ಧಾರವಾಡ: ಮಾಹಾಮಾರಿ ಕೊರೊನಾ ಜನರನ್ನು ಬೆನ್ನುಬಿಡದೆ ಕಾಡುತ್ತಿದೆ. ನಿರ್ಲಕ್ಷ್ಯವಹಿಸುತ್ತಿರುವವರನ್ನು ಹುಡುಕಿ ಹುಡುಕಿ ದೇಹ ಸೇರುತ್ತಿದೆ. ಹೀಗಾಗಿ ಸರ್ಕಾರ ಸಹ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ತರಗತಿ ಪರೀಕ್ಷೆಗಳನ್ನು ಮುಂದೂಡುತ್ತಿದೆ. ಮುಂದಿನ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳ ಕಾಳಜಿಗಾಗಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಆದ್ರೆ ಸರ್ಕಾರದ ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಧಾರವಾಡದ ಶ್ರೀನಗರ ವೃತ್ತದ ಬಳಿಯ ವಿದ್ಯಾಕಾಶಿ ಕರಿಯರ್ ಅಕಾಡೆಮಿ ಪರೀಕ್ಷೆ ಆಯೋಜನೆ ಮಾಡಿದೆ. ಱಂಕ್ ಬಂದವರಿಗೆ ಬಹುಮಾನ ನೀಡುವುದಾಗಿ ಪ್ರಚಾರ ಮಾಡಿದೆ. ಹೀಗಾಗಿ ಧಾರವಾಡ ಉಪನಗರ ಠಾಣೆ ಪೊಲೀಸರು ಸಂಸ್ಥೆ ಮೇಲೆ ದಾಳಿ ನಡೆಸಿ ಪರೀಕ್ಷೆ ನಿಲ್ಲಿಸಿದ್ದಾರೆ.
ಕೊರೊನಾದ 2ನೇ ಅಲೆಯ ಭೀಕರತೆಯ ನಡುವೆಯೂ ವಿದ್ಯಾಕಾಶಿ ಕರಿಯರ್ ಅಕಾಡೆಮಿ ಸಂಸ್ಥೆ ಬೇಜವಾಬ್ದಾರಿತನದಿಂದ ವರ್ತಿಸಿದೆ. ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿದೆ. ಱಂಕ್ ಬಂದವರಿಗೆ ಬಹುಮಾನ ನೀಡುವುದಾಗಿ ಪ್ರಚಾರ ಮಾಡಿ ಪರೀಕ್ಷೆ ಆಯೋಜನೆ ಮಾಡಿದೆ. ಇದನ್ನು ತಿಳಿದ ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಒಟ್ಟುಗೂಡಿದ್ದಾರೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಮರೆತು ಸ್ಯಾನಿಟೈಸರ್ ಬಳಸದೇ ಪರೀಕ್ಷೆ ಬರೆಯಲು ಒಳಗಡೆ ನುಗ್ಗಿದ್ದಾರೆ. ಇನ್ನು ಪರೀಕ್ಷೆ ಆಯೋಜಿಸಿದ ಸಂಸ್ಥೆ ಸಹ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ. ಕೊರೊನಾ ಮಾರ್ಗಸೂಚಿ ಉಲ್ಲಂಘಿಸಿದೆ.
ಸದ್ಯ ಮಹಾನಗರ ಪಾಲಿಕೆ ಸಿಬ್ಬಂದಿ ಹಾಗೂ ಉಪನಗರ ಠಾಣಾ ಪೊಲೀಸರು ಸಂಸ್ಥೆ ಮೇಲೆ ದಾಳಿ ನಡೆದಿ ಪರೀಕ್ಷೆ ನಿಲ್ಲಿಸಿದ್ದಾರೆ. ಇನ್ನು ಸ್ಪರ್ಧಾತ್ಮಕ ಮಾದರಿ ಪರೀಕ್ಷೆ ನಡೆಸಲಾಗುತ್ತಿದ್ದು ಮೊದಲ ಬಹುಮಾನ ರೂ 75,000/-, ಎರಡನೇ ಬಹುಮಾನ ರೂ 50,000/-, ಮೂರನೇ ಬಹುಮಾನ ರೂ 25,000/- ಎಂದು ಸಂಸ್ಥೆ ಘೋಷಣೆ ಮಾಡಿತ್ತು. ಕೊರೊನಾದಿಂದ ರಾಜ್ಯದಲ್ಲಿ ನೂರಾರು ಜನ ಮೃತಪಡುತ್ತಿದ್ದಾರೆ. ಹಾಗೂ ಕೊರೊನಾ ಸಾವಿರಾರು ಜನರ ದೇಹ ಸೇರುತ್ತಿದೆ. ಸೋಂಕಿಗೆ ಕಡಿವಾಣ ಹಾಕಲು ಸರ್ಕಾರ ಪ್ರಯತ್ನಪಡುತ್ತಿದೆ. ಈ ಮಧ್ಯೆ ಕೆಲ ಸಂಸ್ಥೆಗಳು ವಿದ್ಯಾರ್ಥಿಗಳ ಜೀವದ ಜೊತೆ ಆಟವಾಡುತ್ತಿದೆ.
ಇದನ್ನೂ ಓದಿ:Viral Video: ಬಿಯರ್ ಬಾಟಲಿ ಮುಚ್ಚಳ ತೆಗೆಯಲು ಸಿಂಪಲ್ ವಿಧಾನ; ಕಾಲಲ್ಲಿ ಶೂ ಇದ್ದರೆ ಸಾಕು !