ಬೆಂಗಳೂರು, ಮಾ.23: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ (Congress) ತಮ್ಮದೇ ಆದ ಟಾರ್ಗೆಟ್ ಲೆಕ್ಕಾಚಾರದಲ್ಲಿವೆ. ಒಂದ್ಕಡೆ ಬಿಜೆಪಿ ಚುನಾವಣಾ ಕಾರ್ಯಗಾರ ಮಾಡುತ್ತಿದ್ದರೆ, ಇತ್ತ ಕಾಂಗ್ರೆಸ್ ಗ್ಯಾರಂಟಿ ಅಸ್ತ್ರ ಹೂಡಿದೆ. ಹೋದಲ್ಲಿ ಬಂದಲ್ಲಿ ಗ್ಯಾರಂಟಿಯ ಜಪವನ್ನೇ ಮಾಡುತ್ತಿದೆ. ಶತಾಯಗತಾಯ ಲೋಕಸಭೆ ಚುನಾವಣೆ ಗೆಲ್ಲಲು ಸಮರ ಸಾರಿರುವ ಕಾಂಗ್ರೆಸ್, ಗ್ಯಾರಂಟಿ (Guarantees) ಮೂಲಕವೇ ಮತಶಿಕಾರಿಗೆ ದೊಡ್ಡ ಪ್ಲ್ಯಾನ್ ರೂಪಿಸಿದೆ.
ಗ್ಯಾರಂಟಿಯೇ ಜೀವಾಳ, ಗ್ಯಾರಂಟಿಯೇ ವರದಾನ ಎಂಬ ಮಂತ್ರದಿಂದಲೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಅಂತರದಿಂದ ಗೆಲುವು ಸಾಧಿಸಿತ್ತು. ಇದೇ ಪ್ಲ್ಯಾನ್ನಲ್ಲಿರುವ ಕಾಂಗ್ರೆಸ್, ಲೋಕಸಭೆ ಚುನಾವಣೆಯಲ್ಲೂ ಪ್ರಯೋಗಕ್ಕೆ ಮುಂದಾಗಿದೆ. ಗ್ಯಾರಂಟಿ ಸಮಿತಿ ಸದಸ್ಯರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಲು ಮುಂದಾಗಿದ್ದಾರೆ.
ಗ್ಯಾರಂಟಿ ಪ್ರಚಾರಕ್ಕೆ ಗ್ಯಾರಂಟಿ ಸಮಿತಿ ಸದಸ್ಯರು ಹಾಗೂ ಬೂತ್ ಮಟ್ಟದ ಅಧ್ಯಕ್ಷರಿಗೆ ಹೊಣೆ ನೀಡಲಾಗಿದೆ. ಮನೆ ಮನೆಗೆ ತೆರಳಿ ಗ್ಯಾರಂಟಿ ಬಗ್ಗೆ ಮನವರಿಕೆಗೆ ಸೂಚನೆ ನೀಡಲಾಗಿದೆ. ಮೋದಿ ಗ್ಯಾರಂಟಿಯಲ್ಲಿ ಯಾವುದೇ ವಿವರಗಳೇ ಇಲ್ಲ, ನಮ್ಮ ಗ್ಯಾರಂಟಿಯೇ ಗ್ಯಾರಂಟಿ ಅಂತಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್ಎಂ ರೇವಣ್ಣ ಹೇಳಿದರು.
ಕಲಬುರಗಿಯಿಂದ ರಣಕಹಳೆ ಮೊಳಗಿಸಿದ್ದ ಪ್ರಧಾನಿ ಮೋದಿಗೆ ತಿರುಗೇಟು ಕೊಡಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ಮೋದಿಗೆ ಸೆಡ್ಡು ಎಂಬಂತೆ ಸಿದ್ದರಾಮಯ್ಯ ಅವರು ಬೀದರ್ನ ಬಸವಕಲ್ಯಾಣ ಕ್ಷೇತ್ರದಲ್ಲಿ ಪ್ರಚಾರಕ್ಕಿಳಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏಪ್ರಿಲ್ 1 ರಿಂದಲೇ ಪ್ರಚಾರ ಮಾಡುವ ಸಾಧ್ಯತೆ ಇದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ, ಖರ್ಗೆ ಅವರನ್ನು ಕರೆಸುವ ಬಗ್ಗೆಯೂ ಚರ್ಚೆ ಆಗಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ನ 2ನೇ ಪಟ್ಟಿಯಲ್ಲಿ ಬಹುತೇಕ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲಾಗಿದೆ. 9 ಕ್ಷೇತ್ರದಲ್ಲಿ ರಾಜಕಾರಣಿಗಳ ಮಕ್ಕಳು, ಸಂಬಂಧಿಕರಿಗೆ ಟಿಕೆಟ್ ನೀಡಲಾಗಿದೆ. ಇದರ ಹಿಂದಿನ ಲೆಕ್ಕಾಚಾರ ಏನು ಅನ್ನೋದು ನೋಡುವ ಮುನ್ನ ಯಾಱರಿಗೆ ಟಿಕೆಟ್ ನೀಡಲಾಗಿದೆ ಅನ್ನೋದು ನೋಡೋಣ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಫಲಿತಾಂಶ ಏನೇ ಆಗಲಿ, ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆ ಉದ್ಭವಿಸಲ್ಲ: ಡಿಕೆ ಶಿವಕುಮಾರ್
ಬೆಂಗಳೂರು ದಕ್ಷಿಣದಿಂದ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಅವರಿಗೆ ಟಿಕೆಟ್ ಘೋಷಣೆಯಾದರೆ, ಚಿಕ್ಕೋಡಿಯಿಂದ ಸತೀಶ್ ಜಾರಕಿಹೊಳಿ ಪುತ್ರ ಪ್ರಿಯಾಂಕಾ ಜಾರಕಿಹೊಳಿ, ಶಿವಮೊಗ್ಗದಿಂದ ಮಧು ಬಂಗಾರಪ್ಪ ಸಹೋದರಿ ಗೀತಾ ಶಿವರಾಜ್ ಕುಮಾರ್ಗೆ ಟಿಕೆಟ್ ನೀಡಲಾಗಿದೆ. ಬಾಗಲಕೋಟೆಯಿಂದ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್, ಕಲಬುರಗಿಯಿಂದ ಮಲ್ಲಿಕಾರ್ಜುನ ಖರ್ಗೆ ಅಳಿಯ ರಾಧಾಕೃಷ್ಣ, ದಾವಣಗೆರೆಯಿಂದ ಎಸ್.ಎಸ್ ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ, ಬೆಳಗಾವಿಯಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಅಖಾಡಕ್ಕಿಳಿಸಲಾಗಿದೆ. ಬೀದರ್ನಿಂದ ಈಶ್ವರ್ ಖಂಡ್ರೆ ಪುತ್ರ ಸಾಗರ್ ಖಂಡ್ರೆಗೆ ಟಿಕೆಟ್ ಘೋಷಣೆಯಾದರೆ, ಕೊಪ್ಪಳದಿಂದ ರಾಘವೇಂದ್ರ ಹಿಟ್ನಾಳ್ ಸಹೋದರ ರಾಜಶೇಖರ್ ಹಿಟ್ನಾಳ್ ಅವರಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ ಕುಟುಂಬ ರಾಜಕಾರಣದ ಹಿಂದೆಯೂ ದೊಡ್ಡ ಅಸ್ತ್ರವೇ ಇದೆ. ಅದೇನು ಅನ್ನೋದನ್ನ ಒಂದೊಂದಾಗಿ ನೋಡೋಣ. ಕುಟುಂಬ ರಾಜಕೀಯಕ್ಕೆ ಮಣೆ ಹಾಕಿದ್ಯಾಕೆ? ಕಾಂಗ್ರೆಸ್ ಸದ್ಯದ ಸ್ಥಿತಿಯೇ ಪರಿವಾರ ರಾಜಕಾರಣಕ್ಕೆ ಮೂಲ ಕಾರಣ. ಇದು ಕಾರ್ಯಕರ್ತರ ಚುನಾವಣೆ ಅಲ್ವೇ ಅಲ್ಲ. ಪಕ್ಷ ಕಷ್ಟದಲ್ಲಿದೆ, ಸಚಿವರೇ ಸಂಕಷ್ಟಕ್ಕೆ ನೆರವಾಗಬೇಕು ಎಂಬುದು ಇದರ ಹಿಂದಿನ ಸಂದೇಶವಾಗಿದೆ.
ಬಿಜೆಪಿಯ ಆರ್ಥಿಕ ಸಾಮರ್ಥ್ಯಕ್ಕೆ ಕಾಂಗ್ರೆಸ್ ಪೈಪೋಟಿ ನೀಡುವುದು ಕಷ್ಟ. ಕಾರ್ಯಕರ್ತರಿಗೆ ಟಿಕೆಟ್ ನೀಡಿದರೆ ಆರ್ಥಿಕ ಸಮಸ್ಯೆ ಎದುರಾಗಬಹುದು. ಸಚಿವರಿಗೆ ಟಿಕೆಟ್ ನೀಡಿದರೆ ಸ್ಥಾನ ಬಿಡಬೇಕೆಂಬ ಕಾರಣಕ್ಕೆ ಸುಮ್ಮನಾಗಬಹುದು. ಸಚಿವ ಸ್ಥಾನ ಬಿಡಬೇಕು ಎಂಬ ಕಾರಣಕ್ಕೆ ಕೆಲಸ ಮಾಡದೇ ಇರಬಹುದು. ಕಾರ್ಯಕರ್ತರಿಗೆ ನೀಡಿದರೆ ಸಚಿವರು ಆಸಕ್ತಿಯಿಂದ ಕೆಲಸ ಮಾಡುವುದು ಅನುಮಾನವಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ವಿಫಲ; ಜನರಿಗೆ ಮೋದಿ ಗ್ಯಾರಂಟಿ ಮೇಲೆ ವಿಶ್ವಾಸ: ದೇವೇಂದ್ರ ಫಡ್ನವಿಸ್
ಆರ್ಥಿಕ ಶಕ್ತಿ ಬಲವಾಗಿದೆ ಅನ್ನೋದನ್ನ ಖಚಿತಪಡಿಸಿಕೊಂಡೇ ಟಿಕೆಟ್ ಹಂಚಿಕೆ ಮಾಡಲಾಗಿದೆ. ಸಚಿವರು, ಶಾಸಕರು ಕುಟುಂಬಕ್ಕೆ ಟಿಕೆಟ್ ನೀಡಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ರವಾನಿಸಿದೆ. ಕುಟುಂಬಸ್ಥರ ಸೋಲು ಗೆಲುವಿನ ಮೇಲೆ ಸಚಿವರ ಭವಿಷ್ಯವೂ ನಿಂತಿದೆ. ಕುಟುಂಬಸ್ಥರ ಅಸ್ತಿತ್ವದ ಪ್ರಶ್ನೆಯಿಂದ ಸಚಿವರು ಸ್ಪಂದನೆ ಮಾಡುತ್ತಾರೆ. ಇದೇ ಕಾರಣದಿಂದ ಉದ್ದೇಶಪೂರ್ವಕವಾಗಿ ಕುಟುಂಬಸ್ಥರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ.
ಮತ್ತೊಂದೆಡೆ ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಎಲ್ಲಾ 28 ಕ್ಷೇತ್ರಗಳನ್ನು ಗೆದ್ದುಕೊಳ್ಳಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ. ಪ್ರಚಾರ, ರೋಡ್ ಶೋ ಮತ್ತು ಸಭೆ ಆಯೋಜನೆಗೆ 28 ಕ್ಷೇತ್ರಗಳಲ್ಲಿ A, B, C ತಂತ್ರಗಾರಿಕೆ ಸೂತ್ರ ಹೆಣೆದಿದ್ದಾರೆ.
A ಕೆಟಗರಿ: ಬಿಜೆಪಿ ಪಕ್ಕಾ ಗೆಲ್ಲುವ ಕ್ಷೇತ್ರಗಳೆಂದು ವಿಂಗಡಣೆ
B ಕೆಟಗರಿ: ಬಿಜೆಪಿ ಗೆಲ್ಲಲು 50:50 ಸಾಧ್ಯತೆ ಇರುವ ಕ್ಷೇತ್ರ
C ಕೆಟಗರಿ: ರಿಸ್ಕ್ನಲ್ಲಿರುವ ಕ್ಷೇತ್ರಗಳು ಎಂದು ವರ್ಗೀಕರಣ
ಬಿಜೆಪಿ ಪಕ್ಷ ವಿಂಗಡನೆ ಮಾಡಿದ ಎಬಿಸಿ ಕೆಟಗರಿಗಳ ಪೈಕಿ ಎ ಕೆಟಗರಿಯಲ್ಲಿ 17 ಕ್ಷೇತ್ರಗಳಿವೆ. ಬಿ ಕೆಟಗರಿಯಲ್ಲಿ 6 ಕ್ಷೇತ್ರಗಳಿವೆ. ಇನ್ನು ಸಿ ಕೆಟಗರಿಯಲ್ಲಿ ಎರಡು ಕ್ಷೇತ್ರಗಳನ್ನು ಬಿಜೆಪಿ ಗುರುತಿಸಿದೆ.
ಒಟ್ಟಾರೆಯಾಗಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಗ್ಯಾರಂಟಿಗಳನ್ನೇ ಅಸ್ತ್ರ ಮಾಡಿಕೊಂಡು ಬಿಜೆಪಿಗೆ ಟಕ್ಕರ್ ಕೊಡಲು ಮುಂದಾಗಿದೆ. ಇತ್ತ, ಬಿಜೆಪಿ ಪ್ರಚಾರಕ್ಕೆ A, B, C ತಂತ್ರಗಾರಿಕೆಯ ಸೂತ್ರ ಹೆಣೆದಿದೆ. ಅದರೆ ಅದೆಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೋ ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:52 pm, Sat, 23 March 24