
ಬೆಂಗಳೂರು, ಜುಲೈ 18: ಅನುದಾನ ಸಿಗುತ್ತಿಲ್ಲ ಎಂಬ ಶಾಸಕರ ಅಸಮಾಧಾನ ತಣಿಸಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ (Siddaramaiah), ಕೊನೆಗೂ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ. ಕಾಂಗ್ರೆಸ್ (Congress) ಶಾಸಕರ ಕ್ಷೇತ್ರಕ್ಕೆ ತಲಾ 50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿ ಅನುದಾನ ಬಿಡುಗಡೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ರಸ್ತೆ, ಸೇತುವೆ, ಕಾಮಗಾರಿ, ಗ್ರಾಮೀಣ ರಸ್ತೆ, ನಗರ ಕಾಮಗಾರಿಗಳಿಗೆ 37.5 ಕೋಟಿ ರೂ. ಮೀಸಲು ಇಡಲಾಗಿದ್ದು, 12.5 ಕೋಟಿ ರೂ. ಅನುದಾನ ಶಾಸಕರ ವಿವೇಚನಾಧಿಕಾರಕ್ಕೆ ಮೀಸಲು ಇಡಲಾಗಿದೆ.
ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಜುಲೈ 30, 31ರಂದು ಶಾಸಕರ ಜತೆ ಸಭೆ ನಡೆಸಲಿದ್ದಾರೆ. ಶಾಸಕರು ಬೇಡಿಕೆ ಪತ್ರದೊಂದಿಗೆ ಕಾಮಗಾರಿ ವಿವರ ನೀಡಲು ಸೂಚನೆ ನೀಡಲಾಗಿದೆ.
ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಬೆಂಗಳೂರಿಗೆ ಬಂದು ಶಾಸಕರ ಹಾಗೂ ಸಚಿವರ ಜತೆ ಒನ್ ಟು ಒನ್ ಮಾತುಕತೆ ನಡೆಸಿದ ಬೆನ್ನಲ್ಲೇ ಸಿದ್ದರಾಮಯ್ಯ ಈ ಕ್ರಮ ಕೈಗೊಂಡಿದ್ದಾರೆ.
‘2025-26 ಸಾಲಿನ ರಾಜ್ಯ ಆಯವ್ಯಯದಲ್ಲಿ ಘೋಷಿಸಲಾದ ಮುಖ್ಯಮಂತ್ರಿಯವರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆ ಅಡಿಯಲ್ಲಿ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ.ಗಳ ವಿಶೇಷ ಅನುದಾನ ಹಂಚಿಕೆ ಮಾಡಲಾಗುವುದು. ಮುಖ್ಯಮಂತ್ರಿಯವರಿಗೆ ಬರೆದ ತಮ್ಮ ಬೇಡಿಕೆ ಪತ್ರದೊಂದಿಗೆ, ಇದರೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಕಾಮಗಾರಿಗಳ ವಿವರಗಳನ್ನು ನೀಡುವುದು. ದಿನಾಂಕ:30.07.2025 ಹಾಗೂ ದಿನಾಂಕ:31.07.2025ರಂದು ಜಿಲ್ಲಾವಾರು ವಿಧಾನಸಭಾ ಸದಸ್ಯರ ಸಭೆಯನ್ನು ಕೊಠಡಿ ಸಂಖ್ಯೆ-313, ಸಮಿತಿ ಕೊಠಡಿ, 3ನೇ ಮಹಡಿ, ವಿಧಾನಸೌಧ ಇಲ್ಲಿ ಏರ್ಪಡಿಸಲಾಗಿದೆ. ಸದರಿ ಸಭೆಯ ವಿವರಗಳನ್ನು ಈ ಪತ್ರದೊಂದಿಗೆ ಲಗತ್ತಿಸಿದ್ದು, ಮೇಲ್ಕಂಡಂತೆ ಕಾಮಗಾರಿಗಳ ವಿವರಗಳೊಂದಿಗೆ ಸಭೆಗೆ ಹಾಜರಾಗುವುದು’ ಎಂದು ಸಿದ್ದರಾಮಯ್ಯ ಅವರ ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಅನುದಾನ ಬಿಡುಗಡೆ ವಿಚಾರವಾಗಿ ಕಾಂಗ್ರಸ್ನ ಎಲ್ಲ ಶಾಸಕರಿಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಅದೇ ರೀತಿ, ಶಾಸಕಾಂಗ ಪಕ್ಷದ ಕಚೇರಿಯಿಂದಲೂ ಶಾಸಕರಿಗೆ ಮಾಹಿತಿ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಂಚ ಪ್ರಶ್ನೆ.. 60 ದಿನಗಳ ಟಾರ್ಗೆಟ್.. ಶಿಸ್ತಿನ ಪಾಠ: ಕಾಂಗ್ರೆಸ್ ಸಭೆಯ ಇನ್ಸೈಡ್ ಡಿಟೇಲ್ಸ್
ತಮ್ಮ ಕ್ಷೇತ್ರಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ ಎಂಬ ಆಕ್ರೋಶವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಕೆಲವು ಮಂದಿ ಶಾಸಕರು ವ್ಯಕ್ತಪಡಿಸಿದ್ದರು. ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಯೋಜನೆಗಳಿಗೆ ಎಂಬುದಾಗಿಯೂ ಕೆಲವರು ಹೇಳಿಕೊಂಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಶಾಸಕರ ಸಿಟ್ಟನ್ನು ತಣಿಸಲು ಮುಂದಾಗಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Fri, 18 July 25