ಧಾರಾಕಾರ ಮಳೆ, ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ
ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಂಗಾರು ಆರಂಭ ಇನ್ನಷ್ಟು ತೀವ್ರವಾಗಿದ್ದರೂ ಅಲರ್ಟ್ ಆಗಿರಬೇಕು, ಕಾಳಜಿ ಕೇಂದ್ರಗಳಲ್ಲಿ ಊಟೋಪಚಾರದ ವ್ಯವಸ್ಥೆ ಉತ್ತಮವಾಗಿರಬೇಕು ಎಂದು ಸೂಚಿಸಿದ್ದಾರೆ.
ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ (District Collector)ಗಳೊಂದಿಗೆ ಸಭೆ (Meeting) ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮೂರ್ನಾಲ್ಕು ಪ್ರಮುಖ ನಿರ್ದೇಶನಗಳನನ್ನು ನೀಡಿದ್ದಾರೆ. ಮುಂಗಾರು ಆರಂಭ ಇನ್ನಷ್ಟು ತೀವ್ರವಾಗಿದ್ದರೂ ಅಲರ್ಟ್ ಆಗಿರಬೇಕು, ಕಾಳಜಿ ಕೇಂದ್ರಗಳಲ್ಲಿ ಊಟೋಪಚಾರದ ವ್ಯವಸ್ಥೆ ಉತ್ತಮವಾಗಿರಬೇಕು, ಎಲ್ಲ ಉಪ ಕರಣಗಳ ಸಹಿತ ಜಿಲ್ಲೆಯಲ್ಲಿ ತ್ವರಿತ ಪರಿಹಾರ ಕಾರ್ಯಕ್ಕೆ ವಾಹನ ಸಿದ್ದವಾಗಿರಿಸಬೇಕು, ತಗ್ಗುಪ್ರದೇಶಗಳ ಜನರಿಗೆ ಮನವೊಲಿಸಿ ಸ್ಥಳಾಂತರ ಮಾಡಿಸಬೇಕು, ಭೂಕುಸಿತ ಸಂಭವಿಸಬಹುದಾದ ಸ್ಥಳಗಳ ಗುರುತು ಮಾಡಬೇಕು, ಯಾವುದೇ ಪ್ರಾಣಾಪಾಯ ಆಗದಂತೆ ನೋಡಿಕೊಳ್ಳಲು ಆದ್ಯತೆ ನೀಡಬೇಕು ಎಂದು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ.
ಗೃಹಕಚೇರಿ ಕೃಷ್ಣಾದಿಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ, ಪೊಲೀಸ್ ಅಧೀಕ್ಷಕರೊಂದಿಗೆ, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಹಾಗೂ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದರು. ಇದೇ ವೇಳೆ ಅವರು, ಕಳೆದ ಕೆಲವು ದಿನಗಳಲ್ಲಿ ಸುರಿದ ಮಳೆಯಿಂದಾದ ಹಾನಿಗಳ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡರು.
ಇದನ್ನೂ ಓದಿ: ಚಾರ್ಟೆಡ್ ಅಕೌಂಟೆಂಟ್ಸ್ ಇದ್ದಿದ್ದರಿಂದಲೇ ದೇಶಕ್ಕೆ ಅಕೌಂಟೇಬಿಲಿಟಿ ಬಂದಿದೆ: ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
ಜಿಲ್ಲೆಗಳಲ್ಲಿ ಸರಿಯುತ್ತಿರುವ ಮಳೆ, ಮಳೆಯಿಂದ ಆಗಿರುವ ಹಾನಿ, ಹಾನಿಗೆ ಕೈಗೊಂಡ ಪರಿಹಾರ ಕಾರ್ಯಗಳ ಬಗ್ಗೆ ಚರ್ಚೆ, ಬೇರೆ ರಾಜ್ಯಗಳಲ್ಲಿ ಸರಿಯುತ್ತಿರುವ ಮಳೆ, ಮುಂದಿನ ಮುಂಗಾರು ಮಳೆಗೆ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದರು. ಈ ವೇಳೆ ಅವರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಈ ವೇಳೆ ಕಂದಾಯ ಸಚಿವ ಆರ್.ಅಶೋಕ್, ವಸತಿ ಸಚಿವ ವಿ.ಸೋಮಣ್ಣ, ಇಂಧನ ಇಲಾಖೆ ಸಚಿವ ಸುನಿಲ್ ಕುಮಾರ್ ಸಭೆಯಲ್ಲಿ ಭಾಗಿಯಾದರು.
ಇದನ್ನೂ ಓದಿ: Kerala Rain: ಭಾರೀ ಮಳೆಯಿಂದ ಕೇರಳದ 10 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ; 2 ಡ್ಯಾಂಗಳ ಗೇಟ್ ಓಪನ್
ಜಿಲ್ಲಾಧಿಕಾರಿಗಳೊಂದಿಗಿನ ಸಭೆಯ ನಂತರ ಡಿಸಿಗಳಿಗೆ ನೀಡಿರುವ ಸೂಚನೆಗಳಿಗೆ ಸಂಬಂಧಿಸಿ ಯಾವುದೇ ಅಧಿಕೃತ ಹೇಳಿಕೆಯನ್ನು ಸಿಎಂ ಬೊಮ್ಮಾಯಿ ಮತ್ತು ಸಚಿವ ಆರ್.ಅಶೋಕ ಅವರು ನೀತಿ ಸಂಹಿತೆ ಕಾರಣಕ್ಕೆ ನೀಡಲು ನಿರಾಕರಿಸಿದರು.
ರಾತ್ರಿಯೊಳಗೆ ಸಚಿವರಿಗೆ ಜವಾಬ್ದಾರಿ
ಬೆಂಗಳೂರಿನಲ್ಲಿ ಮಳೆಯಿಂದಾಗುವ ಅವಾಂತರಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಇಂದು ಸಂಜೆ ಅಥವಾ ರಾತ್ರಿಯೊಳಗೆ ಸಚಿವರಿಗೆ ಜವಾಬ್ದಾರಿ ನೀಡುತ್ತೇವೆ. ಬೆಂಗಳೂರಿನ ಎಂಟು ವಲಯಗಳಿಗೆ ಎಂಟು ಮಂದಿ ಸಚಿವರ ನೇಮಕ ಮಾಡಲಾಗುವುದು. ರಾಜ್ಯಸಭೆ, ಪರಿಷತ್ ಟಿಕೆಟ್ ಸಂಬಂಧ ವರಿಷ್ಠರ ಜತೆ ಚರ್ಚಿಸಿದ್ದೇನೆ. 3ನೇ ಅಭ್ಯರ್ಥಿ ಸ್ಪರ್ಧೆ ಬಗ್ಗೆ ಇನ್ನೂ ಸಮಯಾವಕಾಶ ಇದೆ ಎಂದು ಸ್ಪಷ್ಟಪಡಿಸಿದರು.
ನಾಳೆ ಬೆಳಗ್ಗೆ ಸಿಎಂ ಬೊಮ್ಮಾಯಿ, ದಾವೋಸ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಿಎಂ, ನಾಳೆ ಬೆಳಗ್ಗೆ ದಾವೋಸ್‌ಗೆ ಹೋಗುತ್ತಿದ್ದೇನೆ. ಮೇ 26ರಂದು ದಾವೋಸ್‌ನಿಂದ ಬೆಂಗಳೂರಿಗೆ ವಾಪಸಾಗುವೆ. ಇನ್ವೆಸ್ಟ್ ಕರ್ನಾಟಕ ಸಂಬಂಧ ದಾವೋಸ್‌ನಲ್ಲಿ ಸಭೆ ನಡೆಸಲಿದ್ದೇವೆ ಎಂದು ಗೃಹಕಚೇರಿ ಕೃಷ್ಣಾದಲ್ಲಿ ತಿಳಿಸಿದರು.
ಸರ್ಕಾರಿ ಶಾಲೆಗೆ ನುಗ್ಗಿದ ನೀರು
ತುಮಕೂರು: ಭಾರಿ ಮಳೆಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ ಘಟನೆ ಜಿಲ್ಲೆಯ ಪಾವಗಡ ತಾಲೂಕಿನ ದೊಡ್ಡೇನಹಳ್ಳಿಯಲ್ಲಿ ನಡೆದಿದೆ. ಈ ಶಾಲೆಯಲ್ಲಿ ಒಟ್ಟು ಒಟ್ಟು 90 ವಿದ್ಯಾರ್ಥಿಗಳಿದ್ದಾರೆ. ಸುರಿದ ಭಾರಿ ಮಳೆಗೆ ಶಾಲೆಯ ಆವರಣ ಹಾಗೂ ಕೊಠಡಿಯೊಳಗೆ ನೀರು ನುಗ್ಗಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಮಳೆಗಾಲದಲ್ಲಿ ನೀರು ಶಾಲೆಯೊಳಗೆ ನುಗ್ಗುವ ವಿಚಾರವಾಗಿ ಹಲವು ವರ್ಷಗಳಿಂದ ಬಿಇಒ ಶಿಕ್ಷಣ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಶಾಲೆಯೊಳಗೆ ನೀರು ನುಗ್ಗದಂತೆ ಸರಿಪಡಿಸಬೇಕು ಎಂದು ಗ್ರಾಮಸ್ಥರು ಅಗ್ರಹಿಸಿದರು. ಅಲ್ಲದೆ, ಈ ಶಾಲೆಯಲ್ಲಿ ಕೊಠಡಿಗಳ ಹಾಗೂ ಶೌಚಾಲಯದ ಸಮಸ್ಯೆಗಳೂ ಇವೆ ಎಂದಿದ್ದಾರೆ.
ಇದನ್ನೂ ಓದಿ: ನಿರಂತರ ಮಳೆ, ಕಾಣೆಯಾದ ಜಿಲ್ಲಾ ಉಸ್ತುವಾರಿ ಸಚಿವ ಆರಗ ಜ್ಞಾನೇಂದ್ರ: ಜನಾಕ್ರೋಶ
ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ
Published On - 5:01 pm, Sat, 21 May 22