ಚಿತ್ರದುರ್ಗದಲ್ಲಿ ತುಂತುರು ಮಳೆಗೆ ಬೆಳೆ ನಾಶ; ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತ ಕಂಗಾಲು

ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಸೋನೆ ಮಳೆ ಸುರಿಯುತ್ತಿದೆ. ಪರಿಣಾಮ ಮೆಣಸಿಕಾಯಿ ಬೆಳೆ ಕೈಗೆ ಬಂದಿದ್ದು ಬಾಯಿಗೆ ಬರದಂತಾಗಿದೆ. ಎಷ್ಟೇ ರಾಸಾಯನಿಕ ಸಿಂಪಡಿಸಿದರೂ ಪ್ರಯೋಜನವಾಗಿಲ್ಲ. ಬದಲಾಗಿ ರೈತನ ಜೇಬಿಗೆ ಕತ್ತರಿ ಬಿದ್ದಿದ್ದು, ನೇಗಿಲಯೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಚಿತ್ರದುರ್ಗದಲ್ಲಿ ತುಂತುರು ಮಳೆಗೆ ಬೆಳೆ ನಾಶ; ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತ ಕಂಗಾಲು
ಚಿತ್ರದುರ್ಗದಲ್ಲಿ ಮಳೆಗೆ ಬೆಳೆ ಹಾನಿ
Edited By: ಕಿರಣ್ ಹನುಮಂತ್​ ಮಾದಾರ್

Updated on: Aug 01, 2023 | 7:11 AM

ಚಿತ್ರದುರ್ಗ, ಆ.01: ಜಿಲ್ಲೆಯಲ್ಲಿ ಹದಿನೈದು ದಿನದಿಂದ ತುಂತುರು ಮಳೆಯ ಪರಿಣಾಮ ಬೆಳೆ ಹಾಳಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಿಂದ ರೈತರು(Farmers) ಕಂಗಾಲಾಗಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ. ಹೌದು ಚಿತ್ರದುರ್ಗ(Chitradurga) ತಾಲೂಕಿನ ಹುಣಸೇಕಟ್ಟೆ ಭಾಗದಲ್ಲಿ ಅನೇಕ ರೈತರು ಹತ್ತಾರು ಎಕರೆಯಲ್ಲಿ ಮೆಣಸಿಕಾಯಿ ಬೆಳೆ ಬೆಳೆದಿದ್ದಾರೆ. ಉತ್ತಮ ಬೆಳೆಯೂ ಬಂದಿದ್ದು, ಇನ್ನೇನು ಕೈಗೆ ಬರುವ ಸಂದರ್ಭದಲ್ಲಿ ಸೋನೆ ಮಳೆ ಶುರುವಾಗಿದೆ. ಪರಿಣಾಮ ಮೆಣಸಿಕಾಯಿ ಬೆಳೆ ಬಹುತೇಕ ನಾಶವಾಗಿದೆ. ಈ ಭಾಗದಲ್ಲಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ಹಾನಿ ಆಗಿದೆ. ಸಾಲ ಸೋಲ ಮಾಡಿ ಎಕರೆಗೆ 50ಸಾವಿರದಿಂದ ಲಕ್ಷದವರೆಗೆ ಖರ್ಚು ಮಾಡಿದ್ದೇವೆ. ಆದ್ರೆ, ಬೆಳೆ ಹಾನಿಯಿಂದ ವಿಷ ಕುಡಿಯುವ ಸ್ಥಿತಿ ಎದುರಾಗಿದೆ ಎಂದು ರೈತರು ಸಂಕಟ ತೋಡಿಕೊಳ್ಳುತ್ತಿದ್ದಾರೆ.

ಇನ್ನು ಕೈಗೆ ಬಂದ ಬೆಳೆ ಕಣ್ಮುಂದೆ ಹಾಳಾಗುವುದನ್ನು ನೋಡಲಾಗದೆ, ವಿವಿಧ ರಾಸಾಯನಿಕಗಳನ್ನು ತಂದು ಸಿಂಪಡಣೆ ಮಾಡಿದ್ದೇವೆ. ರಾಸಾಯನಿಕ ಸಿಂಪಡಣೆಗಾಗಿಯೇ ಲೆಕ್ಕವಿಲ್ಲದಷ್ಟು ಹಣವನ್ನೂ ಖರ್ಚು ಮಾಡಿದ್ದೇವೆ. ಆದ್ರೆ, ರಾಸಾಯನಿಕ ಸಿಂಪಡಣೆ ಬಳಿಕ ಮತ್ತಷ್ಟು ಹೆಚ್ಚಿನ ಬೆಳೆ ನಾಶವಾಗಿದೆ. ಹೀಗಾಗಿ, ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ರೇಷ್ಮೆ ಗೂಡಿನ ಬಾಕಿ ಹಣ ಕೊಡದೆ ಪ್ರಾಣ ಬೆದರಿಕೆ ಹಾಕಿದ ವ್ಯಾಪಾರಿ: ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತರು

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಕಳೆದ ಹದಿನೈದು ದಿನದಿಂದ ಜಡಿ ಮಳೆ ಸುರಿಯುತ್ತಿದೆ. ಪರಿಣಾಮ ಮೆಣಸಿನಕಾಯಿ ಬೆಳೆ ಬಹುತೇಕ ಹಾನಿಗೊಳಗಾಗಿದೆ. ಅಲ್ಲದೆ ಫರ್ಟಿಲೈಸರ್ಸ್​ನಲ್ಲಿ ಕೊಂಡು ಸಿಂಪಡಿಸಿದ ವಿವಿಧ ರಾಸಾಯನಿಕದಿಂದಲೂ ಬೆಳೆ ಹಾನಿಗೊಳಗಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಹೀಗಾಗಿ, ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us