಯೋದಿಲ್ಲ. ಇಡೀ ಒಂದು ದಿನ ಹಗಲು ಊರ ಹೊರಗೇ ಕಳೆದು ಸಂಜೆ ಹೊತ್ತಿಗೆ ಊರಿಗೆ ವಾಪಸ್ ಆಗುತ್ತಾರೆ. ಆ ಮೂಲಕ ಮಳೆ ಬೆಳೆ ಸಮೃದ್ಧಿ ಆಗಿರುತ್ತದೆ, ರೋಗ ರುಜನಿ ದೂರಾಗಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆಂಬ ನಂಬಿಕೆ ಜನರಲ್ಲಿದೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಚಳ್ಳಕೆರೆ ಮತ್ತು ಮೊಳಕಾಲ್ಮೂರು ಭಾಗದಲ್ಲಿ ಬರದ ಛಾಯ ಆವರಿಸಿದೆ. ಹೀಗಾಗಿ, ಬುಡಕಟ್ಟು ಸಮುದಾಯಗಳ ಜನರು ಮಳೆಗಾಗಿ ವಿಭಿನ್ನ ಆಚರಣೆಗಳಲ್ಲಿ ತೊಡಗಿದ್ದಾರೆ. ಕೃಷಿಕರು, ಕಾರ್ಮಿಕರು ಮಳೆ ಇಲ್ಲದೆ ಕಂಗಾಲಾಗಿದ್ದು ವರುಣ ದೇವ ಕೃಪೆ ತೋರಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ