ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು, ಬೆಳಗಾವಿ ಸರ್ಕ್ಯೂಟ್ ಹೌಸ್​​ಗೆ ದೌಡಾಯಿಸಿದ ನಾಯಕರು

ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನದಲ್ಲಿ ಭಾರೀ ಚರ್ಚೆಯಾಗುತ್ತಿರುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನದಿಂದ ಸದನಕ್ಕೆ ಗೈರಾಗಿದ್ದು, ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಸಿಎಂ ಅವರ ಆರೋಗ್ಯ ವಿಚಾರಿಸಲು ನಾಯಕರು ದೌಡಾಯಿಸಿದ್ದಾರೆ. ಅಷ್ಟಕ್ಕೂ ಸಿಎಂಗೆ ಆಗಿದ್ದೇನು? ಪುತ್ರ ಯತೀಂದ್ರ ಹೇಳಿದ್ದೇನು ಎನ್ನುವ ವಿವರ ಈ ಕೆಳಗಿನಂತಿದೆ.

ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರು, ಬೆಳಗಾವಿ ಸರ್ಕ್ಯೂಟ್ ಹೌಸ್​​ಗೆ ದೌಡಾಯಿಸಿದ ನಾಯಕರು

Updated on: Dec 17, 2025 | 7:52 PM

ಬೆಳಗಾವಿ, (ಡಿಸೆಂಬರ್ 17): ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಆರೋಗ್ಯದಲ್ಲಿ (Health) ಏರುಪೇರು ಆಗಿದೆ. ಈ ಹಿನ್ನಲೆಯಲ್ಲಿ ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ (Belagavi Session) ಭಾಗಿಯಾಗದೇ ಬೆಳಗಾವಿಯ (Belagavi) ಸರ್ಕ್ಯೂಟ್ ಹೌಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂದು ಸಂಜೆ ನಿಗದಿಯಾಗಿದ್ದ ಯಾವುದೇ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿಲ್ಲ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಶಾಸಕರು, ಸಚಿವರುಗಳು ಸರ್ಕ್ಯೂಟ್ ಹೌಸ್​​ಗೆ ದೌಡಾಯಿಸಿ ಸಿಎಂ ಆರೋಗ್ಯ ವಿಚಾರಿಸಿದ್ದಾರೆ.

ಬುಧವಾರ ಮಧ್ಯಾಹ್ನದ ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಅವರು ಅಧಿವೇಶನಕ್ಕೆ ಹೋಗದೆ ಸರ್ಕ್ಯೂಟ್ ಹೌಸ್‌ನಲ್ಲಿ  ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸಂಜೆಯವರೆಗೆ ನಿಗದಿಯಾಗಿದ್ದ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸರ್ಕ್ಯೂಟ್ ಹೌಸ್‌ಗೆ ಧಾವಿಸಿ ತಂದೆಯ ಆರೋಗ್ಯ ವಿಚಾರಿಸಿದ್ದಾರೆ.

ಇದನ್ನೂ ಓದಿ: ಸಚಿವ ಕೃಷ್ಣಭೈರೇಗೌಡ ವಿರುದ್ಧ 21 ಎಕರೆ ಜಮೀನು ಕಬಳಿಕೆ ಆರೋಪ: ಬಿಜೆಪಿಯಿಂದ ದಾಖಲೆ ಬಿಡುಗಡೆ

ತಂದೆ ಆರೋಗ್ಯದ ಬಗ್ಗೆ ಯತೀಂದ್ರ ಹೇಳಿದ್ದಿಷ್ಟು

ತಂದೆ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ತಂದೆಯವರ ಆರೋಗ್ಯ ಚೆನ್ನಾಗಿದೆ. ಗ್ಯಾಸ್ಟ್ರೋಕೇಷನ್ ಇನ್ಫೆಕ್ಸನ್ ಆಗಿದೆ. ಡೈರಿಯಾ ಸಮಸ್ಯೆ ತರ ಆಗಿದೆ. ವೈದ್ಯರು ತಪಾಸಣೆ ಮಾಡಿ ಮಾತ್ರೆಗಳನ್ನು ಕೊಟ್ಟಿದ್ದು, ಸದ್ಯ ವಿಶ್ರಾಂತಿ ಪಡೆಯುತ್ತಿದ್ದು, ನಾಳೆ ಅಧಿವೇಶನಕ್ಕೆ ಬರ್ತಾರೆ ಎಂದ ಸ್ಪಷ್ಟಪಡಿಸಿದರು.

ಸಿಎಂ ಆರೋಗ್ಯ ವಿಚಾರಿಸಿದ ವಿಪಕ್ಷ ನಾಯಕರು

ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರುಪೇರಾದ ಸುದ್ದಿ ಹರಡುತ್ತಿದ್ದಂತೆ ವಿವಿಧ ಪಕ್ಷಗಳ ನಾಯಕರು ಸರ್ಕ್ಯೂಟ್ ಹೌಸ್‌ಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ವಿಶೇಷವಾಗಿ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಏಕಾಂಗಿಯಾಗಿ ಬಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಭೇಟಿಯ ಬಳಿಕ ಮಾತನಾಡಿದ ಜಾರಕಿಹೊಳಿ, ‘ಇದು ಕೇವಲ ಸೌಜನ್ಯದ ಭೇಟಿ. ಸಿಎಂ ಅವರಿಗೆ ಧೈರ್ಯ ಹೇಳುವ ಅವಶ್ಯಕತೆಯಿಲ್ಲ, ಅವರೇ ನಮಗೆ ಧೈರ್ಯ ಹೇಳುವಷ್ಟು ಗಟ್ಟಿಯಾಗಿದ್ದಾರೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮತ್ತೊಂದೆಡೆ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ಕೂಡ ಸಿಎಂ ಅವರನ್ನು ಭೇಟಿ ಮಾಡಿದರು. ‘ಚಾಮುಂಡೇಶ್ವರಿ ಕ್ಷೇತ್ರದ ಏತ ನೀರಾವರಿ ಯೋಜನೆ ಹಾಗೂ ಗ್ರೇಟರ್ ಮೈಸೂರು ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿದ್ದೇನೆ. ಸಿಎಂ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದು, ನಾಳೆ ಅವರು ಸದನಕ್ಕೆ ಬರಲಿದ್ದಾರೆ ಎಂದು ಜಿಟಿಡಿ ತಿಳಿಸಿದರು.

ಸಚಿವ ಬೈರತಿ ಸುರೇಶ್ ಸ್ಪಷ್ಟನೆ

ಮುಖ್ಯಮಂತ್ರಿಗಳ ಆಪ್ತ ಸಚಿವ ಬೈರತಿ ಸುರೇಶ್ ಅವರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ‘ಸಿಎಂ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಅವರು ಚೆನ್ನಾಗಿದ್ದಾರೆ. ಅವರ ಜೊತೆಗೆ ನಾನು ಊಟ ಮಾಡಿ ಬಂದಿದ್ದೇನೆ. ನಾಳೆ ಸದನದಲ್ಲಿ ಹಲವು ಪ್ರಮುಖ ವಿಷಯಗಳಿಗೆ ಸಿಎಂ ಉತ್ತರ ನೀಡಬೇಕಿದೆ. ಹೀಗಾಗಿ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಅವರು ಪರಿಶೀಲಿಸುತ್ತಿದ್ದಾರೆ ಎಂದು ಗೊಂದಲಗಳಿಗೆ ತೆರೆ ಎಳೆದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ