ಶಾಸಕರಿಗೆ 50 ಕೋಟಿ ರೂ ಅನುದಾನಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ: ರಸ್ತೆ ನಿರ್ಮಾಣಕ್ಕೆ ಬಳಸುವಂತೆ ಸೂಚನೆ

ಸಿಎಂ ಸಿದ್ದರಾಮಯ್ಯ ಬೆಂಗಳೂರು ನಗರದ ಶಾಸಕರೊಂದಿಗೆ ನಡೆಸಿದ ಸಭೆಯಲ್ಲಿ, ಬೆಂಗಳೂರಿನ ರಸ್ತೆಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿ ರೂ. ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದ್ದು, ಈ ಅನುದಾನವನ್ನು ರಸ್ತೆ ದುರಸ್ತಿ ಮತ್ತು ಹೊಸ ರಸ್ತೆ ನಿರ್ಮಾಣಕ್ಕೆ ಬಳಸಬೇಕೆಂದು ಸೂಚಿಸಿದ್ದಾರೆ.

ಶಾಸಕರಿಗೆ 50 ಕೋಟಿ ರೂ ಅನುದಾನಕ್ಕೆ ಸಿಎಂ ಸಿದ್ದರಾಮಯ್ಯ ಒಪ್ಪಿಗೆ: ರಸ್ತೆ ನಿರ್ಮಾಣಕ್ಕೆ ಬಳಸುವಂತೆ ಸೂಚನೆ
ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ
Updated By: ಗಂಗಾಧರ​ ಬ. ಸಾಬೋಜಿ

Updated on: Sep 11, 2025 | 1:40 PM

ಬೆಂಗಳೂರು, ಸೆಪ್ಟೆಂಬರ್ 11: ಇತ್ತೀಚೆಗೆ ಶಾಸಕರ ಕ್ಷೇತ್ರಗಳಿಗೆ ತಲಾ 50 ಕೋಟಿ ರೂ. ವಿಶೇಷ ಅನುದಾನ (grant) ಬಿಡುಗಡೆ ಮಾಡುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ (Siddaramaiah), ಇದೀಗ ಅದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಬೆಂಗಳೂರು ಶಾಸಕರ ಜೊತೆ ಬುಧವಾರ ಸಭೆ ಮಾಡಿರುವ ಸಿಎಂ ಸಿದ್ದರಾಮಯ್ಯ, ರಸ್ತೆ ದುರಸ್ತಿ, ನೂತನ ರಸ್ತೆ ನಿರ್ಮಾಣಕ್ಕೆ ಅನುದಾನ ಬಳಸುವಂತೆ ಶಾಸಕರಿಗೆ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ನಿನ್ನೆ ಸಿಎಂ ಸಿದ್ದರಾಮಯ್ಯ ಪ್ರಮುಖವಾಗಿ ಅನುದಾನ ಹಂಚಿಕೆ ವಿಚಾರವಾಗಿ ಬೆಂಗಳೂರು ಭಾಗದ ಶಾಸಕರೊಂದಿಗೆ ಚರ್ಚೆ ಮಾಡಿದರು. ಈ ವೇಳೆ ಶಾಸಕರ ಕುಂದು ಕೊರತೆಯನ್ನ ಆಲಿಸಿದರು. ಈಗಾಗಲೇ ಮೂರು ಹಂತದಲ್ಲಿ ಸಭೆ ಮಾಡಿದ್ದು, ಶಾಸಕರು, ಪರಿಷತ್ ಸದಸ್ಯರ ಜೊತೆಗೂ ಸಿಎಂ ಮೀಟಿಂಗ್ ಮಾಡಿದರು.

ಇದನ್ನೂ ಓದಿ: ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ ಮಹತ್ವದ ತೀರ್ಮಾನ: ಸಿಎಂ ನೇತೃತ್ವದಲ್ಲಿ ನಡೆದ ಸಭೆಯ ಮುಖ್ಯಾಂಶಗಳು ಇಲ್ಲಿವೆ

ಈ ಕುರಿತಾಗಿ ಟ್ವೀಟ್​ ಮಾಡಿರುವ ಸಿಎಂ ಸಿದ್ದರಾಮಯ್ಯ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಸಚಿವರು ಹಾಗೂ ಶಾಸಕರ ಜೊತೆ ಸುದೀರ್ಘ ಸಭೆ ನಡೆಸಿ, ಗ್ಯಾರಂಟಿ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿಯ ಮಾಹಿತಿ ಪಡೆದು, ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸ ಕಾರ್ಯಗಳ ಬೇಡಿಕೆಯನ್ನು ಆಲಿಸಿ, ಅಗತ್ಯ ಸಹಕಾರ ಹಾಗೂ ಅನುದಾನ ಒದಗಿಸುವುದಾಗಿ ತಿಳಿಸಿದ್ದರು.

ಸಿಎಂ ಸಿದ್ದರಾಮಯ್ಯ ಟ್ವೀಟ್​

ಬೆಂಗಳೂರಿನ ರಸ್ತೆ, ಒಳಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯವಿರುವ ಅನುದಾನವನ್ನು ಒದಗಿಸಿ, ಜನರ ಜೀವನಮಟ್ಟ ಸುಧಾರಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಕಾಮಗಾರಿಗಳ ಅನುಷ್ಠಾನದಲ್ಲಿ ಅಕ್ರಮ: ತನಿಖಾ ವರದಿ ಸಲ್ಲಿಕೆ, ಕಾನೂನು ಕ್ರಮಕ್ಕೆ ಶಿಫಾರಸು

ಸಿಎಂ ಅವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರಗಳಿಗೆ 50 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಹಣ ಬಿಡುಗಡೆ ಮಾಡಲು ಕಾಮಗಾರಿ ವಿವರ ನೀಡುವಂತೆ ಎಲ್ಲಾ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಪತ್ರ ಬರೆದಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:39 pm, Thu, 11 September 25