
ಬೆಂಗಳೂರು, ನವೆಂಬರ್ 06: ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಮೂರು ಕಂತಿನ ಹಣ ಬಿಡುಗಡೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಈಗಾಗಲೇ ಭರ್ಜರಿ ಗಿಫ್ಟ್ ನೀಡಿದೆ. ಈ ಬೆನ್ನಲ್ಲೇ ಇಂದು ಸಿಎಂ ಡಿಕೆ ಶಿವಕುಮಾರ್, ಗೃಹಕಚೇರಿ ಕೃಷ್ಣಾದಲ್ಲಿ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ತಾಯಂದಿರು ಮತ್ತು ಸಹೋದರಿಯರೊಂದಿಗೆ ಮುಕ್ತವಾಗಿ ಸಂವಾದ ನಡೆಸಿ, ಅವರ ಅನಿಸಿಕೆಗಳನ್ನು ಆಲಿಸಿದ್ದಾರೆ.
ಸರ್ಕಾರ ಮೊನ್ನೆಯಷ್ಟೇ 3 ತಿಂಗಳ ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡಿದೆ. ಆ ಮೂಲಕ ದೀಪಾವಳಿ ಸಮಯದಲ್ಲಿ ಮಹಿಳೆಯರಿಗೆ ಆರ್ಥಿಕ ನೆರವು ನೀಡಿದೆ. ಇನ್ನು ಗೃಹಲಕ್ಷ್ಮೀ ಯೋಜನೆಯ ಪ್ರಯೋಗದ ಬಗ್ಗೆ ಸಂವಾದದಲ್ಲಿ ಮಹಿಳಾ ಫಲಾನುಭವಿಗಳಿಂದ ಸಿಎಂ ಡಿಕೆ ಶಿವಕುಮಾರ್ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಫಲಾನುಭವಿಯೊಬ್ಬರು, ‘ಗೃಹಲಕ್ಷ್ಮೀ ಯೋಜನೆ ಹಣದಲ್ಲಿ ಮಕ್ಕಳನ್ನು ಓದಿಸಿದ್ದೇನೆ. ದ್ವಿತೀಯ ಪಿಯುಸಿಯಲ್ಲಿ ಮಗ ಶೇ.98ರಷ್ಟು ಅಂಕ ಪಡೆದಿದ್ದಾನೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿ’ ಹಾರೈಸಿದರು.
ಮತ್ತೊಬ್ಬರು ಫಲಾನುಭವಿ ಮಾತನಾಡಿ, ‘ಗೃಹಲಕ್ಷ್ಮೀ ಯೋಜನೆಯಿಂದ ನಮಗೆ ಆರ್ಥಿಕ ಸಹಾಯವಾಗಿದೆ. ಆ ಹಣದಿಂದ ಸಣ್ಣಪುಟ್ಟ ವ್ಯವಹಾರ ಆರಂಭಿಸಿದ್ದೇನೆ. ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ ವ್ಯಾಪಾರ ಮಾಡುತ್ತಿದ್ದೇನೆ. ಜಿಲ್ಲೆ, ರಾಜ್ಯ, ವಿದೇಶಕ್ಕೂ ರಫ್ತು ಮಾಡುತ್ತಿದ್ದೇನೆ’ ಎಂದರು. ಈ ವೇಳೆ ‘ನನಗೂ ಕೋಡುಬಳೆ ತಂದಿದ್ಯಾ’ ಎಂದ ಡಿಕೆ ಶಿವಕುಮಾರು ಕೇಳಿದರು.
ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘ಹೆಣ್ಮಗಳಿಗೆ ಸಹಾಯ ಮಾಡಬೇಕು ಅಂತ ನಾವು ಗೃಹಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದಿದ್ದೇವೆ. 36 ತಿಂಗಳು ಕೊಟ್ಟಿದ್ದೇವೆ. ಮುಂದೆ ಯಾರೂ ಸಹ ಈ ಯೋಜನೆಯನ್ನ ನಿಲ್ಲಿಸುವುದಕ್ಕೆ ಆಗಲ್ಲ. ನಮ್ಮನ್ನ ನೋಡಿ ಮಹಾರಾಷ್ಟ್ರ, ಮಧ್ಯಪ್ರವೇಶದಲ್ಲೂ ಯೋಜನೆ ಮಾಡಿದ್ದಾರೆ. ಬೆಳಗಾವಿ ಅಧಿವೇಶನ ಶುರುವಾಗುವುದರೊಳಗೆ ಹೆಣ್ಮಗಳನ್ನ ಮಂತ್ರಿ ಮಾಡುತ್ತೇನೆ. ನಿಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ, ಅದೇ ಆಸ್ತಿ. ನಿಮ್ಕ ಆಶೀರ್ವಾದ ನನ್ನ ಮೇಲೆ ಇರಲಿ’ ಎಂದಿದ್ದಾರೆ.
ಇದನ್ನೂ ಓದಿ: ಗೃಹಲಕ್ಷ್ಮೀ ಹಣ ವಿತರಣೆಗೆ ಆರ್ಥಿಕ ಸಮಸ್ಯೆ ಒಪ್ಪಿಕೊಂಡ ರಾಜ್ಯ ಸರ್ಕಾರ, ಪ್ರಮಾಣ ಪತ್ರದಲ್ಲೇನಿದೆ?
‘ಒಟ್ಟು 86 ಸಾವಿರ ಕೋಟಿ ರೂ ಹಣ ಗೃಹಲಕ್ಷ್ಮೀಯರಿಗೆ ತಲುಪಿದೆ. ಫಲಾನುಭವಿಗಳ ಫೋನ್ ನಂಬರ್ ಬೇರೆ ಬೇರೆ ಇತ್ತು. ಸತ್ತು ಹೋಗಿರುವವರ ಅಕೌಂಟ್ಗೂ ಹಣ ಹೋಗಿದೆ. ಆ ಹಣ ಯಾರು ಹೇಗೆ ಉಪಯೋಗಿಸಿಕೊಂಡರು ಎನ್ನುವುದು ಗೊತ್ತಾಗಲಿಲ್ಲ. ಹಾಗಾಗಿ ಗೃಹಲಕ್ಷ್ಮೀ ಯೋಜನೆಗೆ ಫಿಲ್ಟರ್ ಮಾಡಿದ್ದವು. ನಾವು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿದ್ದೇವೆ. ಕೆಲವರು ವ್ಯಾಪಾರ ಶುರು ಮಾಡಿದ್ದಾರೆ. ಕೆಲವರು ಹಣದಲ್ಲಿ ಉಳಿತಾಯ ಮಾಡಿದ್ದಾರೆ. ಕೆಲವರು ಕುಟುಂಬದ ನಿರ್ವಹಣೆ ಮಾಡಿದ್ದಾರೆ’ ಎಂದರು.
‘ಕೆಲವರು ಗೃಹಲಕ್ಷ್ಮೀ ಯೋಜನೆಯ ಮೀಟರ್ ಬಡ್ಡಿ ಆಸೆಗೆ ಹಣ ಕೊಟ್ಟು ಮೋಸ ಹೋಗುತ್ತಿದ್ದಾರೆ. ಮೀಟರ್ ಬಡ್ಡಿ ಹಣದ ಆಸೆಗೆ ಬೀಳಬೇಡಿ ಎಂದು ಹೇಳಿದ್ದೇನೆ. ಗೃಹಲಕ್ಷ್ಮೀ ಹಣವನ್ನು ಚಿಟ್ ಫಂಡ್ನಲ್ಲಿ ಹಾಕಿ ಕಳೆದುಕೊಳ್ತಿದ್ದಾರೆ. ಹಾಗಾಗಿ ಹೆಚ್ಚಿನ ಹಣದ ಆಸೆಗೆ ಬಿದ್ದು ಚಿಟ್ಫಂಡ್ಗೆ ಹಾಕದಂತೆ ಹೇಳಿರುವೆ. ಯಾರೊಬ್ಬರೂ ಅಧಿಕ ಬಡ್ಡಿ, ಚಿಟ್ ಫಂಡ್ ಆಸೆಗೆ ಬೀಳಬಾರದು ಎಂದಿರುವ ಸಿಎಂ ಹಣ ಕಳೆದುಕೊಂಡವರ ಪ್ರಕರಣ ಉಲ್ಲೇಖಿಸಿ ಸಲಹೆ ಕೂಡ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.