AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಚಕಘಟ್ಟ ತಲುಪಿದ ಧರ್ಮಸ್ಥಳ ಬುರುಡೆ ಪ್ರಕರಣ: 6 ಮಂದಿಗೆ ತಪ್ಪದ ಸಂಕಷ್ಟ, ಎಸ್​ಐಟಿಯಿಂದ ತೀವ್ರ ವಿಚಾರಣೆ

ಧರ್ಮಸ್ಥಳ ಬುರುಡೆ ಪ್ರಕರಣದ ತನಿಖೆಯನ್ನು ಎಸ್ಐಟಿ ಚುರುಕುಗೊಳಿಸಿದೆ. ಸದ್ಯ ಮಾಸ್ಕ್​ಮ್ಯಾನ್ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿಗೆ ಸ್ಥಳಾಂತರಿಸಲಾಗಿದೆ. ಗಿರೀಶ್ ಮಟ್ಟಣ್ಣನವರ್, ಜಯಂತ್, ವಿಠ್ಠಲ ಗೌಡ, ಪ್ರದೀಪ್, ಅಬಿಷೇಕ್ ಮತ್ತು ಮನಾಫ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದರೆ ಬಂಧನದ ಸಾಧ್ಯತೆ ಇದೆ.

ರೋಚಕಘಟ್ಟ ತಲುಪಿದ ಧರ್ಮಸ್ಥಳ ಬುರುಡೆ ಪ್ರಕರಣ: 6 ಮಂದಿಗೆ ತಪ್ಪದ ಸಂಕಷ್ಟ, ಎಸ್​ಐಟಿಯಿಂದ ತೀವ್ರ ವಿಚಾರಣೆ
ಧರ್ಮಸ್ಥಳ ಬುರುಡೆ ಪ್ರಕರಣ: 6 ಮಂದಿಗೆ ತಪ್ಪದ ಸಂಕಷ್ಟ
ಅಶೋಕ್​ ಪೂಜಾರಿ, ಮಂಗಳೂರು
| Updated By: Ganapathi Sharma|

Updated on: Sep 11, 2025 | 2:23 PM

Share

ಮಂಗಳೂರು, ಸೆಪ್ಟೆಂಬರ್ 11: ಧರ್ಮಸ್ಥಳ ಬುರುಡೆ ಪ್ರಕರಣ (Dharmasthala Case) ತನಿಖೆ ಚುರುಕುಗೊಳಿಸಿರುವ ಎಸ್ಐಟಿ, ಈಗಾಗಲೇ ಬುರುಡೆ ಚಿನ್ನಯ್ಯನನ್ನು ತೀವ್ರ ವಿಚಾರಣೆಗೊಳಪಡಿಸಿ ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಿದೆ. ಚಿನ್ನಯ್ಯ ನೀಡಿದ ಹೇಳಿಕೆ ಆಧರಿಸಿ ಹಲವರ ವಿಚಾರಣೆಯನ್ನು ತೀವ್ರಗೊಳಿಸಲಾಗಿದ್ದು, ಯಾವುದೇ ಕ್ಷಣದಲ್ಲಿ ಗ್ಯಾಂಗ್‌ನ ಹಲವರನ್ನು ಬಂಧಿಸುವ ಸಾಧ್ಯತೆ ಇದೆ. ಬುರುಡೆ ಕೇಸ್‌ನಲ್ಲಿ 6 ಮಂದಿಗೆ ಸಂಕಷ್ಟ ಎದುರಾಗಿದೆ.

ಬುರುಡೆ ಕೇಸ್‌ನಲ್ಲಿ ಗಿರೀಶ್ ಮಟ್ಟಣ್ಣನವರ್​​ನನ್ನು ಕಳೆದ 7 ದಿನದಿಂದ ವಿಚಾರಣೆಗೆ ಒಳಪಡಿಸಲಾಗಿದೆ. ಗುರುವಾರ ಕೂಡಾ ವಿಚಾರಣೆ ಮಾಡಲಾಗಿದೆ. ಜಯಂತ್‌ರನ್ನು 8 ದಿನದಿಂದ ಗ್ರಿಲ್ ಮಾಡಲಾಗುತ್ತಿದ್ದು, ಇಂದೂ ವಿಚಾರಣೆ ಎದುರಿಸಿದ್ದಾರೆ. ಸೌಜನ್ಯ ಮಾವ ವಿಠ್ಠಲ ಗೌಡ ಮತ್ತು ಅವರ ಕಾರು ಚಾಲಕ ಪ್ರದೀಪ್‌ನನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಯೂಟ್ಯೂಬರ್ ಅಬಿಷೇಕ್​ಗೆ 7 ದಿನ ಹಾಗೆಯೇ ಕೇರಳ ಯೂಟ್ಯೂಬರ್ ಮನಾಫ್​ಗೆ 3 ದಿನ ಗ್ರಿಲ್ ಮಾಡಲಾಗಿದೆ.

ಹೇಳಿಕೆಗಳಲ್ಲಿ ವ್ಯಾತ್ಯಾಸ ಕಂಡು ಬಂದರೆ ಬಂಧನ ಸಾಧ್ಯತೆ

ಪ್ರತಿಯೊಬ್ಬರನ್ನೂ ತೀವ್ರವಾಗಿ ವಿಚಾರಣೆ ಮಾಡಲಾಗುತ್ತಿದ್ದು, ಹೇಳಿಕೆಗಳಲ್ಲಿ ವ್ಯಾತ್ಯಾಸ ಕಂಡು ಬಂದರೆ ಬಂಧಿಸುವ ಸಾಧ್ಯತೆ ಇದೆ. ಬಿಎನ್​ಎಸ್ ಕಾಯ್ದೆ 161 ರಡಿ 6 ಮಂದಿ ಹೇಳಿಕೆಯನ್ನು ದಾಖಲಿಸಲಾಗುತ್ತಿದ್ದು, ಬಲವಾದ ಸಾಕ್ಷ್ಯ ಸಿಕ್ಕಿದರೆ ಬಂಧಿಸಿ ವಿಚಾರಣೆ ನಡೆಸಲು ಎಸ್ಐಟಿ ಸಿದ್ಧತೆ ನಡೆಸಿದೆ.

ಬುರುಡೆ ಗ್ಯಾಂಗ್​ಗೆ ತಪ್ಪದ ಸಂಕಷ್ಟ

ಬುರುಡೆ ಕೇಸ್ ತನಿಖೆಯಲ್ಲಿ ಎಲ್ಲರನ್ನೂ ಕರೆಸಿ ವಿಚಾರಣೆ ಮಾಡಲಾ ಗುತ್ತಿದೆ. ಸಾಕ್ಷಿದಾರ, ಸಂಬಂಧಿತ ವ್ಯಕ್ತಿಯನ್ನು ಕರೆಸಿ ವಿಚಾರಣೆ ಮಾಡಲಾಗುತ್ತಿದ್ದು, ವಿಚಾರಣೆ ವೇಳೆ ವ್ಯಕ್ತಿಗೆ ತಿಳಿದಿರುವ ಮಾಹಿತಿ ನೀಡಬೇಕು. ಹೇಳಿಕೆಯನ್ನು ಲಿಖಿತವಾಗಿ ಅಧಿಕಾರಿ ದಾಖಲಿಕೊಳ್ಳುತ್ತಾರೆ. ಹೇಳಿಕೆಯಲ್ಲಿ ವ್ಯತ್ಯಾಸ ಕಂಡುಬಂದರೆ ಮಾತ್ರ ಬಂಧನ ಮಾಡಬಹುದು. ಯಾರಾದರೂ ವ್ಯತ್ಯಾಸದ ಹೇಳಿಕೆ ಕೊಟ್ಟರೆ ಮತ್ತೆ ವಿಚಾರಣೆ ನಡೆಸಿ, ಹೊಸ ಸಾಕ್ಷ್ಯ ಸಿಕ್ಕರೆ ಮತ್ತೆ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಇದಾದ ಬಳಿಕವೂ ಹೇಳಿಕೆಯಲ್ಲಿ ವ್ಯಾತ್ಯಾಸ ಬಂದರೆ, ಆರೋಪಿಯಾಗಿ ಪರಿಗಣಿಸಿ ಬಿಎನ್​ಎಸ್ ಕಾಯ್ದೆಯ ಸೆಕ್ಷನ್ 41ರಡಿ ಬಂಧಿಸಲಾಗುತ್ತದೆ. ಬಂಧನ ಮಾಡಿ ವಿಚಾರಣೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಏತನ್ಮಧ್ಯೆ, ಎಸ್ಐಟಿ ವಿಚಾರಣೆಗೆ ನಾವು ಸಹಕಾರ ಕೊಡುತ್ತಿದ್ದೇವೆ. ದಾಖಲೆಗಳನ್ನೂ ನೀಡಿದ್ದೇವೆ ಎಂದು ಜಯಂತ್ ಹೇಳಿದ್ದಾರೆ. ಎಸ್‌ಐಟಿಯವರಿಗೆ ಸುಳ್ಳು ಹೇಳಲು ಆಗಲ್ಲ. ಸುಳ್ಳು ಹೇಳಿದರೆ ಲಾಕ್ ಆಗಬೇಕಾಗತ್ತದೆ ಎಂದಿದ್ದಾರೆ.

ಯೂಟ್ಯೂಬರ್ ವಿಚಾರಣೆ ಅಂತ್ಯಗೊಳಿಸಿ ಕಳುಹಿಸಿದ ಎಸ್​ಐಟಿ

ಕೇರಳ ಯೂಟ್ಯೂಬರ್ ಮನಾಫ್ ಮತ್ತು ಅಭಿಷೇಕ್‌ ವಿಚಾರಣೆ ನಡೆಸಿದ ಎಸ್ಐಟಿ ಇಬ್ಬರ ಹೇಳಿಕೆ ದಾಖಲಿಸಿಕೊಂಡು ವಾಪಸ್ ಕಳುಹಿಸಿದೆ. ನೋಟಿಸ್ ಕೊಟ್ಟಾಗ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಇನ್ ಕ್ಯಾಮರಾದಲ್ಲಿ ಇಬ್ಬರ ಹೇಳಿಕೆ ದಾಖಲಿಸಲಾಗಿದ್ದು, ಅಭಿಷೇಕ್​​ ಲ್ಯಾಪ್​ಟಾಪ್, 2 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.

ಬುರುಡೆ ತಂದು ಕೊಟ್ಟಿದ್ದ ಸೌಜನ್ಯ ಮಾವ ವಿಠ್ಠಲ ಗೌಡನನ್ನು ಬಂಗ್ಲೆಗುಡ್ಡಕ್ಕೆ ಕರೆದೊಯ್ದು ಬುಧವಾರ ಮಹಜರು ಮಾಡಲಾಗಿತ್ತು. ಒಂದೂವರೆ ಗಂಟೆ ಮಹಜರು ನಡೆಸಿ ಹೇಳಿಕೆ ದಾಖಲಿಸಲಾಗಿತ್ತು. ಮಟ್ಟಣ್ಣನವರ್ ಸೂಚನೆಯಂತೆ ಬುರುಡೆ ತಂದಿದ್ದ ವಿಠ್ಠಲ ಗೌಡಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ವಿಠ್ಠಲಗೌಡಗೆ ಬುರುಡೆ ಉರುಳು!

ಒಂದು ವರ್ಷದ ಹಿಂದೆ ಬುರುಡೆ ತಂದಿದ್ದ ವಿಠ್ಠಲ ಗೌಡ ಮತ್ತು ಪ್ರದೀಪ್, ಬಂಗ್ಲೆಗುಡ್ಡ ಕಾಡಂಚಿನಲ್ಲಿ ಬುರುಡೆ ಅಡಗಿಸಿಟ್ಟಿದ್ದರು ಎನ್ನಲಾಗಿದೆ. ಒಂದು ಕಡೆಯಿಂದ ಬುರುಡೆ ತೆಗೆದು ಮತ್ತೊಂದು ಕಡೆ, ಅಂದರೆ ದಟ್ಟಾರಣ್ಯದ ಮಧ್ಯೆ ಬುರುಡೆ ಇಟ್ಟಿದ್ದರು. ಮಟ್ಟಣ್ಣನವರ್ ನಿರ್ದೇಶನದಂತೆ ಅಡಗಿಸಿಟ್ಟಿದ್ದ ಬುರುಡೆಯನ್ನು ವಿಠ್ಠಲ ಗೌಡ ತಂದಿದ್ದ. ತರುವಾಗ ಬುರುಡೆ ತೆಗೆದು ಚೀಲಕ್ಕೆ ತುಂಬಿಸುವ ವಿಡಿಯೋವನ್ನು ಮಾಡಿಕೊಂಡಿದ್ದರು. ಬುರುಡೆ ಅಡಗಿಸಿಟ್ಟಿದ್ದ ಜಾಗವನ್ನ ವಿಠ್ಠಲ ಗೌಡ ಮಹಜರು ವೇಳೆ ತೋರಿಸಿದ್ದಾನೆ.

ಇದನ್ನೂ ಓದಿ: ಧರ್ಮಸ್ಥಳ ವಿರೋಧಿ ಅಭಿಯಾನದ ಮೂಲ ಸಂಚುಕೋರರು ಸಿಗುವುದು ಕಷ್ಟ: ಎಸ್​ಐಟಿಗಿದೆ ತಾಂತ್ರಿಕ ಸಂಕಷ್ಟ

ಸದ್ಯ ಎಲ್ಲರ ಹೇಳಿಕೆ ದಾಖಲಿಸಿಕೊಂಡಿರುವ ಎಸ್ಐಟಿ, ಅವುಗಳನ್ನನು ತಾಳೆ ಹಾಕುತ್ತಿದೆ. ವ್ಯಾತ್ಯಾಸ ಕಂಡು ಬಂದರೆ ಬಂಧಿಸಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ