ಗೃಹಲಕ್ಷ್ಮೀ ಹಣ ವಿತರಣೆಗೆ ಆರ್ಥಿಕ ಸಮಸ್ಯೆ ಒಪ್ಪಿಕೊಂಡ ರಾಜ್ಯ ಸರ್ಕಾರ, ಪ್ರಮಾಣ ಪತ್ರದಲ್ಲೇನಿದೆ?
ರಾಜ್ಯದ ಗೃಹಲಕ್ಷ್ಮಿ ಯೋಜನೆಯ 34, 35 ಮತ್ತು 36ನೇ ಕಂತುಗಳನ್ನು ರಾಜ್ಯ ಸರ್ಕಾರ ಒಟ್ಟಿಗೆ ಬಿಡುಗಡೆ ಮಾಡಿದೆ. ಆದ್ರೆ, 2025ರ ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮೀ ಬಾಕಿ ಹಣ ಇನ್ನೂ ಬಿಡುಗಡೆ ಮಾಡಿಲ್ಲ. ಸುಮಾರು 5000 ಕೋಟಿ ರೂ. ಎಲ್ಲೋಯ್ತು ಎಂದು ವಿಪಕ್ಷಗಳು ಪ್ರಶ್ನಿಸಿದೆ. ಈ ಸಂಬಂಧ ಕೋರ್ಟ್ನಲ್ಲಿ ಪಿಐಎಲ್ ಅರ್ಜಿ ವಿಚಾರಣೆ ನಡೆದಿದ್ದು, ಈ ವೇಳೆ ರಾಜ್ಯ ಸರ್ಕಾರ ಆರ್ಥಿಕ ಸಮಸ್ಯೆ ಬಗ್ಗೆ ಹೇಳಿಕೊಂಡಿದೆ.

ಬೆಂಗಳೂರು, (ನವೆಂಬರ್ 05): ಗ್ಯಾರಂಟಿ ಯೋಜನೆಗಳಿಂದಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ ಎನ್ನುವ ಚರ್ಚೆಗಳು ನಡೆಯುತ್ತಿದ್ದು, ಆರ್ಥಿಕ ದಿವಾಳಿ ಎದ್ದಿದೆ ಎಂದು ವಿಪಕ್ಷಗಳು ಟೀಕಿಸುತ್ತಿವೆ. ಆದ್ರೆ, ಆಡಳಿತರೂಢ ಶಾಸಕರು ಆದಿಯಾಗಿ ಮುಖ್ಯಮಂತ್ರಿ ಮಾತ್ರ ಆ ರೀತಿ ಆರ್ಥಿಕ ಸಮಸ್ಯೆ ಇಲ್ಲ ಎಂದು ಮಾಧ್ಯಮಗಳ ಮುಂದೆ ಸಮಜಾಯಿಷಿ ನೀಡುತ್ತಲೇ ಇದ್ದಾರೆ. ಆದ್ರೆ, ಇದೀಗ ಸ್ವತಃ ರಾಜ್ಯ ಸರ್ಕಾರವೇ, ಕೋರ್ಟ್ ಮುಂದೆ ಗೃಹಲಕ್ಷ್ಮೀ ಹಣ ವಿತರಣೆಗೆ ಆರ್ಥಿಕ ಸಮಸ್ಯೆ ಬಗ್ಗೆ ಒಪ್ಪಿಕೊಂಡಿದೆ. ಹೌದು.. ಹಣಕಾಸಿನ ಸಮಸ್ಯೆಯಿಂದ 2025ರ ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮೀ ಹಣ ಬಿಡುಗಡೆಯಾಗಿಲ್ಲ ಎಂದು ಹೈಕೋರ್ಟ್ಗೆ ರಾಜ್ಯ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ.
ಆರ್ಥಿಕ ಸಮಸ್ಯೆ ಒಪ್ಪಿಕೊಂಡ ಸರ್ಕಾರ
ಕಮಲಾನಗರದ ಆರ್.ಗಂಗಾ, ನಂದಿನಿಲೇಔಟ್ನ ಜಿ.ಡಿ.ಪವಿತ್ರಾ ಎಂಬುವರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ನಡೆಸಿದ್ದು, ಈ ವೇಳೆ 2025ರ ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮೀ ಬಾಕಿ ಹಣ ಬಿಡುಗಡೆಯಾಗಿಲ್ಲ. ಹಣಕಾಸಿನ ಸಮಸ್ಯೆಯಿಂದ 2 ತಿಂಗಳ ಗೃಹಲಕ್ಷ್ಮೀ ಹಣ ಬಿಡುಗಡೆಯಾಗಿಲ್ಲ ಎಂದು ಸ್ತ್ರೀಶಕ್ತಿ ಯೋಜನಾಧಿಕಾರಿ ಸೋನಲ್ ಎಸ್.ಐಗರ್ ಅವರು ಹೈಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಸರ್ಕಾರ, ಗೃಹಲಕ್ಷ್ಮೀ ಹಣ ವಿತರಣೆಗೆ ಆರ್ಥಿಕ ಸಮಸ್ಯೆ ಒಪ್ಪಿಕೊಂಡಂತಾಗಿದೆ.
ಇದನ್ನೂ ಓದಿ: ‘ಗೃಹಲಕ್ಷ್ಮೀ‘ಯರಿಗೆ ದೀಪಾವಳಿ ಗಿಫ್ಟ್ ನೀಡಿದ ರಾಜ್ಯ ಸರ್ಕಾರ: 3 ಕಂತುಗಳ ಹಣ ಬಿಡುಗಡೆ
ಫಲಾನುಭವಿಯ ಹಕ್ಕೆಂಬಂತೆ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗದು
ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿರುವ ಸರ್ಕಾರ, ಮಹಿಳೆಯರ ಉಪಯೋಗಕ್ಕಾಗಿ ಜಾರಿಗೆ ತಂದಿರುವ ಗೃಹಲಕ್ಷ್ಮೀ ಯೋಜನೆ. 2025ರ ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮೀ ಬಾಕಿ ಹಣ ಬಿಡುಗಡೆಯಾಗಿಲ್ಲ. ಫಲಾನುಭವಿಯ ಹಕ್ಕೆಂಬಂತೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗದು. ಸರ್ಕಾರ ಹಣಕಾಸಿನ ಕೊರತೆಯಿಂದ 2 ತಿಂಗಳ ಗೃಹಲಕ್ಷ್ಮೀ ಹಣ ವಿತರಿಸಿಲ್ಲ. ಹಣಕಾಸಿನ ನೆರವನ್ನು ಕಾನೂನುಬದ್ಧ ನಿರೀಕ್ಷೆಯ ಹಕ್ಕಂತೆ ಕೇಳಲಾಗದು. ಹೀಗಾಗಿ ಹಣ ಬಿಡುಗಡೆ ಕೋರಿದ್ದ ಪಿಐಎಲ್ ವಜಾಕ್ಕೆ ಸರ್ಕಾರದ ಪರ ವಕೀಲರು ಮನವಿ ಮಾಡಿದ್ದಾರೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್, ಅರ್ಜಿದಾರರಿಗೆ 2 ವಾರ ಸಮಯ ನೀಡಿ ವಿಚಾರಣೆ ಮುಂದೂಡಿತು.
ನಕಲಿ ಖಾತೆಗಳ ಆರೋಪ ನಿರಾಕರಣೆ
ಒಂದೇ ಫಲಾನುಭವಿಗೆ ಎರಡು ಖಾತೆಗಳ ಮೂಲಕ ಹಣ ಹೋಗಿದೆ ಎಂಬ ಆರೋಪವನ್ನು ಸರ್ಕಾರ ಸಂಪೂರ್ಣವಾಗಿ ನಿರಾಕರಿಸಿದೆ. ಹಣ ಪಾವತಿಯು ‘ಆಧಾರ್ ಆಧಾರಿತ ಪಾವತಿ ವ್ಯವಸ್ಥೆ’ ಮೂಲಕ ನಡೆಯುತ್ತಿರುವುದರಿಂದ ಒಬ್ಬರಿಗೆ ಎರಡು ಬಾರಿ ಹಣ ಜಮೆಯಾಗಲು ತಾಂತ್ರಿಕವಾಗಿ ಸಾಧ್ಯವಿಲ್ಲ. ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪಾವತಿದಾರರನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕುವ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದ್ದು, ಅರ್ಹ ಬಡ ಮಹಿಳೆಯರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಎರಡು ತಿಂಗಳ ಒಟ್ಟು 5000 ಕೋಟಿ ರೂ. ಬಾಕಿ
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಮಹಿಳೆಯರಿಗೆ ಪ್ರತಿ ತಿಂಗಳು 2,000 ನೀಡುವುದಾಗಿ ಭರವಸೆ ನೀಡಿತ್ತು. ಅಧಿಕಾರಕ್ಕೆ ಬಂದ ನಂತರ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಆದರೆ 2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳನ್ನು ಸರ್ಕಾರ ಪಾವತಿಸಿಲ್ಲ. ಸುಮಾರು 1.26 ಕೋಟಿ ಫಲಾನುಭವಿಗಳನ್ನು ಪರಿಗಣಿಸಿದರೆ ಒಟ್ಟು ಮೊತ್ತ 5,000 ಕೋಟಿ ರೂಪಾಯಿಗೂ ಅಧಿಕ ಹಣ ಎಲ್ಲೋಯ್ತು ಎನ್ನುವುದು ವಿಪಕ್ಷಗಳು ಪ್ರಶ್ನಿಸಿದ್ದವು. ಈ ಸಂಬಂಧ ಪ್ರತಿಭಟನೆ, ಅಧಿವೇಶನದಲ್ಲೂ ಸಹ ಚರ್ಚೆಗೆ ಬಂದಿತ್ತು.




