ಹಳ್ಳಿಗಳಿಗೆ ಭೇಟಿಕೊಟ್ಟು ಸಮಸ್ಯೆ ಪರಿಹರಿಸಿ: ಡಿಸಿಗಳ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ
ಜಿಲ್ಲಾಧಿಕಾರಿಗಳು ಆಡಳಿತ ಯಂತ್ರದ ಬಹುಮಖ್ಯ ಕೊಂಡಿಯಾಗಿರುತ್ತಾರೆ. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿರುತ್ತಾರೆ. ಅಧಿಕಾರ ಮತ್ತು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಸಭೆ ನಡೆಸಿದರು. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಆಡಳಿತ ಯಂತ್ರದ ಬಹುಮಖ್ಯ ಕೊಂಡಿಯಾಗಿರುತ್ತಾರೆ. ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿರುತ್ತಾರೆ. ಅಧಿಕಾರ ಮತ್ತು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಕಾಲಿಕ ಮಳೆಯಿಂದ ಆಗಿರುವ ನಷ್ಟದ ಬಗ್ಗೆ ವಿಸ್ತೃತ ವರದಿ ನೀಡಲು, ರೈತರಿಗೆ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಮಳೆ, ನೆರೆಯಿಂದ ಮನೆಗಳಿಗೆ ಹಾನಿಯಾಗಿದ್ದರೆ ಪರಿಹಾರ ನೀಡಬೇಕು. ಫಲಾನುಭವಿಗಳು ಮನೆ ನಿರ್ಮಾಣ ಆರಂಭಿಸದಿದ್ದರೆ ಪರಿಶೀಲಿಸಬೇಕು. ಮನೆ ಬಿದ್ದ ಜಾಗ ಅಥವಾ ಬೇರೆಡೆ ನಿರ್ಮಿಸುತ್ತಿದ್ದರೆ ಸಮಸ್ಯೆಯಿಲ್ಲ. ಒಟ್ಟಾರೆ ನಿರಾಶ್ರಿತರಿಗೆ ಮನೆ ನೀಡಬೇಕೆನ್ನುವುದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಜಾಗ ಅಥವಾ ಗೋಮಾಳದಲ್ಲಿ ಮನೆ ನಿರ್ಮಿಸಿದ್ದರೆ ದಂಡ ವಿಧಿಸಿ ಸಕ್ರಮ ಮಾಡಿಕೊಡಲು ನಿಯಮ ಜಾರಿಗೊಳಿಸಲಾಗುವುದು. ತಹಶೀಲ್ದಾರ್ ಕೋರ್ಟ್, ಎಸಿ ಕೋರ್ಟ್ನಲ್ಲಿ ಪ್ರಕರಣಗಳು ಬಾಕಿಯಿದ್ದರೆ ಅತ್ತ ಗಮನಹರಿಸಬೇಕು. ಕೆಲ ಜಿಲ್ಲೆಗಳಲ್ಲಿ 15, 20 ವರ್ಷಗಳಿಂದ ಪ್ರಕರಣಗಳು ಬಾಕಿಯಿವೆ. ಪ್ರಕರಣಗಳು ಬೇಗ ಇತ್ಯರ್ಥವಾಗದಿದ್ದರೆ ನ್ಯಾಯದಾನ ವಿಳಂಬವಾಗಲಿದೆ ಎಂದು ದೂರಿದರು.
ಪ್ರಕರಣಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಬೇಕು. ಅಗತ್ಯ ಸಂಖ್ಯೆಯಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದರು. ಕಡತ ವಿಲೇವಾರಿ ಜವಾಬ್ದಾರಿಯನ್ನು ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ದಾಖಲೆ ನೀಡಲು ಸ್ವಾಮಿತ್ವ ಯೋಜನೆಯನ್ನು ಕೇಂದ್ರದ ಅನುದಾನದೊಂದಿಗೆ ಜಾರಿ ಮಾಡಲಾಗಿದೆ. ನಗರ ಪ್ರದೇಶ, ಗ್ರಾಮಾಂತರ ಪ್ರದೇಶಗಳಲ್ಲಿ ಸರ್ಕಾರವೇ ಭೂಮಿ ಖರೀದಿಸಿ ಸ್ಮಶಾನಕ್ಕೆ ಜಾಗ ನೀಡಲಿದೆ. ರಾಜ್ಯದಲ್ಲಿ ಪ್ರಸ್ತುತ 4,370 ಗ್ರಾಮಗಳಲ್ಲಿ ಸ್ಮಶಾನ ಭೂಮಿಗೆ ಮನವಿ ಬಂದಿದೆ ಎಂದು ತಿಳಿಸಿದರು.
ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರಿಗೆ ಪಿಂಚಣಿಯನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ತಲುಪಿಸಲು ಕ್ರಮ ಕೈಗೊಂಡಿದ್ದೇವೆ. ಬಡವರ ಚಿಕಿತ್ಸೆಗೆ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡುತ್ತೇವೆ. ರಾಜ್ಯದಲ್ಲಿ ಲಸಿಕಾಕರಣ ಶೇ 100ರಷ್ಟು ಮುಟ್ಟಲು ಅಗತ್ಯಕ್ರಮ ತೆಗೆದುಕೊಳ್ಳುತ್ತೇವೆ. ಗ್ರಾಮಾಂತರ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಲಸಿಕಾಕರಣ ಮಾಡುತ್ತೇವೆ ಎಂದರು. ಗ್ರಾಮಾಂತರ ಪ್ರದೇಶದ ಜನರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡದಿದ್ದರೂ ಎಲ್ಲ ಕೆಲಸಗಳೂ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಜನರನ್ನು ಕಚೇರಿಗೆ ತಿಂಗಳುಗಟ್ಟಲೆ ಅಲೆಸಬಾರದು. ಹಳ್ಳಿಗಳಿಗೆ ಜಿಲ್ಲಾಧಿಕಾರಿಗಳೇ ಸ್ವತಃ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕು. ಜನರ ಬಳಿಗೆ ಹೋದರೆ ಸರ್ಕಾರಿ ಸೇವೆಗೆ ಸೇರಿದ್ದು ಸಾರ್ಥಕವಾಗುತ್ತದೆ. ಸರ್ಕಾರದ ಯೋಜನೆಗಳು ಜನರಿಗೆ ಮುಟ್ಟಿದರೆ ಒಳ್ಳೆಯ ಹೆಸರು ಬರುತ್ತದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿಗಳು ಸಕಾರಾತ್ಮಕ ಧೋರಣೆಯೊಂದಿಗೆ ಕೆಲಸ ಮಾಡಬೇಕು. ಕಂದಾಯ ಸಚಿವರು ಗ್ರಾಮ ವಾಸ್ತವ್ಯ ಮಾಡಿ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಅದೇ ರೀತಿ ಜಿಲ್ಲಾಧಿಕಾರಿಗಳು ಜನರ ಬಳಿಗೆ ಹೋಗಿ ಸ್ಪಂದಿಸಬೇಕು ಎಂದರು.
ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಕಳೆದೆರೆಡು ದಿನಗಳಿಂದ ಜಿಲ್ಲಾಧಿಕಾರಿಗಳ ಜೊತೆ ಸಿಎಂ ಸಭೆ ಮಾಡಿದ್ದಾರೆ. ಸುಮಾರು ಐದಾರು ಗಂಟೆ ಕಾಲ ಜನಸ್ನೇಹ ಆಡಳಿತದ ಬಗ್ಗೆ ಚರ್ಚಿಸಲಾಗಿದೆ. ಕಡತ ವಿಲೇವಾರಿ ಪ್ರಕ್ರಿಯೆಗೆ ವೇಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವ ದಿನದಿಂದ ಜನರ ಮನೆಬಾಗಿಲಿಗೆ ದಾಖಲೆಗಳನ್ನು ತಲುಪಿಸುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ಹೇಳಿದರು.
ಐಪಿಎಸ್ ಅಧಿಕಾರಿಗಳ ಬಡ್ತಿ ತಡೆಹಿಡಿದ ಮುಖ್ಯಮಂತ್ರಿ ಐಪಿಎಸ್ ಅಧಿಕಾರಿಗಳ ಬಡ್ತಿ ಆದೇಶವನ್ನು ರಾಜ್ಯ ಸರ್ಕಾರ ತಡೆಹಿಡಿದಿದೆ. ಇದರಿಂದ ಬಡ್ತಿಗೆ ಅರ್ಹತೆ ಪಡೆದಿರುವ 25 ಅಧಿಕಾರಿಗಳಿಗೆ ಅಸಮಾಧಾನ ಉಂಟಾಗಿದೆ. ಐಜಿಯಿಂದ ಎಡಿಜಿ ಹುದ್ದೆಗೆ ಮೂವರು, ಡಿಐಜಿಯಿಂದ ಐಜಿ ಹಂತಕ್ಕೆ ನಾಲ್ವರು, ಎಸ್ಪಿಯಿಂದ ಡಿಐಜಿಗೆ ನಾಲ್ವರು ಪದೊನ್ನತಿ ಹೊಂದಬೇಕಿತ್ತು. ಪದೋನ್ನತಿಗೆ ತಡೆ ಹಿಡಿಯುವ ಸಿಎಂ ನಿರ್ಧಾರದ ಬಗ್ಗೆ ಐಪಿಎಸ್ ಅಧಿಕಾರಿಗಳ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಇದನ್ನೂ ಓದಿ: ಜಿಲ್ಲಾಧಿಕಾರಿಗಳಾಗಿ ಬಾಸಿಸಂ ಬಿಡಿ: ತುಂಬಾ ವಿನಯತೆ, ಎಚ್ಚರಿಕೆಯಿಂದ ಕೆಲಸ ಮಾಡಿ -ಸಿಎಂ ಬೊಮ್ಮಾಯಿ ತಾಕೀತು ಇದನ್ನೂ ಓದಿ: CM Basavaraj Bommai: ಒಮಿಕ್ರಾನ್ ಬಗ್ಗೆ ಮಾತನಾಡುವಾಗಲೇ ಕೆಮ್ಮಿದ ಸಿಎಂ ಬೊಮ್ಮಾಯಿ!
Published On - 3:52 pm, Fri, 31 December 21