ಮುಡಾ ಪ್ರಕರಣದಲ್ಲಿ ನೀವೇ ಅರೆಸ್ಟ್ ಆಗಬಹುದು, ಸಿದ್ದರಾಮಯ್ಯ ಬಗ್ಗೆ ಜೋಶಿ ಅಚ್ಚರಿ ಹೇಳಿಕೆ
‘ಮುಡಾ’ ಹಗರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಬಿಜೆಪಿ ಇಂದು (ಜುಲೈ 12) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದೆ. ಆದ್ರೆ, ಪೊಲೀಸರು ಬಿಜೆಪಿ ನಾಯಕರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಿದರು. ಇನ್ನು ಬಿಜೆಪಿ ನಾಯಕರ ಬಂಧನಕ್ಕೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದು, ಮುಡಾ ಪ್ರಕರಣದಲ್ಲಿ ನೀವೇ ಅರೆಸ್ಟ್ ಆಗಬಹುದು ಎಂದು ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, (ಜುಲೈ 12): ಸಿದ್ದರಾಮಯ್ಯನವರೇ ನೀವು ನಮ್ಮನ್ನು ಬಂಧಿಸುತ್ತೀರಾ? ಮುಡಾ ಪ್ರಕರಣದಲ್ಲಿ ನೀವೇ ಅರೆಸ್ಟ್ ಆಗಬಹುದು. ಅಗತ್ಯ ಬಿದ್ದರೆ ಈ ಪ್ರಕರಣದಲ್ಲಿ ನಾವು ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಸೈಟ್ ಧರ್ಮಪತ್ನಿ ಹೆಸರಲ್ಲಿದೆ ಅಂತಾರೆ. ನೀವು ಅಧಿಕಾರಕ್ಕೆ ಬಂದ ಕೂಡಲೇ ಇದನ್ನು ಗಮನಿಸಿ ವಾಪಸ್ ಕೊಡಬೇಕಿತ್ತು. ಈಗ 50:50 ಅನುಪಾತವೇ ಇಲ್ಲ. ನಿಮಗೆ ಜಮೀನು ಕೊಟ್ಟವನ ಅಸ್ತಿತ್ವವೇ ಯಕ್ಷ ಪ್ರಶ್ನೆಯಾಗಿದೆ. ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗ್ರಹಿಸಿದರು.
ಮುಡಾ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಮೈಸೂರು ಚಲೋಗೆ ಪೊಲೀಸರ ತಡೆದ ವಿಚಾರದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಜೋಶಿ, 1985ರಲ್ಲಿ ಇಂದಿರಾಗಾಂಧಿ ಸರ್ವಾಧಿಕಾರಿಯಾಗಿದ್ದರು. 2023-24ರಲ್ಲಿ ಸಿದ್ದರಾಮಯ್ಯ ಸರ್ವಾಧಿಕಾರಿ ಆಗಿದ್ದಾರೆ. ನಮಗೆ ಹೋರಾಟ ಮಾಡಲು ಹಕ್ಕು ಇಲ್ವಾ? ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಕಮಾಂಡ್ ಇದ್ದರೆ, ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಯನ್ನು ಪಡೆಯಿರಿ ಎಂದು ಹೇಳಿರುವ ಜೋಶಿ, ಸಿದ್ದರಾಮಯ್ಯರೇ ಇಂದಿರಾ ಗಾಂಧಿ ಸಹ ಹೀಗೇ ಇದ್ದರು. ನನ್ನನ್ನು ತಡೆಯುವವರು ಯಾರೂ ಇಲ್ಲವೆಂದು ಭಾವಿಸಿದ್ದರು ಎಂದು ಕಿರಿಕಾಡಿದರು.
ಇದನ್ನೂ ಓದಿ: ನಾನೇನಾದ್ರು ದಾಖಲೆ ತಂದಿದ್ರೆ ರಾಜೀನಾಮೆ ಕೊಡ್ತೀನಿ: ಸಚಿವ ಭೈರತಿ ಸುರೇಶ್ ಸವಾಲು
ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಹೈಕಮಾಂಡ್‌ಗೆ ಮರ್ಯಾದೆ ಇದ್ದರೆ ಕೂಡಲೇ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ನಿಮಗೆ ಜಮೀನು ಕೊಟ್ಟವನ ಅಸ್ತಿತ್ವವೇ ಯಕ್ಷ ಪ್ರಶ್ನೆಯಾಗಿದೆ. ರಾಹುಲ್ ಗಾಂಧಿ ಸಂವಿಧಾನದಡಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಹಗರಣಕ್ಕೆ ನೀವೇನು ಹೇಳ್ತೀರಿ? ಕರ್ನಾಟಕದಲ್ಲಿ ನೂರಾರು ಕೋಟಿ ರೂ. ಭ್ರಷ್ಟಾಚಾರ ನಡೆದಿದೆ. ವರ್ಗಾವಣೆಯಲ್ಲಿ ಭ್ರಷ್ಟಾಚಾರ ಎಂದು ಸ್ವತಃ ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿಯೇ ಹೇಳಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸಿದ್ದರಾಮಯ್ಯ 2023ರ ಚುನಾವಣಾ ಅಫಿಡವಿಟ್ ನಲ್ಲಿ 8 ಕೋಟಿ ರೂ. ಘೋಷಣೆ ಮಾಡಿ ಈಗ 62 ಕೋಟಿ ರೂ ಬರಬೇಕಿತ್ತು ಎನ್ನುತ್ತಾರೆ. ಇಷ್ಟೊಂದು ಬೆಲೆ ಒಂದು ವರ್ಷದಲ್ಲಿ ಆಗಲು ಸಾಧ್ಯವೇ? ಬಿಜೆಪಿ ವಿರುದ್ಧ ಸುಳ್ಳು ಆರೋಪದ ಮೇಲೆ ಜಾಮೀನು ಪಡೆದು, ಕ್ಷಮೆ ಕೇಳುವ ಹಂತಕ್ಕೆ ಬಂದಿದ್ದಾರೆ. ಸತತವಾಗಿ ಭ್ರಷ್ಟಾಚಾರ, ಭ್ರಷ್ಟಾಚಾರ, ಭ್ರಷ್ಟಾಚಾರ. ಕಾಂಗ್ರೆಸ್ ಡಿಎನ್ಎ ಹೇಗೆ ಬಿಡಲು ಆಗುತ್ತದೆ? ಅದಕ್ಕೆ ಪರಮ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಹೇಳಿದರು.
ಇವರ ಸರ್ಕಾರದಲ್ಲಿ ಈ ಹಿಂದೆಯೂ ಕೂಡಾ ಕಾಂಟ್ರಾಕ್ಟರ್ ಮನೆಯಲ್ಲಿ ನೂರಾರು ಕೋಟಿ ರೂ. ಸಿಕ್ಕಿದೆ. ಅತ್ಯಂತ ಐಶಾರಾಮಿ ಕಾರು ತೆಗೆದುಕೊಂಡು, ಗೋಣಿ ಚೀಲಗಳಲ್ಲಿ ದುಡ್ಡು ಮಾಡಿದ್ದಾರೆ. ಅವರಿಗೆ ಈವರೆಗೂ ಎಸ್ ಐಟಿ ನೋಟೀಸ್ ಕೊಡುವ ಕೆಲಸ ಮಾಡಿಲ್ಲ. ಅವರನ್ನು ಎಸ್ ಐಟಿ ಹೋಟೆಲ್‌ಗೆ ಕರೆದು ಚಹಾ ಕುಡಿಸಿ ಕಳಿಸಿತು. ಯಾವಾಗ ಇಡಿ ನಾಗೇಂದ್ರ ವಶಕ್ಕೆ ಪಡೆಯಿತೋ ಮತ್ತೊಬ್ಬ ಶಾಸಕ ದದ್ದಲ್ ಎಸ್ ಐಟಿಗೆ ಹೋಗಿ ಕುಳಿತಿದ್ದಾರೆ. ಸಿದ್ದರಾಮಯ್ಯ ಅವರನ್ನು ರಕ್ಷಣೆ ಮಾಡುವ ಕೆಲಸ. ಮಾಡುತ್ತಿದ್ದಾರೆ. ಎಲ್ಲಿ ಇಡಿ ಬಂಧನ ಮಾಡುತ್ತಾರೋ ಎಂದು ಹೋಗಿ ಎಸ್ ಐಟಿ ನಲ್ಲಿ ಕುಳಿತಿದ್ದಾರೆ ಎಂದು ಲೇವಡಿ ಮಾಡಿದರು.
ಸಿಎಂಗೂ ನೀಡಲಿ ನೋಟಿಸ್: ವಾಲ್ಮೀಕಿ ಅಭಿವೃದ್ದಿ ನಿಗಮದ ಭ್ರಷ್ಟಾಚಾರ ಹಗರಣದಲ್ಲಿ ಸಿಎಂ ಅವರಿಗೂ SIT ನೋಟಿಸ್ ನೀಡಬೇಕು ಮತ್ತು ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಪ್ರಲ್ಹಾದ ಜೋಶಿ ಒತ್ತಾಯಿಸಿದರು.
ಸಿಎಂ ನೇರ ಹೊಣೆ: ಇನ್ನು, ಮೂಡಾ ಹಗರಣದಲ್ಲಿ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿದೆ. ಅವರ ಹಸ್ತಕ್ಷೇಪ, ಭಾಗಿ ಇಲ್ಲದೇ ಇರಲು ಸಾಧ್ಯವಿಲ್ಲ. ಹಾಗಾಗಿ ಇದರಲ್ಲಿ ಸಿಎಂ ವಿರುದ್ಧ ನೇರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಮೈಸೂರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ. ಅವರ ಭಾಗಿತ್ವ ಇಲ್ಲದೇ ಈ ಮಟ್ಟದ ಭ್ರಷ್ಟಾಚಾರ ಅಸಾಧ್ಯ. ಅವರಿಗೆ ಗೊತ್ತಿದ್ದೆ ವಂಚನೆ ನಡೆದಿದೆ. ಮೂಡಾ ಹಗರಣದಲ್ಲಿ ಸಿಎಂ ನೈತಿಕ ಹೊಣೆ ಹೊರಬೇಕು. ಈ ಎರಡೂ ಬಹು ದೊಡ್ಡ ಹಗರಣದಲ್ಲಿ ಸಿಎಂ ವಿರುದ್ಧ ತನಿಖೆ ಆಗಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:42 pm, Fri, 12 July 24