ಬೆಂಗಳೂರು: ಕರ್ನಾಟಕದಲ್ಲಿ ವಿದ್ಯುತ್ ಬೆಲೆ ಏರಿಕೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಖಂಡಿಸಿದ್ದಾರೆ. ರಾಜ್ಯ ಸರ್ಕಾರವು ಜನರ ಸಂಕಷ್ಟದ ಹಸಿಗಾಯದ ಮೇಲೆ ವಿದ್ಯುತ್ ದರ ಏರಿಕೆಯ ಬರೆ ಎಳೆದಿದೆ. ಈಗಾಗಲೇ ಕೊರೊನಾ ಸೋಂಕು, ಲಾಕ್ಡೌನ್ನಿಂದಾಗಿ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಉತ್ಪಾದನೆಯಿಲ್ಲದೆ ಉದ್ಯಮಿಗಳಿಗೂ ಕಷ್ಟ-ನಷ್ಟ ಉಂಟಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗಾಗಲೇ ₹100 ದಾಟಿದೆ. 2014ರಲ್ಲಿ ₹ 400 ಇದ್ದ LPG ಸಿಲಿಂಡರ್ ದರ ಈಗ ₹ 850 ಆಗಿದೆ. ಬಿಜೆಪಿ ಸರ್ಕಾರ ಜನರ ನೆರವಿಗೆ ಬರುತ್ತಿಲ್ಲ. ಬದಲಾಗಿ ಅವರಿಗೆ ಬರೆ ಎಳೆದಿದೆ. ಸರ್ಕಾರ ವಿದ್ಯುತ್ ಶುಲ್ಕ ಹೆಚ್ಚಿಸಿರುವುದರಿಂದ ಹಸಿಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಹೇಳಿದ್ದಾರೆ.
ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ವಿದ್ಯುತ್ ದರ ಎರಡು ಮೂರು ಪಟ್ಟು ಹೆಚ್ಚಾಗಿದೆ. ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರ್ಕಾರ ನೀಡಿರುವ ಕಾರಣಗಳು ಜನರನ್ನು ತಪ್ಪುದಾರಿಗೆ ಎಳೆಯುವಂತಿದೆ. ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳು ಇಂದು ನಷ್ಟದಲ್ಲಿದ್ದರೆ ಅದಕ್ಕೆ ರಾಜ್ಯ ಸರ್ಕಾರದ ಅದಕ್ಷತೆ, ಭ್ರಷ್ಟಾಚಾರ ಮತ್ತು ಕಾರ್ಪೋರೇಟ್ ಕಂಪೆನಿಗಳ ಓಲೈಕೆಯೇ ಕಾರಣ. ಸಮರ್ಥನೀಯವಲ್ಲದ, ಅವೈಜ್ಞಾನಿಕ ಮತ್ತು ಜನವಿರೋಧಿಯಾಗಿರುವ ವಿದ್ಯುತ್ ದರ ಹೆಚ್ಚಳವನ್ನು ರಾಜ್ಯ ಸರ್ಕಾರ ತಕ್ಷಣ ಹಿಂದಕ್ಕೆ ಪಡೆಯದಿದ್ದರೆ ಕಾಂಗ್ರೆಸ್ ಪಕ್ಷ ರಾಜ್ಯದಾದ್ಯಂತ ತೀವ್ರ ಸ್ವರೂಪದ ಪ್ರತಿಭಟನೆಯನ್ನು ನಡೆಸಲಿದೆ ಎಂದು ಅವರು ವಿವರಿಸಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ಕೊರತೆ ಇಲ್ಲ. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿನ ವಿದ್ಯುತ್ ಕ್ಷೇತ್ರದ ಸುಧಾರಣೆ ಮತ್ತು ಕಾರ್ಯಗತಗೊಳಿಸಿದ ಹೊಸ ಯೋಜನೆಗಳಿಂದಾಗಿ ಕರ್ನಾಟಕ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿತ್ತು. ರಾಜ್ಯದಲ್ಲಿ ಸುಮಾರು 30 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ವಿದ್ಯುತ್ ಬಳಕೆ ಆಗುತ್ತಿರುವುದು ಕೇವಲ 8.5 ಸಾವಿರದಿಂದ 10 ಸಾವಿರ ಮೆಗಾವ್ಯಾಟ್ ಮಾತ್ರ. ಒಟ್ಟು ವಿದ್ಯುತ್ ಉತ್ಪಾದನೆಯ ಮೂರನೇ ಎರಡು ಭಾಗದಷ್ಟು ಸೋಲಾರ್ ಮತ್ತು ಗಾಳಿಯ ಮೂಲದಿಂದ ಸಿಗುತ್ತಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದನೆಯಿಂದಾಗಿ ರಾಯಚೂರು ಉಷ್ಣವಿದ್ಯುತ್ ಸ್ಥಾವರದ ಉತ್ಪಾದನೆಯನ್ನು ಇತ್ತೀಚೆಗೆ ಸ್ಥಗಿತಗೊಳಿಸಲಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚುವರಿಯಾಗಿರುವಾಗ ಬೇರೆ ಕಡೆಯಿಂದ ವಿದ್ಯುತ್ ಖರೀದಿಸುವ ಅಗತ್ಯ ಏನಿದೆ? ಇಂತಹ ಸಂದರ್ಭದಲ್ಲಿ ವಿದ್ಯುತ್ ದರವನ್ನು ಇಳಿಸಿ ವಿದ್ಯುತ್ ಬಳಕೆಗೆ ಪ್ರೊತ್ಸಾಹ ನೀಡಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಾಗಿದೆ. ಆದರೆ ಕಳೆದ ಮೂರು ವರ್ಷಗಳಿಂದ ವಿದ್ಯುತ್ ಬಳಕೆ ಕಡಿಮೆಯಾಗುತ್ತಿದೆ. ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಯದ್ವಾತದ್ವಾ ಹೆಚ್ಚಿಸಿ ವಿದ್ಯುತ್ ಬಳಕೆದಾರರಿಗೆ ದಂಡ ವಿಧಿಸುವುದು ಸರಿ ಅಲ್ಲ. ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳು ಇಂದು ನಷ್ಟದಲ್ಲಿದ್ದರೆ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆ. ರಾಜ್ಯದ ಬಿಜೆಪಿ ಸರ್ಕಾರವು ಪ್ರತಿ ಯುನಿಟ್ಗೆ ಹೆಚ್ಚುವರಿಯಾಗಿ 50 ಪೈಸೆ ನೀಡಿ ಕೇಂದ್ರ ಸರ್ಕಾರದಿಂದ ವಿದ್ಯುತ್ ಖರೀದಿಸುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 5-6 ಸಾವಿರ ಕೋಟಿ ರೂಪಾಯಿ ಹೊರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.
ಪೋಲಾಗುತ್ತಿರುವ ಈ ಹಣವನ್ನು ಉಳಿಸಿದರೆ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳನ್ನು ನಷ್ಟದಿಂದ ಪಾರುಮಾಡಬಹುದು. ಅದಾನಿ ಮೊದಲಾದ ಕಾರ್ಪೋರೇಟ್ ಕಂಪನಿಗಳು ಹಾಗೂ ಕೇಂದ್ರದ ಗ್ರಿಡ್ಗಳಿಂದ ರಾಜ್ಯ ಸರ್ಕಾರ 38,594 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿಸುತ್ತಿದೆ. ಆದರೆ ಬಳಕೆ ಮಾಡುತ್ತಿರುವುದು ಮಾತ್ರ ಕೇವಲ 19,921 ದಶಲಕ್ಷ ಯೂನಿಟ್. ಇದಕ್ಕಾಗಿ ರಾಜ್ಯ ಸರ್ಕಾರ ₹4388 ಕೋಟಿ ಪಾವತಿಸುತ್ತಿದೆ. ಒಟ್ಟಾರೆಯಾಗಿ ₹5460 ಕೋಟಿ ಹೆಚ್ಚಿಗೆ ಪಾವತಿಸಲಾಗುತ್ತಿದೆ. ಕಷ್ಟದಲ್ಲಿರುವ ಜನರಿಂದ ಕಿತ್ತುಕೊಂಡು ಕಾರ್ಪೋರೇಟ್ ಕಂಪೆನಿಗಳನ್ನು ಉದ್ದಾರ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಅದೇ ರೀತಿ ಕೆಪಿಟಿಸಿಎಲ್ ವತಿಯಿಂದ ಸರಬರಾಜು ಮಾಡುವ ವಿದ್ಯುತ್ಗಾಗಿ ₹20,000 ಕೋಟಿ ಹೆಚ್ಚುವರಿಯಾಗಿ ವೆಚ್ಚ ಮಾಡಲಾಗಿದೆ ಎಂದು ಹೇಳಿದ್ದಾರೆ.
(Congress Leader Siddaramaiah Criticizes Karnataka Govt Decision to Hike Electricity Price)
ಇದನ್ನೂ ಓದಿ: Electricity Price Hike: ಕರ್ನಾಟಕದಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್ಸಿ ಅನುಮೋದನೆ
ಇದನ್ನೂ ಓದಿ: Save Electricity: ವಿದ್ಯುತ್ ಖರ್ಚು ಮಾಡದೇ ಎಸಿ ಬಳಸಿ; ತಿಂಗಳಿಗೆ ಸುಮಾರು 4,000 ರೂಪಾಯಿ ಉಳಿಸಿ
Published On - 10:36 pm, Wed, 9 June 21