ಸರ್ಕಾರ ಬಿದ್ದರೆ ಬೀಳಲಿ ಜಾತಿಗಣತಿ ಜಾರಿ ಮಾಡಲೇಬೇಕು: ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ

| Updated By: ಗಣಪತಿ ಶರ್ಮ

Updated on: Oct 06, 2024 | 3:06 PM

ಜಾತಿ ಗಣತಿ ಮತ್ತು ಕರ್ನಾಟಕ ಕಾಂಗ್ರೆಸ್ ಸರ್ಕರದ ವಿಚಾರವಾಗಿ ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್ ಬೆಂಗಳೂರಿನಲ್ಲಿ ಗಂಭೀರ ಹೇಳಿಕೆ ನೀಡಿದ್ದಾರೆ. ಸರ್ಕಾರ ಪತನವಾದರೂ ತೊಂದರೆ ಇಲ್ಲ ಜಾತಿ ಗಣತಿ ಜಾರಿಯಾಗಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ. ಎಂಎಲ್​ಸಿ ಬಿಕೆ ಹರಿಪ್ರಸಾದ್ ಮಾತಿನ ಪೂರ್ಣ ವಿವರ ಇಲ್ಲಿದೆ.

ಸರ್ಕಾರ ಬಿದ್ದರೆ ಬೀಳಲಿ ಜಾತಿಗಣತಿ ಜಾರಿ ಮಾಡಲೇಬೇಕು: ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ
ಬಿಕೆ ಹರಿಪ್ರಸಾದ್
Follow us on

ಬೆಂಗಳೂರು, ಅಕ್ಟೋಬರ್ 6: ಸರ್ಕಾರ ಬಿದ್ದರೆ ಬೀಳಲಿ. ಕರ್ನಾಟಕದಲ್ಲಿ ಜಾತಿಗಣತಿ ಜಾರಿ ಮಾಡಲೇಬೇಕು ಎಂದು ಕಾಂಗ್ರೆಸ್ ಎಂಎಲ್​ಸಿ ಬಿಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜಾತಿಗಣತಿ ಜಾರಿ ವಿಚಾರ ಕಾಂಗ್ರೆಸ್​​​ ಪ್ರಣಾಳಿಕೆಯಲ್ಲೇ ಇದೆ. ಆದರೆ ಜಾತಿಗಣತಿ ಜಾರಿಗೆ ಸರ್ಕಾರ ಯಾಕೆ ಯೋಚನೆ ಮಾಡುತ್ತಿದೆ? ಮೀನಾಮೇಷ ಎಣಿಸದೆ ಮೊದಲು ಜಾತಿಗಣತಿ ಜಾರಿ ಮಾಡಲಿ ಎಂದು ಆಗ್ರಹಿಸಿದರು.

ಜಾತಿಗಣತಿ ಜಾರಿಯಿಂದ ಎಲ್ಲ ಸಮುದಾಯಗಳಿಗೆ ಅನುಕೂಲ ಆಗಲಿದೆ. ಜಾತಿಗಣತಿ ಜಾರಿಯಿಂದಲೇ ಸರ್ಕಾರ ಉರುಳುತ್ತದೆ ಎಂದಾದರೆ ಹಾಗೆಯೇ ಆಗಲಿ ಎಂದು ಹರಿಪ್ರಸಾದ್ ಹೇಳಿದ್ದಾರೆ.

ರಾಹುಲ್ ಗಾಂಧಿ ಪ್ರಣಾಳಿಕೆ ಬಗ್ಗೆ ಗೌರವ ಇರುವವರು. ಅವರು ಜಾತಿ ಗಣತಿಗೆ ಬೆಂಬಲ ಕೋಡಬೇಕು. ಕಾಂಗ್ರೆಸ್ ಪಕ್ಷದ ಪ್ರಣಾಳಿಯಲ್ಲೇ ಜಾತಿಗಣತಿ ಜಾರಿ ಬಗ್ಗೆ ಉಲ್ಲೇಖಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಕೂಡ ಆ ಬಗ್ಗೆ ಪ್ರಸ್ತಾಪಿಸಿದ್ದರು. ಪ್ರಪಂಚವೇ ಬಿದ್ದುಹೋದರೂ ಜಾತಿಗಣತಿ ಜಾರಿಯಾಗಬೇಕು ಎಂದು ರಾಹುಲ್ ಗಾಂಧಿಯವರೇ ಹೇಳಿದ್ದಾರೆ. ಅದೇ ರೀತಿ ಪ್ರಪಂಚ ತಲೆ ಕೆಳಗಾದರೆ ಆಗಲಿ, ಜಾತಿ ಜನಗಣತಿ ಜಾರಿಗೆ ತರಬೇಕು. ಸರ್ಕಾರ ಬಿದ್ದರೆ ಬಿಳಲಿ ಯಾಕೆ ಹೆದರಬೇಕು ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮುಡಾ ಸಂಕಷ್ಟದಿಂದ ಹೊರಬರಲು ಸಿದ್ದರಾಮಯ್ಯ ಪ್ರತ್ಯಸ್ತ್ರ: ಪರೋಕ್ಷವಾಗಿ ಅಹಿಂದ ಟ್ರಂಪ್ ಕಾರ್ಡ್ ಬಳಸ್ತಿರುವ ಸಿಎಂ

ಹರಿಪ್ರಸಾದ್ ಈ ಹಿಂದೆ ಕೂಡ ಜಾತಿ ಗಣತಿ ಜಾರಿಗೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ, ಸರ್ಕಾರಕ್ಕೆ ಮುಜುಗರ ತರುವಂಥ ಹೇಳಿಕೆಗಳನ್ನೂ ಅನೇಕ ಬಾರಿ ನೀಡಿದ್ದಾರೆ. ಇದೀಗ ಜಾತಿ ಗಣತಿ ಕುರಿತ ಹರಿಪ್ರಸಾದ್ ಹೇಳಿಕೆ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.

ಡಿಕೆ ಸುರೇಶ್​ಗೆ ಬಿಕೆ ಹರಿಪ್ರಸಾದ್ ಟಾಂಗ್

ಜಾತಿಗಣತಿ ಜಾರಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಹೆಜ್ಜೆ ಇಡಬೇಕು. ಒಂದು ವರ್ಷ ಕಾಯುವುದು ಉತ್ತಮ ಎಂದು ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದರು. ಇದಕ್ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದು, ಜಾತಿಗಣತಿ ವಿಚಾರ ನಮ್ಮ ಪ್ರಣಾಳಿಕೆಯಲ್ಲೇ ಇದೆ. ರಾಹುಲ್ ಗಾಂಧಿ ಕೂಡ ಇದನ್ನ ಹೇಳಿದ್ದಾರೆ. ಡಿಕೆ ಸುರೇಶ್ ಪ್ರಣಾಳಿಕೆಯ ಬಗ್ಗೆ ತಿಳಿದುಕೊಂಡು ಮಾತನಾಡಿದರೋ ಇಲ್ಲವೋ ಎಂಬುದು ಗೊತ್ತಿಲ್ಲ. ಅವರು ಪ್ರಣಾಳಿಕೆ ಬಗ್ಗೆ ತಿಳಿದುಕೊಂಡು ಮಾತನಾಡುವುದು ಒಳ್ಳೆಯದು ಎಂದು ಹರಿಪ್ರಸಾದ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:55 pm, Sun, 6 October 24